ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ 49 ಕ್ಷೇತ್ರಗಳಲ್ಲಿ 5ನೇ ಹಂತದ ಚುನಾವಣೆ: ಶೇ 57 ಮತದಾನ, ಕೆಲವೆಡೆ ಘರ್ಷಣೆ

ಮತಯಂತ್ರ ತಿರುಚಿದ ಕುರಿತು ಹಲವೆಡೆ ದೂರು
Published 20 ಮೇ 2024, 23:30 IST
Last Updated 20 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 49 ಕ್ಷೇತ್ರಗಳಲ್ಲಿ ಸೋಮವಾರ ಐದನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಶೇಕಡ 57.38ರಷ್ಟು ಮತದಾನವಾಗಿದೆ.

ಪಶ್ಚಿಮಬಂಗಾಳದ ವಿವಿಧೆಡೆ ಹಿಂಸಾಚಾರ, ಉತ್ತರಪ್ರದೇಶದ ಕೆಲವೆಡೆ ಮತದಾನ ಬಹಿಷ್ಕಾರ ಘಟನೆಗಳು ನಡೆದಿವೆ. ಅಲ್ಲದೆ, ಒಡಿಶಾ, ಪಶ್ಚಿಮ ಬಂಗಾಳದ ಕೆಲವೆಡೆ ಮತಯಂತ್ರಗಳಲ್ಲಿ ತಾಂತ್ರಿಕದೋಷ ಕಂಡುಬಂದಿದ್ದು, ಕೆಲಕಾಲ ಗೊಂದಲ ಉಂಟಾಗಿತ್ತು.

ರಾತ್ರಿ 8ರವರೆಗಿನ ಲಭ್ಯ ಮಾಹಿತಿ ಅನುಸಾರ, ಮಹಾರಾಷ್ಟ್ರದಲ್ಲಿ ಕನಿಷ್ಠ ಪ್ರಮಾಣದಲ್ಲಿ ಅಂದರೆ
ಶೇ 48.88ರಷ್ಟು ಮತದಾನ ಆಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಅಂದರೆ ಶೇ 73ರಷ್ಟು ಮತದಾನವಾಗಿದೆ.

4.26 ಕೋಟಿ ಮಹಿಳೆಯರು, 5,409 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 8.95 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದರು. ಒಟ್ಟು 94,732 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಆರನೇ ಹಂತದ ಮತದಾನ ಮೇ 25, ಏಳು ಮತ್ತು ಅಂತಿಮ ಹಂತದ ಮತದಾನ ಜೂನ್‌ 1ರಂದು ನಡೆಯಲಿದೆ.

ಹಿಂಸಾಚಾರ: ಪಶ್ಚಿಮಬಂಗಾಳದಲ್ಲಿ ಬಾರಕ್‌ಪೋರ್, ಬೊಂಗಾಂವ್, ಅರಂಬಾಗ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ.

ವಿದ್ಯುನ್ಮಾನ ಮತಯಂತ್ರ ತಿರುಚಿದ ಹಾಗೂ ಏಜೆಂಟರು ಮತಗಟ್ಟೆ ಪ್ರವೇಶಿಸಲು ಅಡ್ಡಿಪಡಿಸಿದ್ದು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ಒಟ್ಟು 1,036 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಅರಂಬಾಗ್‌ ಕ್ಷೇತ್ರದ ಖಾನಕುಲ್‌ನಲ್ಲಿ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಯಾಗಿ, ಗೊಂದಲದ ಸ್ಥಿತಿ ಮೂಡಿತ್ತು. ಹೂಗ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಲಾಕೆಟ್‌ ಚಟರ್ಜಿ ವಿರುದ್ಧ ಟಿಎಂಸಿ ಕಾರ್ಯಕರ್ತರು ಪ್ರತಿಭಟಿಸಿದರು.

ಸಂಸದರು ಬರುತ್ತಿದ್ದಂತೆ ಕಾರ್ಯಕರ್ತರು ‘ಚೋರ್‌, ಚೋರ್’ ಘೋಷಣೆ ಕೂಗಿದರು. ಆಕ್ರೋಶಗೊಂಡ ಚಟರ್ಜಿ ಅವರು ಕಾರಿನಿಂದ ಇಳಿದು ಪ್ರತಿಯಾಗಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಹೌರಾ ಕ್ಷೇತ್ರದ ಲಿಲುಹಾ, ಬೊಂಗಾಂವ್ ಕ್ಷೇತ್ರ ವ್ಯಾಪ್ತಿಯ ಗಾಯೇಶ್‌ಪುರ್‌ನಲ್ಲಿಯೂ ಘರ್ಷಣೆಗಳು ನಡೆದಿವೆ. ಗಾಯೇಶ್‌ಪುರ್‌ನಲ್ಲಿ ಬಿಜೆಪಿ ನಾಯಕ ಸುಬೀರ್ ಬಿಸ್ವಾಸ್‌ ಮೇಲೆ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಯಾಣಿ ವಲಯದ ಮತಗಟ್ಟೆಯಲ್ಲಿ ಟಿಎಂಸಿ ಅಭ್ಯರ್ಥಿಯ ಗುರುತಿನ ಚೀಟಿ ಹೊಂದಿದ್ದ ವ್ಯಕ್ತಿಯನ್ನು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಶಂತನು ಠಾಕೂರ್ ಹಿಡಿದಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದರು.

ಮತಯಂತ್ರ ತಿರುಚಿದ ದೂರು: ಉತ್ತರ ಪ್ರದೇಶದಲ್ಲಿ ವಿವಿಧೆಡೆ ಮತಯಂತ್ರಗಳನ್ನು ತಿರುಚಿದ ಹಾಗೂ ಮತಹಕ್ಕು ಚಲಾಯಿಸಲು ಮತಗಟ್ಟೆಗಳಿಗೆ ಜನರನ್ನು ಬಿಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದವು.

ಬೆಲಾ ಖಾರಾ ಗ್ರಾಮದ ಮೂರು ಮತಗಟ್ಟೆಗಳಲ್ಲಿ ಇಂತಹ ಆರೋಪ ಕೇಳಿಬಂದಿದ್ದು, ಮತದಾರರಿಗೆ ಬಿಜೆಪಿಯವರು ಅಡ್ಡಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತು.

ರಾಯ್‌ಬರೇಲಿ ಕ್ಷೇತ್ರದ ರಾಸುಲ್ಪುರ್ ಮತಗಟ್ಟೆಯನ್ನು ಬೆಳಿಗ್ಗೆ 8ರಿಂದ ಬಂದ್ ಮಾಡಿದ್ದು, ಮತದಾರರು ವಾಪಸು ಹೋದರು. ಇಂಥ ವಾಮಮಾರ್ಗ ಮೂಲಕ ಬಿಜೆಪಿ 400 ಸೀಟುಗಳ ಗಡಿ ದಾಟಲಿದೆ ಎಂದು ಕಾಂಗ್ರೆಸ್ ‘ಎಕ್ಸ್‌’ನಲ್ಲಿ ಟೀಕಿಸಿದೆ. 

ಗೊಂಡಾ ಕ್ಷೇತ್ರದ ಮಂಕಾಪುರ್ ವಲಯದ ಎರಡು ಮತಗಟ್ಟೆಗಳಲ್ಲಿ ನ್ಯಾಯಯುತ ಮತದಾನ ನಡೆಯುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಶ್ರೇಯಾವರ್ಮಾ ಆಯೋಗಕ್ಕೆ ದೂರು ನೀಡಿದರು.

ಬಹಿಷ್ಕಾರ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ರೈಲ್ವೆ ಸೇತುವೆ ನಿರ್ಮಾಣದ ಭರವಸೆ ನೀಡಿದರಷ್ಟೇ ಮತದಾನ ಮಾಡುವುದಾಗಿ ಪಟ್ಟುಹಿಡಿದಿದ್ದ ನಾಗರಿಕರು, ಕೌಶಂಬಿ, ಹಿಸಾಂಪುರ ಮಾಧೋ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದರು.

ಮಹಾರಾಷ್ಟ್ರದಲ್ಲಿ ಬಹುತೇಕ ಮತಗಟ್ಟೆಗಳ ಬಳಿ ಮತದಾರರಿಗೆ ನೆರಳಿನ ವ್ಯವಸ್ಥೆ ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಶಿವಸೇನೆ ಉದ್ಧವ್ ಬಣದ ಮುಖಂಡ ಆದಿತ್ಯ ಠಾಕ್ರೆ ಆರೋಪಿಸಿದರು.

ನಕಲಿ ಇವಿಎಂ ಬಳಸಿದ ಆರೊಪದಡಿ ಶಿವಸೇನೆ ಉದ್ಧವ್ ಬಣದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.

ಮತದಾನ ಮಾಡಿದ ಬಾಲಿವುಡ್ ಮಂದಿ. ಎಡದಿಂದ ಬಲಕ್ಕೆ: ಮನೋಜ್‌ ಬಾಜ್‌ಪೇಯಿ, ಸನ್ನಿ ಡಿಯೋಲ್, ಅನಿಲ್ ಕಪೂರ್, ಐಶ್ವರ್ಯಾ ರೈ, ಹೃತಿಕ್ ರೋಷನ್, ವರುಣ್ ಧವನ್ (ಕೆಳಗಿನ ಸಾಲು) ಜಾಹ್ನವಿ ಕಪೂರ್, ಅಮೀರ್ ಖಾನ್, ಸೋನಾಕ್ಷಿ ಸಿನ್ಹಾ, ಇಮ್ರಾನ್ ಹಾಶ್ಮಿ, ಕಿರಣ್ ರಾವ್, ವಿದ್ಯಾ ಬಾಲನ್ –

ಮತದಾನ ಮಾಡಿದ ಬಾಲಿವುಡ್ ಮಂದಿ. ಎಡದಿಂದ ಬಲಕ್ಕೆ: ಮನೋಜ್‌ ಬಾಜ್‌ಪೇಯಿ, ಸನ್ನಿ ಡಿಯೋಲ್, ಅನಿಲ್ ಕಪೂರ್, ಐಶ್ವರ್ಯಾ ರೈ, ಹೃತಿಕ್ ರೋಷನ್, ವರುಣ್ ಧವನ್ (ಕೆಳಗಿನ ಸಾಲು) ಜಾಹ್ನವಿ ಕಪೂರ್, ಅಮೀರ್ ಖಾನ್, ಸೋನಾಕ್ಷಿ ಸಿನ್ಹಾ, ಇಮ್ರಾನ್ ಹಾಶ್ಮಿ, ಕಿರಣ್ ರಾವ್, ವಿದ್ಯಾ ಬಾಲನ್ –

ಪಿಟಿಐ ಚಿತ್ರ

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಹೋದರರಾದ ಮಧುಕರ್ ಜಗತಾಪ್‌ (97) ಮಾಧವ್ ಜಗತಾಪ್‌ (85) ಸದಾಶಿವ ಜಗತಾಪ್‌ (84) ಒಟ್ಟಿಗೆ ಬಂದು ಮತಹಕ್ಕು ಚಲಾಯಿಸಿ ಗಮನಸೆಳೆದರು

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಹೋದರರಾದ ಮಧುಕರ್ ಜಗತಾಪ್‌ (97) ಮಾಧವ್ ಜಗತಾಪ್‌ (85) ಸದಾಶಿವ ಜಗತಾಪ್‌ (84) ಒಟ್ಟಿಗೆ ಬಂದು ಮತಹಕ್ಕು ಚಲಾಯಿಸಿ ಗಮನಸೆಳೆದರು

–ಪಿಟಿಐ ಚಿತ್ರ

ರಾಜ್ಯಗಳು/ಮತದಾನ ನಡೆದ ಕ್ಷೇತ್ರಗಳು/ಮತಪ್ರಮಾಣ (ಶೇ) *

ಮಹಾರಾಷ್ಟ್ರ;13;48.88

ಪಶ್ಚಿಮ ಬಂಗಾಳ;07;73

ಬಿಹಾರ;05;52.55

ಜಾರ್ಖಂಡ್;03;63

ಒಡಿಶಾ;05;60.72

ಉತ್ತರ ಪ್ರದೇಶ;14;57.43

ಜಮ್ಮು ಮತ್ತು ಕಾಶ್ಮೀರ;01;54.21

ಲಡಾಖ್‌;01;67.15

ಸಂಜೆ 7ರವರೆಗಿನ ಮಾಹಿತಿ

ಚುನಾವಣೆಯಲ್ಲಿ ಕಂಡದ್ದು...

l 2014ರಲ್ಲಿ ಘಾಟ್ಕೊಪರ್‌ ರೈಲು ಅವಘಡದಲ್ಲಿ ಎರಡೂ ಕೈ ಕಳೆದುಕೊಂಡಿದ್ದು, ಕೈಗಳ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, 27 ವರ್ಷ ವಯಸ್ಸಿನ ಮೋನಿಕಾ ಮೋರೆ ಮುಂಬೈನಲ್ಲಿ ಇದೇ ಮೊದಲಿಗೆ ಮತ ಚಲಾಯಿಸಿದರು. ಅಪಘಾತದ ಬಳಿಕ ಆರು ವರ್ಷ ಆಕೆಗೆ ಎರಡು ಕೈ ಇರಲಿಲ್ಲ. 2020ರ ಆಗಸ್ಟ್‌ನಲ್ಲಿ ಯಶಸ್ವಿಯಾಗಿ ಕೈ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

l ಐದನೇ ಹಂತದ ಚುನಾವಣೆಯಲ್ಲಿ ಸೋಮವಾರ ಮುಂಬೈನಲ್ಲಿ ಬಾಲಿವುಡ್‌ನ ಅನೇಕ ಹೆಸರಾಂತ ನಟರು ಮತ ಹಕ್ಕು ಚಲಾಯಿಸುವ ಮೂಲಕ ಗಮನಸೆಳೆದರು. 

l ಉದ್ಯಮಿಗಳಾದ ಆನಂದ್ ಮಹೀಂದ್ರಾ, ಅನಿಲ್ ಅಂಬಾನಿ, ಎನ್‌.ಚಂದ್ರಶೇಖರನ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್‌ಠಾಕ್ರೆ, ಶಿವಸೇನೆ ಉದ್ಧವ್‌ ಬಣದ ಅಧ್ಯಕ್ಷ ಉದ್ಧವ್‌ ಠಾಕ್ರೆ, ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ಭಾರತಿ ಪವಾರ್, ಕಪಿಲ್ ಪಾಟೀಲ್ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್ ಮತ ಚಲಾಯಿಸಿದ ಇತರ ಪ್ರಮುಖರಲ್ಲಿ ಸೇರಿದ್ದಾರೆ.

l ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ
ಶೇ 54.21ಕ್ಕೂ ಅಧಿಕ ಮತದಾನವಾಗಿದೆ. ಇದು, ಕಳೆದ ನಾಲ್ಕು ದಶಕಗಳಲ್ಲಿಯೇ ಅಧಿಕವಾದುದು. ಹಿಂದೆ 1984ರಲ್ಲಿ ಶೇ 58.84ರಷ್ಟು ಮತದಾನವಾಗಿತ್ತು.

l ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮತಯಂತ್ರಕ್ಕೆ ಮಾಲಾರ್ಪಣೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಕ್ಷೇತರ ಅಭ್ಯರ್ಥಿ ಶಾಂತಿಗಿರಿ ಮಹಾರಾಜ್‌ ವಿರುದ್ಧ ದೂರು ದಾಖಲಾಗಿದೆ. 

l ಜಾರ್ಖಂಡ್‌ನ ರಾಮಗರ್ ಜಿಲ್ಲೆಯಲ್ಲಿ ಮತಗಟ್ಟೆ ಬಳಿ ಸುಮಾರು 62 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ರಸ್ತೆಯಲ್ಲಿಯೇ ಮೃತಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT