ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಪರಿಚಯ: ರಾಜಸ್ಥಾನದ ಚಿತ್ತೋರ್‌ಗಢ

Published 22 ಏಪ್ರಿಲ್ 2024, 1:20 IST
Last Updated 22 ಏಪ್ರಿಲ್ 2024, 1:20 IST
ಅಕ್ಷರ ಗಾತ್ರ

ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿರುವ ಚಿತ್ತೋರ್‌ಗಢ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ತುರುಸಿನ ಸ್ಪರ್ಧೆಗೆ ವೇದಿಕೆ ಅಣಿಯಾಗಿದೆ. ರಜಪೂತರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕಳೆದೆರಡು ಚುನಾವಣೆಗಳಲ್ಲಿ ಗೆದ್ದಿರುವ ಚಂದ್ರಪ್ರಕಾಶ್‌ ಜೋಶಿ ಅವರನ್ನೇ ಬಿಜೆಪಿಯು ಮೂರನೇ ಬಾರಿ ಕಣಕ್ಕಿಳಿಸಿದೆ. ಇವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್‌, ಮಾಜಿ ರಾಜ್ಯ ಸಚಿವ ಉದಯ್‌ಲಾಲ್‌ ಅಂಜನಾ ಅವರನ್ನು ಅಖಾಡಕ್ಕಿಳಿಸಿದೆ.

ಕೇಂದ್ರ ಸಚಿವ ಪರಷೋತ್ತಮ ರೂಪಾಲ ಅವರು ಈಚೆಗೆ ರಜಪೂತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ರಜಪೂತರು, ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವುದರಿಂದ ಈ ಬಾರಿ ಕಣವು ತೀವ್ರ ಕುತೂಹಲ ಮೂಡಿಸಿದೆ ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಾರೆ.

2019ರ ಚುನಾವಣೆಯಲ್ಲಿ ಚಂದ್ರಪ್ರಕಾಶ್‌ ಜೋಶಿ ಅವರು 5,76,247 ಮತಗಳ ಅಂತರದಿಂದ ಕಾಂಗ್ರೆಸ್‌ನ ಗೋಪಾಲ್‌ಸಿಂಗ್‌ ಶೆಖಾವತ್‌ ಅವರನ್ನು ಪರಾಭವಗೊಳಿಸಿದ್ದರು.

2009ರಲ್ಲಿ ಇಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಆರ್‌ಎಸ್‌ಎಸ್‌ ಹಿನ್ನೆಲೆಯ ಚಂದ್ರಪ್ರಕಾಶ್‌ ಜೋಶಿ ಅವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಜ್ಯ ಮಟ್ಟದಲ್ಲಿ ಹಾಗೂ ಸ್ಥಳೀಯವಾಗಿ ಪ್ರಭಾವಿ ಮುಖಂಡರಾಗಿದ್ದಾರೆ. ಉದಯ್‌ಲಾಲ್‌ ಅಂಜನಾ ಅವರು ಈ ಹಿಂದೆ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ರೈತರ ಸಮಸ್ಯೆಗಳು, ನಿರುದ್ಯೋಗ, ಹಣದುಬ್ಬರ ಮೊದಲಾದ ವಿಷಯಗಳನ್ನು ಕಾಂಗ್ರೆಸ್‌ ಅಭ್ಯರ್ಥಿಯು ಪ್ರಮುಖ ಚುನಾವಣಾ ವಿಷಯವನ್ನಾಗಿಸಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದಿರಿಸಿ ಬಿಜೆಪಿ ಅಭ್ಯರ್ಥಿ ಮತಯಾಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT