ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಪದ್ಮರಾಜ್‌ ಜತೆ ಒಂದು ದಿನ | ಗೆಲುವಿನ ತುಡಿತ, ಪ್ರಚಾರದ ದುಡಿತ

Published 18 ಏಪ್ರಿಲ್ 2024, 5:14 IST
Last Updated 18 ಏಪ್ರಿಲ್ 2024, 5:14 IST
ಅಕ್ಷರ ಗಾತ್ರ

ಮಂಗಳೂರು: ರಸ್ತೆಬದಿಯ ಹಸಿರ ಹೊದಿಕೆ ಕಣ್ತುಂಬಿಕೊಳ್ಳುತ್ತ ಕಾರಿನಲ್ಲಿ ಸಾಗುವಾಗ ಪದ್ಮರಾಜ್ ಕಂಗಳಲ್ಲಿ ಗೆಲುವಿನ ಆಸೆ, ಭರವಸೆ. ಹೆದ್ದಾರಿಯಲ್ಲಿ ಬಿಸಿಗಾಳಿಯನ್ನು ಸೀಳುತ್ತ ವಾಹನ ಮುನ್ನುಗ್ಗುತ್ತಿರುವಾಗಲೂ ಒಣಗಿದ ಭತ್ತದ ಗದ್ದೆಗಳ ಮಧ್ಯದಲ್ಲಿ ಸಾಗುವಾಗಲೂ ಸಮುದ್ರದ ಬದಿಯಲ್ಲಿ ತಂಗಾಳಿಯ ಸವಿ ಅನುಭವಿಸುವಾಗಲೂ ಅವರ ನಿರೀಕ್ಷೆಯ ಕಡಲಿನಲ್ಲಿ ಸಾವಿರ ಅಲೆಗಳ ಅಬ್ಬರ.

ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಪದ್ಮರಾಜ್ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪುನಃಶ್ಚೇತನ ನೀಡುವ ಆಶಯದೊಂದಿಗೆ ಮತ ಕೇಳುತ್ತಿದ್ದಾರೆ. ಮೂಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ದಿನ ಅವರ ಜೊತೆ ‘ಪ್ರಜಾವಾಣಿ’ ಪ್ರತಿನಿಧಿಯೂ ಇದ್ದರು.

ಸೂರ್ಯ ಉದಯಿಸುವ ಮೊದಲೇ ಮತ ಬೇಟೆಗೆ ಹೊರಟ ಅವರ ಭಾಷಣಗಳಲ್ಲಿ ‘ಈಚೆಗೆ ಒಂದು ತಾಸು ಮಾತ್ರ ನಿದ್ದೆ ಮಾಡುತ್ತಿದ್ದೇನೆ. ನೀವೆಲ್ಲರೂ ನನಗಾಗಿ ಸ್ವಲ್ಪ ನಿದ್ದೆ ತ್ಯಾಗ ಮಾಡಿ’ ಎಂದು ಕಾರ್ಯಕರ್ತರಿಗೆ ಮಾಡಿಕೊಂಡ ಮನವಿ ಪದೇ ಪದೇ ಕೇಳಿಬಂತು. ದೇವಸ್ಥಾನ– ದೈವಸ್ಥಾನ, ಮಸೀದಿ, ಚರ್ಚ್‌, ಕಾರ್ಮಿಕರು, ಪಕ್ಷ–ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿ, ರೋಡ್ ಶೋ, ಸಭೆ, ಗೃಹಪ್ರವೇಶ, ಬ್ರಹ್ಮಕಲಶೋತ್ಸವ ಇತ್ಯಾದಿಗಳ ಮಿಳಿತ ಅವರ ಪ್ರಚಾರದಲ್ಲಿತ್ತು.

ಕಟೀಲು ಮತ್ತು ಬಪ್ಪನಾಡು ಕ್ಷೇತ್ರಗಳಲ್ಲಿ ದುರ್ಗೆಯರ ದರ್ಶನ ಪಡೆದು, ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲಿ ಏತದಲ್ಲಿ ಸೇದಿಕೊಡುವ ‘ತಿಬಾರೆ ತೀರ್ಥ’ ಸೇವಿಸಿ ತಂಪಾದ ಅವರಿಗಾಗಿ ಬಜಪೆಯ ಸೇಂಟ್ ಜೋಸೆಫ್ಸ್ ಚರ್ಚ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆ, ಸರ್ವಧರ್ಮ ಸಮ್ಮೇಳನದಂತಿತ್ತು. ಕಾರ್ನಾಡ್‌ನ ಬಂಟರ ಭವನ, ಮೂಲ್ಕಿಯ ಬಿಲ್ಲವ ಭವನದ ಭೇಟಿಯ ನಂತರ ಮೂಡುಬಿದಿರೆಯ ‘ಲೆಕ್ಸಾ’ದಲ್ಲಿ ಕಾರ್ಮಿಕರ ಜೊತೆ ಮಾತನಾಡಿ ತೋಡಾರು ಮಸೀದಿ, ಹನುಮಾನ್ ದೇವಸ್ಥಾನ, ಅಲಂಗಾರು ಚರ್ಚ್‌ಗಳ ಭೇಟಿ ಆದಮೇಲೆ ಉಳಿದ ಸಮಯವೆಲ್ಲ ಕಾರ್ಯಕರ್ತರ ಜೊತೆ ಮಾತುಕತೆಗೆ ಮೀಸಲಾಯಿತು.

ಹಿರಿಯರ ಪಾದಗಳಿಗೆ ನಮನ: ದೇವಸ್ಥಾನ– ದೈವಸ್ಥಾನಗಳಲ್ಲಿ ನೆಲಕ್ಕೆ ಹಣೆಯಿಟ್ಟು ಪೊಡಮಟ್ಟ ಪದ್ಮರಾಜ್, ಹಿರಿಯರು ಸಿಕ್ಕಿದಾಗ ಕಾಲುಮುಟ್ಟಿ ನಮಿಸಿದರು. ನಿಧಾನಕ್ಕೆ ಕಾರು ಚಲಾಯಿಸುವಂತೆ ಚಾಲಕನಿಗೆ ಪದೇ ಪದೇ ಹೇಳುತ್ತಿದ್ದ ಅವರಲ್ಲಿ ನಿರಂತರ ಕರೆಗಳಿಗೆ ಸಾವಧಾನದಿಂದ ಉತ್ತರ ಕೊಡುವ ಸೌಜನ್ಯವಿತ್ತು. ಫೋನ್‌ನಲ್ಲಿ ರಾಜಕೀಯ ಲೆಕ್ಕಾಚಾರ, ಚುನಾವಣೆಯ ‘ಆರ್ಥಿಕ’ತೆಯ ಚರ್ಚೆ, ಉತ್ಸಾಹ ಕಳೆದುಕೊಂಡವರ ಬಗ್ಗೆ ಅಸಮಾಧಾನ ಇತ್ತು. ‘ನಮ್ಮೂರಿನ ಯಕ್ಷಗಾನಕ್ಕೆ ಬಂದು ದೇವಿಯ ಆಶೀರ್ವಾದ ಪಡೆದುಕೊಳ್ಳಿ’ ಎಂದು ಆಹ್ವಾನ ನೀಡಿದವರಿಗೆ ‘ಸಾಧ್ಯವಾದರೆ ಬರುವೆ. ಬಾರದೇ ಇದ್ದರೆ ನನಗಾಗಿ ನೀವೇ ಪ್ರಾರ್ಥಿಸಿ’ ಎಂದು ಹೇಳಿದ ಅವರು ಸಸಿಹಿತ್ಲು ದೊಡ್ಡಮನೆ ಅಗ್ಗಿದ ಕಳಿಯ ಕರ್ಕೇರ ಮೂಲಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪ್ರಾರ್ಥನೆ ಮಾಡಿ ಊಟ ಮುಗಿಸಿ ಬರುವಾಗ ತಂದೆಗೆ ಕರೆ ಮಾಡಿ ‘ಮದುವೆಗೆ ಹೋಗಿ ಬಂದ್ರಾ’ ಎಂದು ಕೇಳಲು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT