ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ದೇಶ–ವಿದೇಶಗಳ ಗಮನ ಸೆಳೆದಿದ್ದ ಚಿಕ್ಕಮಗಳೂರು ಕ್ಷೇತ್ರ

1978ರಲ್ಲಿ ಇಂದಿರಾ ಗಾಂಧಿ ಸ್ಪರ್ಧೆ: ಚಿಕ್ಕಮಗಳೂರಿನತ್ತ ರಾಷ್ಟ್ರ ನಾಯಕರ ದಂಡು
Published 14 ಏಪ್ರಿಲ್ 2024, 7:00 IST
Last Updated 14 ಏಪ್ರಿಲ್ 2024, 7:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: 1978ನೇ ಇಸವಿ ಚಿಕ್ಕಮಗಳೂರು ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ ವರ್ಷ. ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದರು. ಇಡೀ ದೇಶ ಮಾತ್ರವಲ್ಲ, ಹಲವು ದೇಶಗಳ ಗಮನವನ್ನು ಚಿಕ್ಕಮಗಳೂರು ಸೆಳೆದಿತ್ತು.

1977ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಡಿ.ಬಿ.ಚಂದ್ರೇಗೌಡ ಗೆಲುವು ಸಾಧಿಸಿದ್ದರು. ರಾಯಬರೇಲಿಯಿಂದ ಸ್ಪರ್ಧೆ ಮಾಡಿದ್ದ ಇಂದಿರಾ ಗಾಂಧಿ ಸೋಲು ಕಂಡಿದ್ದರು. ಬೇರೆ ಕ್ಷೇತ್ರದಿಂದ ನಿಲ್ಲಿಸಿ ಗೆಲ್ಲಿಸುವ ಬಗ್ಗೆ ಕಾಂಗ್ರೆಸ್ ಒಲವು ತೋರಿತ್ತು. ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ್ ಅರಸು ಅವರು ಕರ್ನಾಟಕದಿಂದಲೇ ಸ್ಪರ್ಧೆ ಮಾಡಲು ಕರೆ ತಂದರು. ಸುರಕ್ಷಿತ ಕ್ಷೇತ್ರಗಳ ಹುಡುಕಾಟದಲ್ಲಿ ಚಿಕ್ಕಮಗಳೂರು ಕ್ಷೇತ್ರ ಅತ್ಯಂತ ಸುರಕ್ಷಿತ ಎನಿಸಿ ಸ್ಪರ್ಧೆಗೆ ಇಂದಿರಾ ಗಾಂಧಿ ನಿರ್ಧರಿಸಿದ್ದರು.

ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದ ಈ ಜಿದ್ದಾಜಿದ್ದಿನ ಚುನಾವಣೆ ಇದಾಗಿತ್ತು. ಕಾಂಗ್ರೆಸ್‌ನಿಂದ ಇಂದಿರಾ ಗಾಂಧಿ, ಜನತಾ ಪಕ್ಷದಿಂದ ವೀರೇಂದ್ರ ಪಾಟೀಲ, ಪಕ್ಷೇತರವಾಗಿ 26 ಮಂದಿ ಸ್ಪರ್ಧಿಸಿದ್ದರು. 

ಈ ಚುನಾವಣೆಯಲ್ಲಿ ಇಂದಿರಾ ವಿರುದ್ಧ ಡಾ.ರಾಜಕುಮಾರ್‌ ಅವರನ್ನು ಕಣಕ್ಕಿಳಿಸಲು ಜನತಾ ಪಕ್ಷದ ನೇತಾರರು ಪ್ರಯತ್ನಿಸಿದ್ದರು. ಆದರೆ, ಡಾ.ರಾಜಕುಮಾರ್‌ ಅವರು ರಾಜಕೀಯ ಪ್ರವೇಶವನ್ನು ನಿರಾಕರಿಸಿದ್ದರು. ಕಡಿದಾಳ್‌ ಮಂಜಪ್ಪ ಅವರನ್ನು ನಿಲ್ಲಿಸುವ ಪ್ರಯತ್ನ ನಡೆದಿತ್ತು ಎಂಬುದನ್ನು ಚಿಕ್ಕಮಗಳೂರಿನ ಜನ ನೆನಪಿಸಿಕೊಳ್ಳುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಬೀರೂರು, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರಗಳು ಆಗಿನ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಗೊಂಡಿತ್ತು. ಎಂಟು ಕ್ಷೇತ್ರಗಳ ಪೈಕಿ ಕಡೂರು ವಿಧಾನಸಭಾ ಕ್ಷೇತ್ರವೊಂದರಲ್ಲಿ ಜನತಾ ಪಕ್ಷದ ಶಾಸಕ ಕೆ.ಎಂ.ತಮ್ಮಯ್ಯ ಇದ್ದರು. ಅವರನ್ನು ಬಿಟ್ಟರೆ ಉಳಿದ ಏಳೂ ಕ್ಷೇತ್ರಗಳಲ್ಲಿ ಇಂದಿರಾ ಕಾಂಗ್ರೆಸ್‌ನ ಶಾಸಕರು ಇದ್ದರು. ಕ್ಷೇತ್ರದಲ್ಲಿ ಒಟ್ಟು 5,34,676 ಮತದಾರರು ಇದ್ದರು.

ಕಾಂಗ್ರೆಸ್‌ ಮತ್ತು ಜನತಾ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರೆಲ್ಲರೂ ಚಿಕ್ಕಮಗಳೂರಿನಲ್ಲಿ ಬೀಡುಬಿಟ್ಟಿದ್ದರು. ಹಳ್ಳಿ–ಹಳ್ಳಿಗಳನ್ನು ತಿರುಗಿ ಪ್ರಚಾರ ಭಾಷಣ ಮಾಡಿದ್ದರು. ರಾಷ್ಟ್ರ ನಾಯಕರನ್ನು ನೋಡಲು ಜನ ಸಾವಿರ–ಸಾವಿರ ಸಂಖ್ಯೆಯಲ್ಲಿ ಸೇರುತ್ತಿದ್ದರು. ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿ ಜನರಿಗೆ ಪಕ್ಷದ ಮುಖಂಡರು ತಲುಪಿಸುತ್ತಿದ್ದರು ಎಂಬುದನ್ನು ಸ್ಥಳೀಯರು ಆ ದಿನಗಳನ್ನು ಮೆಲಕು ಹಾಕುತ್ತಾರೆ.

1978ರ ನವೆಂಬರ್‌ 5ರಂದು ಮತದಾನ ನಡೆದಿತ್ತು. ಚುನಾವಣೆಯಲ್ಲಿ ಇಂದಿರಾ ಗಾಂಧಿ ಜಯಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ವೀರೇಂದ್ರ ಪಾಟೀಲ್‌ ಅವರನ್ನು 77,333 ಮತಗಳ ಅಂತರದಿಂದ ಸೋಲಿಸಿದ್ದರು. ಒಟ್ಟು 28 ಅಭ್ಯರ್ಥಿಗಳಲ್ಲಿ 26 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಠೇವಣಿ ಕಳೆದುಕೊಂಡವರಲ್ಲಿ 18 ಅಭ್ಯರ್ಥಿಗಳು ಪಡೆದಿದ್ದ ತಲಾ ಮತಗಳು ಮೂರಂಕಿ ದಾಟಿರಲಿಲ್ಲ. 8 ಅಭ್ಯರ್ಥಿಗಳು ಗಳಿಸಿದ ತಲಾ ಮತಗಳು ನಾಲ್ಕಂಕಿ ದಾಟಿರಲಿಲ್ಲ.

ವೀರೇಂದ್ರ ಪಾಟೀಲ್‌
ವೀರೇಂದ್ರ ಪಾಟೀಲ್‌
ಇಂದಿರಾ ನೋಡಲು ಮುಗಿ ಬೀಳುತ್ತಿದ್ದ ಜನ
ಕಡೂರು: ಪ್ರಚಾರ ಸಂದರ್ಭದಲ್ಲಿ ಕಡೂರಿನ ಪ್ರವಾಸಿ ಮಂದಿರದಲ್ಲಿ ಹೆಚ್ಚಾಗಿ ಇಂದಿರಾ ಗಾಂಧಿ ಉಳಿಯುತ್ತಿದ್ದರು. ಇಂದಿರಾ ಗಾಂಧಿ ಅವರನ್ನು ನೋಡುವುದೇ ಭಾಗ್ಯ ಎಂದು ಭಾವಿಸಿ ಜನ ಮುಗಿ ಬೀಳುತ್ತಿದ್ದರು ಎಂದು ಕಡೂರಿನ ಜನ ನೆನಪಿಸಿಕೊಳ್ಳುತ್ತಾರೆ. ಜಮೀನಿನ ಕೆಲಸ ಬಿಟ್ಟು ಇಂದಿರಾ ಗಾಂಧಿ ನೋಡಲು ಜನ ಕಾಯುತ್ತಿದ್ದರು. ಇಂದಿರಾ ಬಂದರೆ 20–30 ಕಾರುಗಳು ಒಟ್ಟಿಗೆ ಬರುತ್ತಿದ್ದವು. ಅಷ್ಟೂ ಕಾರುಗಳನ್ನು ಕಡೂರಿನ ಜನ ಒಟ್ಟಿಗೆ ನೋಡಿದ್ದು ಇದೇ ಚುನಾವಣೆ ಸಂದರ್ಭದಲ್ಲಿ. ಯಗಟಿಯಲ್ಲಿ ಇಂದಿರಾ ಗಾಂಧಿಯವರು ಕಟ್ಟೆಯೊಂದರ ಮೇಲೆ ನಿಂತು ಭಾಷಣ ಮಾಡಿದ್ದರು. ಅದು ಇತ್ತೀಚಿನ ಕೆಲ ದಿನಗಳ ತನಕವೂ ಉಳಿದಿತ್ತು. ವಿರೇಂದ್ರ ಪಾಟೀಲರ ಪರವಾಗಿ ಪ್ರಚಾರ ಮಾಡಲು ಬಂದಿದ್ದ ಜಾರ್ಜ್ ಫರ್ನಾಂಡೀಸ್ ಕೆ.ಎಂ.ತಮ್ಮಯ್ಯ ಅವರ ಮನೆಯಲ್ಲೇ ಉಳಿಯುತ್ತಿದ್ದರು ಎಂಬುದನ್ನು ಅವರು ಕುಟುಂಬದವರು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT