ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಮಿಡಿತದ ಕಿಂಗ್ ವಾಕಿಂಗ್

Last Updated 4 ನವೆಂಬರ್ 2018, 19:45 IST
ಅಕ್ಷರ ಗಾತ್ರ

ನಮ್ಮ ಆರೋಗ್ಯ ನಮ್ಮ ನಡಿಗೆಯಲ್ಲಿದೆ. ಇನ್ನೂ ನಿಖರವಾಗಿ ಹೇಳಬೇಕೆಂದರೆ ನಮ್ಮ ಹೃದಯದ ಆರೋಗ್ಯ ನಮ್ಮ ನಡಿಗೆಯಲ್ಲಿದೆ.

ನಡಿಗೆ ಕೇವಲ ಕಾಲಿನ ಸ್ನಾಯುಗಳನ್ನು ಬಲಗೊಳಿಸುತ್ತದೆ. ಮೀನುಖಂಡಗಳನ್ನು ಸದೃಢಗೊಳಿಸುತ್ತದೆ. ತೊಡೆಯ ಸ್ನಾಯು ಬಲಗೊಳ್ಳುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ. ಧಾವಂತವೆನಿಸದಂಥ ವೇಗ ನೀಡುತ್ತದೆ.

ಜೊತೆಗೆ ಹೃದಯಕ್ಕೂ ವ್ಯಾಯಾಮ ಮಾಡಿಸುತ್ತದೆ. ರಕ್ತವನ್ನು ಪಂಪ್‌ ಮಾಡುವ ಕ್ರಿಯೆ ಸುಲಲಿತಗೊಳ್ಳುತ್ತದೆ. ನರಗಳು ಹಿಗ್ಗುವ ಕುಗ್ಗುವ ಸಾಮರ್ಥ್ಯ ಹೆಚ್ಚುತ್ತದೆ. ಹೀಗಾಗಿ ಹೃದಯವೂ ಆರೋಗ್ಯದಿಂದಿರುತ್ತದೆ.

ನಡಿಗೆಯಿಂದಾಗಿ ದೀರ್ಘಶ್ವಾಸ ತೆಗೆದುಕೊಳ್ಳುತ್ತೇವೆ. ದೇಹಕ್ಕೆ ಅಗತ್ಯವಿರುವ ಆಮ್ಲಜನಕವೂ ದೊರೆಯುತ್ತದೆ. ಆದರೆ ಎಷ್ಟು ನಡೆಯಬೇಕು? ಹೇಗೆ ನಡೆಯಬೇಕು?

ದಿನಕ್ಕೆ 30 ನಿಮಿಷಗಳವರೆಗೆ ಸಾಮಾನ್ಯ ನಡಿಗೆ ನಿಮ್ಮದಾದರೆ ಇನ್ನಷ್ಟು ಶ್ರಮ ಪಡಬೇಕು. 20 ನಿಮಿಷಗಳ ಬೀಸುನಡಿಗೆಯಿರಬೇಕು. ನಿರಂತರವಾಗಿ 30 ನಿಮಿಷ ನಡೆಯಲಾಗದು ಎನ್ನುವವರು ಕೊನೆಯ ಪಕ್ಷ ಎದುಸಿರು ಬಂದು, ಮೈ ಬೆವೆತು ಹೋಗುವಷ್ಟಾದರೂ ನಡೆಯಬೇಕು.

ಪ್ರತಿದಿನವೂ 30 ನಿಮಿಷಕ್ಕೆ ನಿಗದಿಪಡಿಸಿಕೊಂಡಿದ್ದರೆ, ದಿನದಿನಕ್ಕೂ ನಡಿಗೆಯ ಅವಧಿ ಹೆಚ್ಚಿಸುತ್ತ ಹೋಗಿರಿ. ತೂಕ ಕಳೆದುಕೊಳ್ಳಬೇಕೆಂದು ಇಷ್ಟವಿದ್ದವರು ನಿಧಾನವಾಗಿ ಪ್ರತಿದಿನ 90 ನಿಮಿಷಗಳ ನಡಿಗೆಯನ್ನಾದರೂ ಮಾಡಬೇಕು. ಒಂದು ದಿನದ ನಡಿಗೆಯಿಂದ 150 ಕ್ಯಾಲೊರಿ ಮಾತ್ರ ಸುಡಬಹುದು. ಒಂದು ಪೌಂಡ್‌ ತೂಕ ಕಳೆದುಕೊಳ್ಳಲು ಕನಿಷ್ಠ 500 ಕ್ಯಾಲೊರಿಯಾದರೂ ಸುಡಬೇಕಾಗುತ್ತದೆ.

ಸ್ಥೂಲಕಾಯದವರು ಪ್ರತಿದಿನವೂ ನಡಿಗೆಯ ಸಮಯ ಹೆಚ್ಚಿಸುತ್ತ ಹೋಗಬೇಕು. ನಿಧಾನವಾಗಿ ಆಹಾರಕ್ರಮ ಬದಲಾಗಬೇಕು. ನಂತರ ಜೀವನಶೈಲಿಯಲ್ಲಿಯೂ ಕೆಲವು ಸುಧಾರಣೆ ತರಬೇಕು. ಆಗ ತೂಕ ನಿಯಂತ್ರಣಕ್ಕೆ ಬರುತ್ತದೆ.

ನಡಿಗೆಯಿಂದಾಗಿ ಹೃದ್ರೋಗ ಆಗದಂತೆ ತಡೆಯಬಹುದು. ಹೃದಯಾಘಾತ ಆದವರಲ್ಲಿ, ವಾಕಿಂಗ್‌ ಮಾಡುವವರಿಗೆ ಅಪಾಯದ ಪ್ರಮಾಣ ಕಡಿಮೆಯಿರುತ್ತದೆ ಎಂದು ಅಧ್ಯಯನಗಳು ಹೇಳಿವೆ.‌

ಲಘು ನಡಿಗೆ ಹೇಗೆ?

ನಡಿಗೆಯ ಅಭ್ಯಾಸವನ್ನು ಆರಂಭಿಸುವವರಿಗೆ ಇದು ಅನುಕೂಲಕರವಾಗಿದೆ. ಹೆಚ್ಚಿನ ಆಯಾಸವಾಗದಂತೆ ನಡೆಯಲಾರಂಭಿಸಬೇಕು. ದೇಹ ಹಾಗೂ ಮನಸುಗಳೆರಡೂ ನಡಿಗೆಯ ಅಭ್ಯಾಸಕ್ಕೆ ಒಗ್ಗಿಕೊಂಡ ನಂತರ ಬೀಸುನಡಿಗೆ ಆರಂಭಿಸಬಹುದು. ಆರಂಭದಲ್ಲಿಯೇ ಬೀಸುನಡಿಗೆಯನ್ನು ಕೈಗೊಂಡರೆ, ಆಯಾಸವೆನಿಸಿ, ಎದುರುಸಿರು ಬಂದು, ಮೈ ಬೆವೆತು, ಬಳಲಿಕೆಯುಂಟಾಗಿ ಮನದಲ್ಲೊಂದು ಆತಂಕ ಹಾಗೂ ಅಸಡ್ಡೆಗಳು ಮೂಡಬಹುದು.

ಯಾವಾಗ ನಡೆಯಬೇಕು..?

*ಬೆಳಗಿನ ಸಮಯ, ಇಳಿಸಂಜೆ.. ನಮ್ಮ ನೆರಳು ನಮಗಿಂತ ಉದ್ದವಿರುವ ಸಮಯದಲ್ಲಿ ನಡೆಯುವುದು ಯಾವಾಗೂ ಆರೋಗ್ಯಕರ ಅಭ್ಯಾಸವಾಗಿದೆ.

* ಊಟಕ್ಕೆ ಮುನ್ನ ನಡೆಯಬೇಕು.

* ನಡೆಯುವಾಗ ನಡಿಗೆಯತ್ತಲೇ ಗಮನವಿರಬೇಕು.

* ಬೀಸುನಡಿಗೆಯೊಟ್ಟಿಗೆ ಓಡುನಡಿಗೆಯನ್ನೂ ಅಭ್ಯಾಸ ಮಾಡಬಹುದು.

* ಸಂಗೀತ ಕೇಳುತ್ತ ನಡೆಯುವುದು ಒಳ್ಳೆಯ ಅಭ್ಯಾಸ.

* ಮನಸಿಗಾನಂದವಾಗುವ ಸಂಗೀತವನ್ನು ಕೇಳಬೇಕು.

* ನಡಿಗೆಯ ನಂತರವೆ ನೀರು ಕುಡಿಯದೇ, ಒಂದಷ್ಟು ಸುಧಾರಿಸಿಕೊಂಡು, ಉಸಿರು ನಿಧಾನಗತಿಗೆ ಮರಳಿದ ನಂತರ ನೀರುಕುಡಿಯುವುದು ಒಳ್ಳೆಯದು.

ಉಡುಗೆ ಹೇಗಿರಲಿ?

* ಆರಾಮದಾಯಕ ಉಡುಗೆ ತೊಟ್ಟಿರಬೇಕು

* ಬೆವರು ಹೀರುವಂತಿರಬೇಕು

* ಎಳೆಬಿಸಿಲಿನಲ್ಲಿ ನಡೆಯುತ್ತಿದ್ದರೆ ಸೂರ್ಯನ ಕಿರಣಗಳು ಚರ್ಮವನ್ನು ಸ್ಪರ್ಶಿಸುವಂತಿರಬೇಕು

*ಜೀನ್ಸ್‌ ಅಥವಾ ಸಿಂಥೆಟಿಕ್‌ ವಸ್ತ್ರಗಳ ಬಳಕೆ ಬೇಡ

**
ವಾರದಲ್ಲಿ ಕನಿಷ್ಠ ಎರಡೂವರೆಗಂಟೆಯ ನಡಿಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
- ಡಾ. ಗಿರೀಶ್‌ ಗೋಡ್ಬೊಲೆ, ಹೃದಯ ತಜ್ಞರು ವಿಕ್ರಮ್‌ ಆಸ್ಪತ್ರೆ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT