ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವರುಣ್ ಬರಹಗಳೇ ಅವರಿಗೆ ಟಿಕೆಟ್‌ ತಪ್ಪುವಂತೆ ಮಾಡಿತೆ? ಮೇನಕಾ ಗಾಂಧಿ ಹೇಳೋದೇನು?

Published 11 ಮೇ 2024, 12:42 IST
Last Updated 11 ಮೇ 2024, 12:42 IST
ಅಕ್ಷರ ಗಾತ್ರ

ಸುಲ್ತಾನ್‌ಪುರ: ‘ವರುಣ್ ಗಾಂಧಿ ಅವರ ಕೆಲವೊಂದು ಬರಹಗಳು ಸರ್ಕಾರವನ್ನು ವಿಮರ್ಶೆಗೆ ಒಳಪಡಿಸಿದ್ದವು. ಅದು ಅವರಿಗೆ ಫಿಲಿಬಿಟ್‌ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪುವಂತೆ ಮಾಡಿತು. ಹೀಗಾದರೂ ವರುಣ್ ಉತ್ತಮವಾಗಿರಲಿದ್ದಾರೆ’ ಎಂದು ಸಂಸದ ವರುಣ್ ಅವರ ತಾಯಿ ಮೇನಕಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಸುಲ್ತಾನ್‌ಪುರ ಅಭ್ಯರ್ಥಿಯಾಗಿರುವ ನನ್ನ ಪರ ಪ್ರಚಾರಕ್ಕೆ ಬರುವುದಾಗಿ ವರುಣ್ ಹೇಳಿದರು. ಆದರೆ ಆ ಕುರಿತು ಈವರೆಗೂ ನಿರ್ಧಾರ ಕೈಗೊಂಡಿಲ್ಲ’ ಎಂದಿದ್ದಾರೆ.

ಭವಿಷ್ಯದಲ್ಲಿ ವರುಣ್ ಅವರು ಸುಲ್ತಾನ್‌ಪುರದಿಂದ ಸ್ಪರ್ಧಿಸಲಿದ್ದಾರೆಯೇ ಅಥವಾ ತಮ್ಮ ಕರ್ಮಭೂಮಿ ಎಂದು ಫಿಲಿಬಿಟ್‌ನಲ್ಲೇ ಉಳಿಯಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ ಅದು ಫಿಲಿಬಿಟ್‌ ಆಗಿರುತ್ತದೆ. ಜತೆಗೆ ಭಾರತವೂ ಅವರ ಕರ್ಮಭೂಮಿಯೇ ಆಗಿದೆ. ಎಲ್ಲೆಡೆಯೂ ಅವರು ಕೆಲಸ ಮಾಡಲಿ’ ಎಂದು ಆಶಿಸಿದರು.

ರಾಮಮಂದಿರ ಚುನಾವಣಾ ವಿಷಯವಾಗಲಾರದು

ವರುಣ್ ಅವರ ಬರಹಗಳಿಂದ ಅವರಿಗೆ ಟಿಕೆಟ್ ಕೈತಪ್ಪಿತೇ...? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇನಕಾ, ‘ಇದಕ್ಕೆ ಯಾವುದೋ ಒಂದು ಸಂಗತಿ ಕಾರಣ ಎಂದು ನಾನು ಹೇಳುವುದಿಲ್ಲ’ ಎಂದಿದ್ದಾರೆ.

‘ಪ್ರತಿ ಚುನಾವಣೆಯಲ್ಲೂ ನಾನು ಸ್ಥಳೀಯ ವಿಷಯಗಳನ್ನೇ ಮುಖ್ಯವಾಗಿಟ್ಟುಕೊಂಡು ಮತ ಯಾಚಿಸುತ್ತೇನೆ. ರಾಷ್ಟ್ರಮಟ್ಟದ ವಿಷಯಗಳಿಗಿಂತಲೂ, ಕ್ಷೇತ್ರದಲ್ಲಿ ನಾವು ಮಾಡಿದ ಕೆಲಸವನ್ನು ಮಾತ್ರ ಮತದಾರರು ಪರಿಗಣಿಸುತ್ತಾರೆ’ ಎಂದು 8 ಬಾರಿ ಸಂಸದರಾಗಿರುವ ಮೇನಕಾ ಹೇಳಿದರು.

‘ಅಯೋಧ್ಯೆಯಲ್ಲಿ ರಾಮಮಮಂದಿರ ನಿರ್ಮಾಣ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ಆದರೆ ಅದು ಚುನಾವಣಾ ವಿಷಯವಲ್ಲ. ಬದಲಿಗೆ ಪ್ರತಿಯೊಬ್ಬರ ಹೃದಯದಲ್ಲೂ ಈ ಸಂಗತಿ ಇದೆ. ಆದರೆ ಅದು ಚುನಾವಣಾ ವಿಷಯದ ಭಾಗವಾಗದು’ ಎಂದಿದ್ದಾರೆ.

ಪಿತ್ರಾರ್ಜಿತ ತೆರಿಗೆಗೆ ನನ್ನ ವಿರೋಧವಿದೆ

ಪಿತ್ರಾರ್ಜಿತ ತೆರಿಗೆ ಕುರಿತು ಕಾಂಗ್ರೆಸ್‌ನ ಸ್ಯಾಮ್‌ ಪಿತ್ರೋಡಾ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇನಕಾ, ‘ಅವರ ಪಕ್ಷದ ಒಬ್ಬ ಗೌರವಾನ್ವಿತ ಸದಸ್ಯರಾಗಿ ದೇಶದ ಸಮಸ್ಯೆಯನ್ನು ಅಮೆರಿಕದಲ್ಲಿ ಕುಳಿತು ಮಾತನಾಡುವುದು ಸರಿಯಲ್ಲ. ವೈಯಕ್ತಿಕವಾಗಿ ಪಿತ್ರಾರ್ಜಿತ ತೆರಿಗೆಯನ್ನು ನಾನು ವಿರೋಧಿಸುತ್ತೇನೆ’ ಎಂದು ಹೇಳಿದ್ದಾರೆ.

ಈ ಬಾರಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ನನ್ನ ಕ್ಷೇತ್ರದ ಚುನಾವಣೆಯ ಒತ್ತಡದಲ್ಲಿದ್ದೇನೆ. ಹೀಗಾಗಿ ದೇಶದಲ್ಲಿ ಬಿಜೆಪಿ ಗೆಲ್ಲುವ ಒಟ್ಟು ಸ್ಥಾನಗಳ ಕುರಿತ ಯಾವುದೇ ಕಲ್ಪನೆ ನನಗಿಲ್ಲ. 400 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇರುವುದರಿಂದಲೇ ಅವರು ಅದನ್ನು ಹೇಳಿದ್ದಾರೆ. ಇಲ್ಲವಾದಲ್ಲಿ ಆ ಸಂಖ್ಯೆಯನ್ನು ಅವರು ಹೇಳುತ್ತಿರಲಿಲ್ಲ’ ಎಂದಿದ್ದಾರೆ.

ಹಾಗಿದ್ದರೆ ಎನ್‌ಡಿಎ ಅಧಿಕಾರಕ್ಕೆ ಬರಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇನಕಾ, ‘ಅದರ ಬಗ್ಗೆ ನನಗೆ ಗೊತ್ತಿಲ್ಲ. ಏಕೆಂದರೆ ನಾನು ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿಲ್ಲ’ ಎಂದಿದ್ದಾರೆ.

ಕಳೆದ 25 ವರ್ಷಗಳಲ್ಲಿ ಅಮೇಠಿ ಕ್ಷೇತ್ರದಿಂದ ಗಾಂಧಿ ಕುಟುಂಬದ ಯಾರೊಬ್ಬರೂ ಸ್ಪರ್ಧಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಲ ಸರಿಯುತ್ತಲೇ ಇರುತ್ತದೆ’ ಎಂದಷ್ಟೇ ಹೇಳಿದರು.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರಕ್ಕೆ 6ನೇ ಹಂತದಲ್ಲಿ ಮೇ 25ರಂದು ಮತದಾನ ನಡೆಯಲಿದೆ. ಏ. 19ರಂದು ಫಿಲಿಬಿಟ್ ಕ್ಷೇತ್ರಕ್ಕೆ ಮತದಾನ ಆಗಿದೆ.

2019ರಲ್ಲಿ ಮೇನಕಾ ಗಾಂಧಿ ಅವರು ಸುಲ್ತಾನ್‌ಪುರ ಕ್ಷೇತ್ರದಿಂದ 4.59 ಲಕ್ಷ ಮತಗಳನ್ನು ಪಡೆಯುವ ಮೂಲಕ ಬಿಎಸ್‌ಪಿಯ ಚಂದ್ರ ಭದ್ರಸಿಂಗ್ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ಸಮಾಜವಾದಿ ಪಾರ್ಟಿಯ ರಾಮ್‌ ಬಹುಹಲ್ ನಿಶಾದ್ ಅವರು ಮೇನಕಾ ಗಾಂಧಿಗೆ ಪ್ರತಿಸ್ಪರ್ಧಿಯಾಗಿದ್ದಾರೆ.

ಬೆಲೆ ಏರಿಕೆ, ನಿರುದ್ಯೋಗ ಕುರಿತ ಲೇಖನಗಳ ಬರೆದಿದ್ದ ವರುಣ್

ಬೆಲೆ ಏರಿಕೆ, ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆ ಕುರಿತು ವರುಣ್ ಗಾಂಧಿ ಅವರು ಅಧಿಕಾರದಲ್ಲಿರುವ ತಮ್ಮದೇ ಪಕ್ಷದ ಆಡಳಿತವನ್ನು ಪರೋಕ್ಷವಾಗಿ ಟೀಕಿಸಿದ್ದರು. ಆದರೆ, ಚುನಾವಣೆ ಘೋಷಣೆಯಾದ ಬಳಿಕ, ಫಿಲಿಬಿಟ್ ಕ್ಷೇತ್ರದಿಂದ ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವ ಜಿತಿನ್ ಪ್ರಸಾದ್ ಅವರನ್ನು ಬಿಜೆಪಿ ಈ ಬಾರಿ ಕಣಕ್ಕಿಳಿಸಿದೆ.

ಫಿಲಿಬಿಟ್ ಕ್ಷೇತ್ರದ ಟಿಕೆಟ್ ಕೈತಪ್ಪಿದ ನಂತರ ಕ್ಷೇತ್ರದ ಜನರಿಗೆ ಭಾವನಾತ್ಮಕ ಪತ್ರ ಬರೆದಿದ್ದ ವರುಣ್ ಗಾಂಧಿ, ‘ತಮ್ಮ ಕೊನೆಯ ಉಸಿರಿರುವವರೆಗೂ ಕ್ಷೇತ್ರದ ಜನರೊಂದಿಗಿನ ಸಂಬಂಧ ಅಖಂಡವಾಗಿರಲಿದೆ’ ಎಂದಿದ್ದರು.

ಮೇನಕಾ ಗಾಂಧಿ ಅವರು 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದರು. 1991ರಲ್ಲಿ ಪರಾಭವಗೊಂಡರು. 1996ರಲ್ಲಿ ಗೆಲುವು ದಾಖಲಿಸಿದರು. 1998 ಹಾಗೂ 1999ರಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2004 ಹಾಗೂ 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ವರುಣ್ ಗಾಂಧಿ ಅವರು 2009 ಹಾಗೂ 2019ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT