ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಚರಿತೆ: ಬಾಗಲಕೋಟೆ | ಎರಡು ಚುನಾವಣೆ ನಂತರ ಮತ್ತೆ ‘ಕೈ’ ಮೇಲು

ರೋಣದ ಆರ್‌.ಎಸ್‌. ಪಾಟೀಲರಿಗೆ ಜಯ
Published 17 ಏಪ್ರಿಲ್ 2024, 4:54 IST
Last Updated 17 ಏಪ್ರಿಲ್ 2024, 4:54 IST
ಅಕ್ಷರ ಗಾತ್ರ

ಬಾಗಲಕೋಟೆ: ಎರಡು ಚುನಾವಣೆಗಳಲ್ಲಿ ಸೋಲನುಭವಿಸಿದ್ದ ಕಾಂಗ್ರೆಸ್‌ ಮತ್ತೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮೇಲೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಪತ್ಯ ಸ್ಥಾಪಿಸಿತು. ಜೊತೆಗೆ 1952ರಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವ್ಯಕ್ತಿಯೊಬ್ಬರಿಗೆ ಸ್ಪರ್ಧಿಸಲು ಅವಕಾಶ ದೊರೆತು, ಆಯ್ಕೆಯಾದರು.

ರಾಷ್ಟ್ರ ರಾಜಕಾರಣದಲ್ಲಿ ಆದ ರಾಜಕೀಯ ಸ್ಥಿತ್ಯಂತರಗಳ ಪರಿಣಾಮ 1996ರಿಂದ 99ರ ಅವಧಿಯಲ್ಲಿ ಲೋಕಸಭೆಗೆ ಮೂರು ಚುನಾವಣೆಗಳು ಜರುಗಿದವು. ಸತತ ಹತ್ತು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ 1996 ಹಾಗೂ 1998ರಲ್ಲಿ ಸತತ ಎರಡು ಸೋಲುಗಳನ್ನು ಕಂಡಿತ್ತು. 1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಗೆಲುವಿನತ್ತ ಮುಖ ಮಾಡಿತು.

ಈ ಬಾರಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗೆ ಒಟ್ಟಿಗೆ ಚುನಾವಣೆಯಾಯಿತು. ರಾಜ್ಯದಲ್ಲಿ ಅಂದು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಪಾಂಚಜನ್ಯ ಎಂಬ ಘೋಷವಾಕ್ಯದಿಂದ ಚುನಾವಣೆಗೆ ಮುಂದಾಗಿತ್ತು. ಜನತಾ ಪರಿವಾರದಲ್ಲಿ ಉಂಟಾಗಿದ್ದ ಆಂತರಿಕ ಕಚ್ಚಾಟದಿಂದ ಭ್ರಮನಿರಸನಗೊಂಡಿದ್ದ ಜನತೆ ಲೋಕಸಭೆಗೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸುವುದರ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಹೊರತು ಪಡಿಸಿ ಲೋಕಸಭೆ ವ್ಯಾಪ್ತಿಯ ಉಳಿದ‌ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.

ವಿಜಯಪುರ ದಕ್ಷಿಣ ಕ್ಷೇತ್ರ ಹಾಗೂ ನಂತರದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿದ್ದ ರೋಣ ವಿಧಾನಸಭೆ ವ್ಯಾಪ್ತಿಯವರು ಮತ ಚಲಾಯಿಸುತ್ತಿದ್ದರೆ ಹೊರತು, ಟಿಕೆಟ್‌ ಪಡೆಯಲು ಸಾಧ್ಯವಾಗಿರಲಿಲ್ಲ. ಹಲವಾರು ನಾಯಕರು ಪ್ರಯತ್ನ ಪಟ್ಟಿದ್ದರೂ ಯಶಸ್ವಿಯಾಗಿರಲಿಲ್ಲ. ಎರಡು ಬಾರಿ ಸೋತಿದ್ದ ಸಿದ್ದು ನ್ಯಾಮಗೌಡ ಮತ್ತೆ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಸತತವಾಗಿ ಸೋತಿದ್ದರಿಂದ ಹೈಕಮಾಂಡ್‌ಗೆ ನ್ಯಾಮಗೌಡರತ್ತ ಒಲವಿರಲಿಲ್ಲ. ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಪ್ರಭಾವಿ ಕುಟುಂಬದ ಕಟ್ಟಾ ಕಾಂಗ್ರೆಸ್ಸಿಗರಾಗಿದ್ದ ಆರ್.ಎಸ್.ಪಾಟೀಲ ಅವರು ಅಚ್ಚರಿಯಂಬಂತೆ ಟಿಕೆಟ್‌ ನೀಡಲಾಯಿತು.

ಆರ್.ಎಸ್.ಪಾಟೀಲ ಆಯ್ಕೆಗೆ ಜಿಲ್ಲೆಯ ನಾಯಕರು ಅಪಸ್ವರ ಎತ್ತಲಿಲ್ಲ. ಎಲ್ಲ ಸಮುದಾಯದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರಲ್ಲದೆ, ಆರ್ಥಿಕವಾಗಿಯೂ ಸಬಲರಾಗಿದ್ದರು. ಮುಖಂಡರು ಹಾಗೂ ಕಾರ್ಯಕರ್ತರ ಶ್ರಮದ ಫಲವಾಗಿ ಕಾಂಗ್ರೆಸ್‌ ಮತ್ತೆ ಗೆಲುವು ಸಾಧಿಸಿತು.

ಒಂದೇ ವರ್ಷದ ಅವಧಿಯಲ್ಲಿ ಎದುರಾದ ಚುನಾವಣೆಯಲ್ಲಿ ಹಾಲಿ ಸಂಸದರಾಗಿ, ಜೆಡಿಯು ನಿಂದ ಸ್ಪರ್ಧಿಸಿದ್ದ ಅಜಕುಮಾರ ಸರನಾಯಕ ಅವರಿಗೆ ಸೋಲು ಎದುರಾಯಿತು. ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆದಿದ್ದರಿಂದ ಆಡಳಿತದಲ್ಲಿದ್ದ ಜನತಾ ಪರಿವಾರ ವಿರೋಧದ ಅಲೆ ಎದುರಿಸುತ್ತಿತ್ತು. ಜನತಾ ಪರಿವಾರದ ನಾಯಕರ ನಡುವಿನ ಕಿತ್ತಾಟ, ಪಕ್ಷದ ವಿಭಜನೆ ಕಾರಣದಿಂದ ಅವರಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಆರ್‌.ಎಸ್‌. ಪಾಟೀಲ ಸ್ವಕ್ಷೇತ್ರವಾದ ರೋಣದಲ್ಲಿ 30 ಸಾವಿರ ಮತಗಳ ಲೀಡ್ ಪಡೆದಿದ್ದರು.

ಅಜಯಕುಮಾರ ಸರನಾಯಕ
ಅಜಯಕುಮಾರ ಸರನಾಯಕ

76434 ಮತಗಳ ಗೆಲುವು

ಬಾಗಲಕೋಟೆ: ಎರಡು ಚುನಾವಣೆಗಳ ನಂತರ ಕಾಂಗ್ರೆಸ್‌ಗೆ ಆರ್.ಎಸ್‌. ಪಾಟೀಲ ಗೆಲುವು ತಂದುಕೊಟ್ಟರು. ಕಣದಲ್ಲಿ ಮೂವರೇ ಅಭ್ಯರ್ಥಿಗಳಿದ್ದರು. 783829 (ಶೇ69.49) ಮತಗಳು ಚಲಾವಣೆಯಾಗಿದ್ದವು. ಆರ್.ಎಸ್.ಪಾಟೀಲ 378488 ಮತಗಳನ್ನು ಪಡೆದಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ ಅಜಯಕುಮಾರ ಸರನಾಯಕ 302054 ಮತಗಳನ್ನು ಪಡೆದು 76434 ಮತಗಳ ಅಂತರಿಂದ ಸೋತಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಶೋಕ ಗಾಣಿಗೇರ 72422 ಮತಗಳನ್ನು ಮಾತ್ರ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT