ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಿನ್ನೋಟ; ಜಾಲಪ್ಪ, ಕೃಷ್ಣರಾವ್ ಗರಿಷ್ಠ ಗೆಲುವು

ಕ್ಷೇತ್ರದಲ್ಲಿ ನಡೆದಿವೆ 12 ಚುನಾವಣೆ
Published 31 ಮಾರ್ಚ್ 2024, 6:45 IST
Last Updated 31 ಮಾರ್ಚ್ 2024, 6:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು 1977ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಕ್ಷೇತ್ರಕ್ಕೆ ಅಲ್ಲಿಂದ 2019ರವರೆಗೆ 12 ಚುನಾವಣೆಗಳು ನಡೆದಿವೆ. ಈ 12ರಲ್ಲಿ 10 ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಒಮ್ಮೆ ಜನತಾದಳ, ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.  

ಹಿಂದುಳಿದ ವರ್ಗಗಳ ನಾಯಕ ಎನಿಸಿದ್ದ ಆರ್‌.ಎಲ್.ಜಾಲಪ್ಪ ಮತ್ತು ವಿ.ಕೃಷ್ಣರಾವ್ ಈ ಕ್ಷೇತ್ರದಲ್ಲಿ ಗರಿಷ್ಠ ಬಾರಿ ಗೆಲುವು ಸಾಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಆರ್‌.ಎಲ್.ಜಾಲಪ್ಪ ಅವರ ‘ಶಿಷ್ಯ’ರು ಇಂದಿಗೂ ವಿವಿಧ ರಾಜಕೀಯ ಪಕ್ಷಗಳಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 

‘ತುರ್ತು ಪರಿಸ್ಥಿತಿ’ಯ ಸಂಕೋಲೆಯಿಂದ ದೇಶ ಹೊರ ಬಂದ ಬಳಿಕ 1977ರಲ್ಲಿ ಚುನಾವಣೆಯ ಕಾವು ದೇಶದಾದ್ಯಂತ ವ್ಯಾಪಿಸಿತ್ತು. ಆಗ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ. ಕೃಷ್ಣಪ್ಪ ಅವರು ಭಾರತೀಯ ಲೋಕ ದಳದ ಅಭ್ಯರ್ಥಿ ಜಿ.ನಾರಾಯಣಗೌಡ ಅವರನ್ನು ಪರಾಭವಗೊಳಿಸಿ ಗೆಲುವಿನ ನಗೆ ಚೆಲ್ಲಿದ್ದರು.

ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದ ಇಂದಿರಾ ಗಾಂಧಿಯವರಿಗೆ 1977ರ ಲೋಕಸಭಾ ಚುನಾವಣೆಯಲ್ಲಿ ಮತದಾರ ಗಂಭೀರ ರಾಜಕೀಯ ಆಘಾತ ನೀಡಿದ.

ನಂತರ ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದ ಜಯಪ್ರಕಾಶ್‌ ನಾರಾಯಣ್‌ ಅವರ ಚಿಂತನೆಯ ಪ್ರಪ್ರಥಮ ಕಾಂಗ್ರೆಸ್ಸೇತರ, ಜನತಾ ಪಕ್ಷ ಸರ್ಕಾರ ಪರಸ್ಪರ ಸೈದ್ಧಾಂತಿಕ ಸಂಘರ್ಷದಿಂದ ಕೇವಲ ಮೂರು ವರ್ಷಗಳಲ್ಲಿ ಪತನಗೊಂಡಿತು.

ಆ ಪರಿಣಾಮ, 1980ರಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ಅನಿವಾರ್ಯ ವಾಗಿತ್ತು. ಇಂದಿರಾ ಗಾಂಧಿ ಜತೆಗಿನ ವೈಮನಸ್ಸಿನಿಂದಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರು ರಾಜ್ಯದಲ್ಲಿ ಕಾಂಗ್ರೆಸ್‌ (ಯು) ಪಕ್ಷ ಕಟ್ಟಿದರು.  1980ರ ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ಇಂದಿರಾ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತವಾಯಿತು. ಅರಸು ನೇತೃತ್ವದ ಕಾಂಗ್ರೆಸ್ ಸೋಲು ಅನುಭವಿಸಿತು. ಆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಧುಗಿರಿಯ ಮುನ್ಸಿಫಲ್‌ನ ಮಾಜಿ ಅಧ್ಯಕ್ಷ ಎಸ್.ಎನ್.ಪ್ರಸನ್ನ ಕುಮಾರ್ ಅವರು ಕಾಂಗ್ರೆಸ್‌ (ಐ) ಅಭ್ಯರ್ಥಿಯಾಗಿ 2,34,172 ಮತಗಳನ್ನು ಗಳಿಸುವ ಮೂಲಕ  ಗೆಲುವು ದಾಖಲಿಸಿದ್ದರು.

ಆ ಚುನಾವಣೆಯಲ್ಲಿ ಪ್ರಸನ್ನಕುಮಾರ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಅರಸು ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ.ಕೃಷ್ಣಪ್ಪ ಕೇವಲ 67 ಸಾವಿರ ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಜನತಾ ಪಕ್ಷದ ಅಭ್ಯರ್ಥಿ ಲಕ್ಷ್ಮಿ ನರಸಿಂಹಯ್ಯ  87 ಸಾವಿರ ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಕಾಯ್ದುಕೊಂಡಿದ್ದರು. ಮುಂದಿನ ಚುನಾವಣೆಗಳಲ್ಲಿ ಪ್ರಸನ್ನಕುಮಾರ್‌ ಅವರು ವೈಯಕ್ತಿಕ ಕಾರಣಗಳಿಗಾಗಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರು.

1984ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ವಿ.ಕೃಷ್ಣರಾವ್ ಮತ್ತು ಜನತಾದಳದಿಂದ ಆರ್‌.ಎಲ್.ಜಾಲಪ್ಪ ಪ್ರತಿಸ್ಪರ್ಧಿಯಾದರು. ಈ ಚುನಾವಣೆಯೂ ಸೇರಿದಂತೆ 1989 ಮತ್ತು 1991ರ ಲೋಕಸಭಾ ಚುನಾವಣೆಯಲ್ಲಿ ವಿ.ಕೃಷ್ಣರಾವ್ ಕಾಂಗ್ರೆಸ್‌ನಿಂದ ಗೆಲುವು ಕಂಡರು. 

ಜಾಲಪ್ಪ ಪರ್ವ: 1996ರ ಲೋಕಸಭಾ ಚುನಾವಣೆಯಲ್ಲಿ ಜನತದಳದ ಅಭ್ಯರ್ಥಿ ಆರ್‌.ಎಲ್.ಜಾಲಪ್ಪ ಮತ್ತು ಕಾಂಗ್ರೆಸ್‌ನ ವಿ.ಮುನಿಯಪ್ಪ ಮುಖಾಮುಖಿಯಾದರು. ಮುನಿಯಪ್ಪ ಅವರನ್ನು 16,814 ಮತಗಳಿಂದ ಜಾಲಪ್ಪ ಸೋಲಿಸಿದರು. ಇಲ್ಲಿಂದ ಜಾಲಪ್ಪ ಅವರ ರಾಜಕೀಯ ಪರ್ವ ಆರಂಭವಾಯಿತು.

ನಂತರ ಬದಲಾದ ರಾಜಕೀಯ ಚಿತ್ರಣದಲ್ಲಿ ಜಾಲಪ್ಪ ಅವರು ಕಾಂಗ್ರೆಸ್ ಸೇರಿದರು. 1998ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಧುಮುಕಿದರು. 1998, 1999 ಮತ್ತು 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. ಹೀಗೆ ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ದಾಖಲೆ ಅವರದ್ದಾಗಿದೆ. 

ನಂತರ ರಾಜಕೀಯ ನಿವೃತ್ತಿ ಘೋಷಿಸಿದರು. ಈ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರನ್ನು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಚಿಕ್ಕಬಳ್ಳಾಪುರಕ್ಕೆ ಕರೆ ತಂದರು.

2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಮೊಯಿಲಿ ಗೆಲುವು ಸಾಧಿಸಿದರು. ಕೇಂದ್ರ ಸಚಿವರೂ ಆದರು. 2019ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರ ವಿರುದ್ಧ ಸೋತರು. ಬಚ್ಚೇಗೌಡ ಅವರು ಮೊದಲ ಬಾರಿಗೆ ಸಂಸದರಾಗುವ ಮೂಲಕ ಬಿಜೆಪಿಗೂ ಗೆಲುವು ತಂದುಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT