ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಗೊಂದಲದ ನಡುವೆಯೂ ಹ್ಯಾಟ್ರಿಕ್‌ ಸಾಧಿಸಿದ್ದ ಪಾಟೀಲ

ಲೋಕಸಭಾ ಚುನಾವಣೆಯಲ್ಲಿ ‘ಗರೀಬಿ ಹಟಾವೋ’ ಘೋಷಣೆಯ ಚರ್ಚೆ
Published 8 ಏಪ್ರಿಲ್ 2024, 8:27 IST
Last Updated 8 ಏಪ್ರಿಲ್ 2024, 8:27 IST
ಅಕ್ಷರ ಗಾತ್ರ

ಬಾಗಲಕೋಟೆ: ಕಾಂಗ್ರೆಸ್ ಇಬ್ಭಾಗದ ನಡುವೆ 1971ರಲ್ಲಿ ಚುನಾವಣೆ ನಡೆಯಿತು. ಹಾಗಾಗಿ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡು ಬಣದ ಅಭ್ಯರ್ಥಿಗಳ ನಡುವೆಯೇ ನಡೆಯಿತು. ಆಗಲೂ ಗೆಲುವು ಸಾಧಿಸುವ ಮೂಲಕ ಎಸ್‌.ಬಿ. ಪಾಟೀಲರು ಹ್ಯಾಟ್ರಿಕ್‌ ಸಾಧನೆ ಮಾಡಿದರು.

ಸರಳ, ಸಜ್ಜನಿಕೆಯ ರಾಜಕಾರಣಕ್ಕೆ ಮತ್ತೊಂದು ಹೆಸರೇ ಪಾಟೀಲರು ಎನ್ನುವಂತೆ ಜನಜನಿತರಾಗಿದ್ದರು. ಬಹಳ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿದ್ದರು. ಸಮಸ್ಯೆ ಗಮನಕ್ಕೆ ಬಂದಕೂಡಲೇ ಸ್ಪಂದಿಸುತ್ತಿದ್ದರು. ಪರಿಣಾಮ ಅವರು ಸುಲಭವಾಗಿ ಗೆಲುವು ಸಾಧಿಸಲು ಸಾಧ್ಯವಾಯಿತು.

ಐದನೇ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ ಇಬ್ಭಾಗವಾಯಿತು. ಇಂದಿರಾಗಾಂಧಿ ಹಾಗೂ ಎಸ್‌. ನಿಜಲಿಂಗಪ್ಪ ಅವರ ನಡುವಿನ ಬಿಕ್ಕಟ್ಟಿನ ಪರಿಣಾಮ ಎರಡು ಗುಂಪುಗಳಾಗಿ ವಿಂಗಡಣೆಯಾದವು. ಪಕ್ಷಗಳ ರಚನೆಯೇ ಆಯಿತು.

ಇಂದಿರಾಗಾಂಧಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಜಗಜೀವನರಾಂ ಪಕ್ಷದೊಂದಿಗೆ ಗುರುತಿಸಿಕೊಂಡ ಅವರು, ಅದೇ ಪಕ್ಷದಿಂದ ಕಣಕ್ಕೆ ಇಳಿದರು. ಇವರ ಪ್ರತಿಸ್ಪರ್ಧಿಯಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಒ)ದಿಂದ ಬಾಗಲಕೋಟೆಯ ಪ್ರಭಾವಿ ನಾಯಕರಾಗಿದ್ದ, ಎಸ್‌.ಎಸ್‌. ಮೆಳ್ಳಿಗೇರಿ ಸ್ಪರ್ಧಿಸಿದ್ದರು.

‘ಗರೀಬಿ ಹಟಾವೋ’ ಘೋಷಣೆ ಮೂಲಕ ಇಂದಿರಾಗಾಂಧಿ ಅವರು ಚುನಾವಣಾ ಕಣಕ್ಕೆ ಧುಮುಕಿದ್ದರು. ಅವರ ಆ ಘೋಷಣೆ ಈ ಬಾರಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿಯೂ ಚರ್ಚೆಯಾಗುತ್ತಿದೆ. ಇದು ಗರೀಬಿ ಹಟಾವೋ ಘೋಷಣೆಯ ಮಹತ್ವವನ್ನು ತೋರಿಸುತ್ತದೆ.

ಕಾಂಗ್ರೆಸ್‌ ಇಬ್ಭಾಗವಾಗಿ ಚುನಾವಣೆ ನಡೆದಿದ್ದರಿಂದ ಫಲಿತಾಂಶ ಏರುಪೇರಾಗಬಹುದು ಎಂಬ ನಿರೀಕ್ಷೆ ಹಲವರದ್ದಾಗಿತ್ತು. ತುರಿಸಿನಿಂದಲೇ ಇಬ್ಬರೂ ನಾಯಕರು ಪ್ರಚಾರ ಮಾಡಿದ್ದರು. ಕಾಂಗ್ರೆಸ್‌ ಇಬ್ಭಾಗದಿಂದ ಬೇಸರಗೊಂಡಿದ್ದರಿಂದಲೋ ಏನೋ ಚುನಾವಣೆಯ ಮತದಾನದ ಪ್ರಮಾಣದಲ್ಲಿ ಹಿಂದಿನ ಚುನಾವಣೆಗಿಂತ ಶೇ 5ರಷ್ಟು ಕಡಿಮೆಯಾಯಿತು. 

2,99,677 (ಶೇ61.24ರಷ್ಟು) ಮತಗಳು ಚಲಾವಣೆಯಾದರೆ, ಪಾಟೀಲರು 1,97,589 ಮತಗಳನ್ನು ಪಡೆದರು. ಮೆಳ್ಳಿಗೇರಿ ಅವರು 91,821 ಮತಗಳನ್ನು ಪಡೆದರು. ಇದು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಪ್ರತಿಸ್ಪರ್ಧಿ ಅಭ್ಯರ್ಥಿ ಪಡೆದ ಗರಿಷ್ಠ ಮತಗಳಾಗಿದ್ದವು. 1,05,768 ಮತಗಳಿಂದ ಗೆಲುವು ಸಾಧಿಸಿದ್ದರು.

ಸಚಿವ ಸ್ಥಾನ ನಿರಾಕರಣೆ
ಬಾಗಲಕೋಟೆ: ಮೂರನೇ ಬಾರಿಗೆ ಗೆಲುವು ಸಾಧಿಸಿದ್ದ ಪಾಟೀಲರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರೇ ಪಾಟೀಲರ ಪರವಾಗಿ ಪ್ರಚಾರಕ್ಕೆ ಬಂದಿದ್ದರು. ‘ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲು ಮುಂದಾದಾಗಲೂ ನಯವಾಗಿಯೇ ತಿರಸ್ಕರಿಸಿದ್ದರು’ ಎಂದು ಅವರ ಸೊಸೆ ವಿಜಯಲಕ್ಷ್ಮಿ ಪಾಟೀಲ ತಿಳಿಸಿದರು. ಜೀವನದುದ್ದಕ್ಕೂ ಆದರ್ಶ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡು ಬಂದಿದ್ದರು. ಇಂದಿನ ರಾಜಕೀಯಕ್ಕೆ ಅವರ ಆದರ್ಶಗಳು ದಾರಿದೀಪವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT