ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟ ಪರೀಕ್ಷೆಗಿಳಿದ ಅಣ್ಣಾಮಲೈ, ಸೆಂಥಿಲ್‌

ತಮಿಳುನಾಡು: ‘ರಾಜಕೀಯ’ ಅಧಿಕಾರ ಹಿಡಿಯಲು ಚುನಾವಣಾ ಅಖಾಡಕ್ಕೆ
Published 24 ಮಾರ್ಚ್ 2024, 21:40 IST
Last Updated 24 ಮಾರ್ಚ್ 2024, 21:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಯಾಗಿ ಕೆಲಸ ಮಾಡಿ ಗುರುತಿಸಿಕೊಂಡ ತಮಿಳುನಾಡಿನ ಇಬ್ಬರು ಅಧಿಕಾರಿಗಳು ತಮ್ಮ ರಾಜ್ಯದಲ್ಲಿ ಲೋಕಸಭೆ ಚುನಾವಣಾ ಅಖಾಡಕ್ಕಿಳಿಯುವ ಮೂಲಕ ರಾಜಕೀಯ ‘ಅಧಿಕಾರ’ ಸೂತ್ರ ಹಿಡಿಯಲು ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ. ಈ ಇಬ್ಬರ ರಾಜಕೀಯ ಸಿದ್ಧಾಂತವು ಪರಸ್ಪರ ವಿರುದ್ಧವಾಗಿದೆ ಎನ್ನುವುದು ವಿಶೇಷ.

ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರಿಗೆ ಕೊಯಮತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಿದರೆ, ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್​ ಸೆಂಥಿಲ್ ಅವರಿಗೆ ತಿರುವಳ್ಳೂರು ಕ್ಷೇತ್ರ
ದಿಂದ ಕಾಂಗ್ರೆಸ್ ಟಿಕೆಟ್‌ ಘೋಷಿಸಿದೆ. ಈ ಇಬ್ಬರೂ ಕರ್ನಾಟಕ ಕೇಡರ್‌ನಲ್ಲಿ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದರು.

2009ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್​ ಸೆಂಥಿಲ್ 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿದ್ದಾಗಲೇ ನಾಗರಿಕ ಸೇವೆಗೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿಯೇ ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದ ಅವರು ನಂತರ ಕಾಂಗ್ರೆಸ್​ ಪಕ್ಷ ಸೇರಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ
ಯಲ್ಲಿ ಕಾಂಗ್ರೆಸ್​ ಅಭೂತಪೂರ್ವ ಬಹುಮತದೊಂದಿಗೆ ಗೆಲುವು ಸಾಧಿಸು
ವಲ್ಲಿ ಸಸಿಕಾಂತ್​ ಸೆಂಥಿಲ್​ ಅವರ ಮಹತ್ವದ ಪಾತ್ರವಿದೆ. ಕರ್ನಾಟಕ ಕಾಂಗ್ರೆಸ್​ ವಾರ್​ ರೂಂನ
ಅವರು, ಬಿಜೆಪಿ ವಿರುದ್ಧ ರೂಪಿಸಿದ ಹೋರಾಟ ಕಾರ್ಯತಂತ್ರಗಳ ಹಿಂದಿನ ರೂವಾರಿಯಾಗಿದ್ದರು. ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿಯೂ ಪಕ್ಷದ ಸಾಮಾಜಿಕ ಜಾಲತಾಣಗಳ ಉಸ್ತುವಾರಿ
ಯಾಗಿದ್ದರು. ಐದು ಗ್ಯಾರಂಟಿ ಯೋಜನೆಗಳ ಹಿಂದೆಯೂ ಸಸಿಕಾಂತ್​​ ಸೆಂಥಿಲ್​ರ ಪಾತ್ರ ಪ್ರಮುಖವಾಗಿತ್ತು.

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿದೆ. ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ, ಕಾಂಗ್ರೆಸ್‌ಗೆ 10 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಸಸಿಕಾಂತ್ ಸೆಂಥಿಲ್ ಸ್ಪರ್ಧಿಸುತ್ತಿರುವ ತಿರುವಳ್ಳೂರು ಕ್ಷೇತ್ರ ಸದ್ಯ ಕಾಂಗ್ರೆಸ್ ವಶದಲ್ಲಿಯೇ ಇದೆ. 2019ರಲ್ಲಿ ಕಾಂಗ್ರೆಸ್‌ನ ಕೆ. ಜಯಕುಮಾರ್ ಅವರು ಎಐಎಡಿಎಂಕೆಯ ಪಿ. ವೇಣುಗೋಪಾಲ್ ಅವರನ್ನು ಸೋಲಿಸಿದ್ದರು.

ಅಣ್ಣಾಮಲೈ ಅವರು 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾ
ಗಿದ್ದರು. ಒಂಬತ್ತು ವರ್ಷ ಖಾಕಿ ಧರಿಸಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಅವರು ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್‌ಪಿ ಆಗಿದ್ದರು. 2018ರ ಅಕ್ಟೋಬರ್‌ನಲ್ಲಿ
ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾವಣೆಯಾಗಿದ್ದ
ಅವರು, 2019ರ ಮೇ ತಿಂಗಳಲ್ಲಿ ಹುದ್ದೆ ತ್ಯಜಿಸಿದ್ದರು. ಬಿಜೆಪಿ ಸೇರಿದ ಅವರನ್ನು ಪಕ್ಷವು ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ. ಅಲ್ಲದೆ, ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಸಹ ಉಸ್ತುವಾರಿ ಹೊಣೆ ನೀಡಿತ್ತು.

ಅಣ್ಣಾಮಲೈ ತಮಿಳುನಾಡಿನಲ್ಲಿ 100 ದಿನ ನಡೆಸಿದ ‘ಎನ್‌ ಮಣ್ಣ್ ಎನ್‌ ಮಕ್ಕಳ್’ ಯಾತ್ರೆಯಿಂದ ಆ ರಾಜ್ಯದಲ್ಲಿ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ‘ಡಿಎಂಕೆ ಫೈಲ್ಸ್’ ಆರೋಪಗಳ ಮೂಲಕ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT