ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ ಪ್ರದೇಶ: ಕಾಂಗ್ರೆಸ್ ಅನರ್ಹರಿಗೆ ಬಿಜೆಪಿ ಟಿಕೆಟ್

Published 26 ಮಾರ್ಚ್ 2024, 15:34 IST
Last Updated 26 ಮಾರ್ಚ್ 2024, 15:34 IST
ಅಕ್ಷರ ಗಾತ್ರ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್‌ನ ಆರು ಅನರ್ಹ ಶಾಸಕರನ್ನು ಹುರಿಯಾಳುಗಳಾಗಿ ಕಣಕ್ಕಿಳಿಸಿದೆ.

ಹಿಮಾಚಲ ಪ್ರದೇಶ ಸೇರಿದಂತೆ ಪಶ್ಚಿಮ ಬಂಗಾಳ, ಸಿಕ್ಕಿಂ, ಗುಜರಾತ್ ಮುಂತಾದ ರಾಜ್ಯಗಳ ಉಪಚುನಾವಣೆಗಳಿಗೆ ಬಿಜೆಪಿ ಮಂಗಳವಾರ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಬಜೆಟ್ ಕಲಾಪದ ವೇಳೆ ಹಣಕಾಸು ಮಸೂದೆಗೆ ಸರ್ಕಾರದ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ ಜಾರಿ ಮಾಡಿದ್ದ ವಿಪ್ ಉಲ್ಲಂಘಿಸಿದ್ದಕ್ಕಾಗಿ ಆರು ಶಾಸಕರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು. ಆರೂ ಮಂದಿ ನಂತರ ಬಿಜೆಪಿ ಸೇರಿದ್ದರು.

ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಖು, ‘ಹಿಮಾಚಲ ಪ್ರದೇಶದ ಜನ ಬುದ್ಧಿವಂತರಾಗಿದ್ದು, ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಆಯಾ ರಾಂ ಗಯಾ ರಾಂ ಸಂಸ್ಕೃತಿಯ ಜನರಿಗೆ ಜನ ಸೂಕ್ತ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಬಿಜೆಪಿ ಮುಖಂಡ ರಾಜೀನಾಮೆ: ಕಾಂಗ್ರೆಸ್ ಅನರ್ಹ ಶಾಸಕ ರವಿ ಠಾಕೂರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ಖಂಡಿಸಿ ಲಾಹೌಲ್ ಮತ್ತು ಸ್ಪಿತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ರಾಮ್ ಲಾಲ್ ಮಾರ್ಕಂಡ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾರ್ಕಂಡ ಅವರು ರವಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಕಾಂಗ್ರೆಸ್‌ನ ಆರು ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಮಾರ್ಕಂಡ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ತಾನೂ ಅದೇ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಅವರ ಜತೆಯಲ್ಲಿ ಲಾಹೌಲ್ ಮತ್ತು ಸ್ಪಿತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಮಾರ್ಕಂಡ ಅವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT