ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅಭ್ಯರ್ಥಿ ಸಂದರ್ಶನ | ಮತ ಬ್ಯಾಂಕ್ ರಾಜಕಾರಣ ಸಹಿಸಲ್ಲ: ಪ್ರಲ್ಹಾದ ಜೋಶಿ

Published : 4 ಮೇ 2024, 22:53 IST
Last Updated : 4 ಮೇ 2024, 22:53 IST
ಫಾಲೋ ಮಾಡಿ
Comments
ಪ್ರ

ಚುನಾವಣಾ ವಾತಾವರಣ ಹೇಗಿದೆ?

ಎಲ್ಲಾ ಕಡೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರಧಾನಿ ಮೋದಿ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ರೈಲ್ವೆ, ಹೆದ್ದಾರಿ ಸೇರಿ ಮೂಲಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ದೇಶದ ಸುರಕ್ಷತೆ ಮತ್ತು ಸುಭದ್ರ ಸರ್ಕಾರದ ದೃಷ್ಟಿಯಿಂದ ಜನರು ಸಮರ್ಥ ನಾಯಕತ್ವದ ನಿರೀಕ್ಷೆಯಲ್ಲಿ ಇದ್ದಾರೆ.

ಪ್ರ

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?

ಶಿಕ್ಷಣ ರಂಗದಲ್ಲಿ ಐಐಟಿ, ಐಐಐಟಿ, ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪಿಸಿದ್ದೇವೆ. ಹಲವು ಕಡೆ  ರಸ್ತೆ ನಿರ್ಮಿಸಿದ್ದೇವೆ. ಹುಬ್ಬಳ್ಳಿ– ಗದಗ, ಹುಬ್ಬಳ್ಳಿ– ಚಿತ್ರದುರ್ಗ ಆರು ಪಥ ಹೆದ್ದಾರಿ ಮಾಡಿದ್ದೇವೆ.  ಹುಬ್ಬಳ್ಳಿ, ಧಾರವಾಡ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸಿದ್ದೇವೆ. ವಂದೇಭಾರತ್‌ ರೈಲು ಓಡಿಸಿದ್ದೇವೆ. ಹುಬ್ಬಳ್ಳಿಯಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ₹ 350 ಕೋಟಿ ಕೊಡಿಸಿದ್ದೇವೆ. ಕಿಮ್ಸ್‌ ಆಸ್ಪತ್ರೆಯಲ್ಲಿ ಪಿಎಂಎಸ್‌ಎಸ್‌ವೈ ಯೋಜನೆಯಡಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದ್ದೇವೆ.

ಪ್ರ

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ನಿಮಗೆ ಅನುಕೂಲವೇ?

ದಿಂಗಾಲೇಶ್ವರ ಸ್ವಾಮೀಜಿಯವರ  ಬಗ್ಗೆ ಏನೂ ಹೇಳಲ್ಲ. ನನಗೆ ಕಾಂಗ್ರೆಸ್‌ ನೇರ ಸ್ಪರ್ಧಿ ಎಂದು ಮೊದಲಿನಿಂದಲೂ ಹೇಳಿದ್ದೇನೆ. ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಸಾಕಷ್ಟು ಮುಂದಿದೆ. ಜನ ಆಶೀರ್ವಾದಿಸುವರು ಎಂಬ ವಿಶ್ವಾಸವಿದೆ.

ಪ್ರ

ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಬಿಜೆಪಿಯು ರಾಜಕೀಯಕ್ಕೆ ಬಳಸಿಕೊಂಡಿದ್ದು ಸರಿಯೇ?

ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ನಮ್ಮ ಸ್ಪಂದನೆ, ಪ್ರತಿಸ್ಪಂದನೆಗೆ ನೀವು ರಾಜಕೀಯ ಎನ್ನುವುದಾರೆ, ಅದನ್ನೇ 10 ಸಲ ಮಾಡುತ್ತೇವೆ.  ವಿದ್ಯಾರ್ಥಿನಿಯ ತಂದೆ ಸ್ವತಃ ಕಾಂಗ್ರೆಸ್‌ ಕಾರ್ಯಕರ್ತ. ಆದರೆ, ಅವರೇ ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲ್ಲ ಎಂದು ಹೇಳಿದ್ದಾರೆ. ನೇಹಾಳನ್ನು ಇಸ್ಲಾಂಗೆ ಪರಿವರ್ತಿಸಲು  ಪ್ರಯತ್ನಿಸಲಾಯಿತು. ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲ್ಲಲಾಯಿತು ಎಂದು ತಂದೆಯೇ ಆರೋಪಿಸಿದ್ದಾರೆ. ಇದು ಗಂಭೀರ ಆರೋಪ ಅಲ್ಲವೇ? ಮತ ಬ್ಯಾಂಕ್ ರಾಜಕಾರಣ ಕಾಂಗ್ರೆಸ್‌ ಮಾಡಿದ್ದರಿಂದ ಜನ ಮುಗಿ ಬಿದ್ದರು.

ಪ್ರ

ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿಗೆ ಎಷ್ಟು?

ಕಳೆದ ಸಲ 25 ಕ್ಷೇತ್ರಗಳನ್ನು ಗೆದ್ದಿದ್ದೆವು. ಈ ಸಲವೂ ಅಷ್ಟೇ ಸ್ಥಾನ ಗೆಲ್ಲುತ್ತೇವೆ. ಒಂದು ಸ್ಥಾನ ಹೆಚ್ಚು ಆಗುವ ವಿಶ್ವಾಸವಿದೆ.

ಪ್ರ

ಮಹದಾಯಿ ಯೋಜನೆ ಭರವಸೆಗಳ ಗೆರೆ ದಾಟಿ ಜಾರಿಯಾಗುವುದು ಯಾವಾಗ?

ಮಹದಾಯಿ ಯೋಜನೆ ಯೋಜನೆ ಪ್ರಸ್ತಾಪಿಸಿದ್ದೇ ನಾನು. ಕಾಂಗ್ರೆಸ್‌ನವರು ಎತ್ತಿರಲಿಲ್ಲ. 2009ರಲ್ಲಿ ಬಿ.ಎಸ್‌. ಯಡಿಯೂರಪ್ಪ  ಅವರು ಮುಖ್ಯಮಂತ್ರಿಯಾಗಿದ್ದಾಗ ಅನಂತಕುಮಾರ್‌ ಜೊತೆ ಸೇರಿ ಮನಮೋಹನ್‌ ಸಿಂಗ್‌ ಅವರನ್ನು ಭೇಟಿಯಾಗಿ ಈ ಯೋಜನೆಗೆ ಅನುಮೋದನೆ ನೀಡುವಂತೆ ಕೋರಿದ್ದೆವು. ಆದರೆ ಅವರು ಜಲ ನ್ಯಾಯಮಂಡಳಿಗೆ ನೀಡಿ ಕೈತೊಳೆದುಕೊಂಡರು. ನಂತರ ನಾವು ಅಧಿಕಾರಕ್ಕೆ ಬಂದ ಬಳಿಕ ಜಲಮಂಡಳಿಗೆ ಸಿಬ್ಬಂದಿ ಕಚೇರಿ ನೀಡಿದೆವು. ವರದಿ ಪಡೆದು ಅಧಿಸೂಚನೆ ಹೊರಡಿಸಿದೆವು. ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಿದೆ. ರಾಜ್ಯ ಸರ್ಕಾರ ಕಳುಹಿಸಿದ್ದ ವಿಸ್ತೃತ ಯೋಜನಾ ವರದಿಗೆ  (ಡಿಪಿಆರ್‌) ಕೇಂದ್ರದಿಂದ ಒಪ್ಪಿಗೆ ಕೊಡಿಸಿದೆ. ಯೋಜನಾ ಪ್ರದೇಶದಲ್ಲಿ 55 ಹೆಕ್ಟೇರ್‌ ದಟ್ಟ ಅರಣ್ಯ ಇದೆ. ಹುಲಿಗಳ ತಾಣವೂ ಇದೆ. ಹುಲಿಗಳ  ರಕ್ಷಣೆ ಹೇಗೆ ಎಂಬುದಕ್ಕೆ ವನ್ಯಜೀವಿ ಮಂಡಳಿಗೆ (ವೈಲ್ಡ್‌ ಲೈಫ್‌ ಬೋರ್ಡ್‌) ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರ ಉತ್ತರ ಕೊಟ್ಟಿದೆಯಂತೆ. ಇಷ್ಟರಲ್ಲಿಯೇ ಅನುಮೋದನೆ ಸಿಗಲಿದೆ.

ಪ್ರ

ಕ್ಷೇತ್ರದ ಲಿಂಗಾಯತ ನಾಯಕರನ್ನು ನೀವು ಮೂಲೆಗುಂಪು ಮಾಡಿದೀರಿ ಎಂಬ ಆರೋಪ ನಿಮ್ಮ ಮೇಲಿದೆಯಲ್ಲ?

ನನ್ನ ಸಾರ್ವಜನಿಕ ಬದುಕು ಶುದ್ಧವಿದೆ. ನೈತಿಕವಾಗಿ ಹಾಗೂ ಭ್ರಷ್ಟಾಚಾರ ವಿರೋಧಿಸುವುದರಲ್ಲಿ ನಾನು ಕಟ್ಟುನಿಟ್ಟು. ನನ್ನ ವಿರೋಧಿಸಲು ವಿಷಯಗಳೇ ಇರದ ಕಾರಣ ಜಾತಿ ಆಧರಿಸಿ ಆರೋಪಿಸುತ್ತಾರೆ. ನನ್ನ ಲೋಕಸಭಾ ಕ್ಷೇತ್ರದಲ್ಲಿ ಎಂಟು ಮಂದಿ ಶಾಸಕರಿದ್ದು ನಾಲ್ವರು 4 ಬಿಜೆಪಿಯವರು ಇದ್ದಾರೆ. ಎಲ್ಲರೂ ಲಿಂಗಾಯತರು ಇದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT