ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರಚಾರಕ್ಕೆ ಸಿನಿಮಾದವರ ದಂಡು!

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಧಾನಸಭೆ ಚುನಾವಣೆಯ ಗೆಲುವಿನ ಮಂತ್ರ ಜಪಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಮಿತಿಯಲ್ಲಿ ಕನ್ನಡ ಚಲನಚಿತ್ರ ರಂಗದ ನಟ– ನಟಿಯರು ಹಾಗೂ ನಿರ್ಮಾಪಕರಿಗೆ ಆದ್ಯತೆ ನೀಡಲಾಗಿದೆ.

ಈಗಾಗಲೇ ಪಕ್ಷದಲ್ಲಿದ್ದುಕೊಂಡು, ಸ್ಥಾನಮಾನ ಹೊಂದಿರುವ ನಟ– ನಟಿಯರಲ್ಲದೆ, ಪಕ್ಷಕ್ಕೆ ಹೊಸದಾಗಿ ಸೇರ್ಪಡೆ ಆಗಿರುವವರನ್ನೂ ಪ್ರಚಾರ ಸಮಿತಿಗೆ ನೇಮಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.

ಎಐಸಿಸಿಯ ಸಾಮಾಜಿಕ ಜಾಲತಾಣ ನಿರ್ವಹಣಾ ವಿಭಾಗದ ಮುಖ್ಯಸ್ಥೆ, ನಟಿ ರಮ್ಯಾ (ದಿವ್ಯ ಸ್ಪಂದನ) ಅವರು ಪ್ರಚಾರ ಸಮಿತಿಯಲ್ಲಿ ಮುಂಚೂಣಿ ಸ್ಥಾನ ಪಡೆದಿದ್ದು, ನಟಿಯರಾದ ಮಾಲಾಶ್ರೀ, ಅಭಿನಯಾ, ಭಾವನಾ, ಜಯಮಾಲಾ ಅವರನ್ನೂ ಮತದಾರರನ್ನು ಸೆಳೆಯುವುದಕ್ಕಾಗಿ ಪರಿಗಣಿಸಲಾಗಿದೆ.

ಪಕ್ಷದಲ್ಲಿರುವ ಹಿರಿಯ ನಟರಾದ ಅಂಬರೀಷ್‌, ಶಶಿಕುಮಾರ್‌, ಹಾಸ್ಯನಟ ಸಾಧು ಕೋಕಿಲಾ, ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಹಿರಿಯ ನಟ ‘ಮುಖ್ಯಮಂತ್ರಿ’ ಚಂದ್ರು, ಚಿತ್ರ ನಿರ್ಮಾಪಕ ಎಸ್‌.ಮನೋಹರ್‌, ಯುವ ಸಂಗೀತ ನಿರ್ದೇಶಕ ಮಿಲಿಂದ್‌ ಧರ್ಮಸೇನ ಅವರನ್ನು ಪ್ರಚಾರ ಸಮಿತಿಗೆ ನೇಮಿಸಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆದೇಶಿಸಿದ್ದಾರೆ.

ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸಮಿತಿಯ ಅಧ್ಯಕ್ಷರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷರಾಗಿರುವ ದಿನೇಶ್‌ ಗುಂಡೂರಾವ್‌, ಎಸ್‌.ಆರ್‌. ಪಾಟೀಲ, ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಸ್ಥಾನ ಕಳೆದುಕೊಂಡಿರುವ ಬಾಬುರಾವ್‌ ಚಿಂಚನಸೂರ್‌, ವಿನಯಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಬಳ್ಳಾರಿ ಶಾಸಕ ಅನಿಲ್‌ ಲಾಡ್‌, ಮಾಜಿ ಸಚಿವೆ ರಾಣಿ ಸತೀಶ್‌, ವಿ.ಆರ್‌. ಸುದರ್ಶನ್‌ ಮತ್ತಿತರರು ಪ್ರಚಾರ ಜವಾಬ್ದಾರಿಯ ಹೊಣೆ ಹೊರುವವರಲ್ಲಿ ಪ್ರಮುಖರಾಗಿದ್ದಾರೆ.

ಹಿರಿಯ ಮುಖಂಡರಾದ ಸಿ.ಎಂ. ಇಬ್ರಾಹಿಂ ಅವರಿಗೂ ಸಮಿತಿಯಲ್ಲಿ ಸ್ಥಾನ ನೀಡಲಾಗಿದ್ದು, ಕೇಂದ್ರದ ಮಾಜಿ ಸಚಿವರು, ಸಂಸದರು, ಯುವ ಮುಖಂಡರೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT