ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರಿಗೆ ಪ್ರತಿ ತಿಂಗಳು ₹1 ಸಾವಿರ: ಡಿಎಂಕೆ ಭರವಸೆ

ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ‘ಇಂಡಿಯಾ’ ಪಾಲುದಾರ ಪಕ್ಷ; ಸಿಎಎ, ಅಗ್ನಿಪಥ್‌ ರದ್ದುಪಡಿಸುವ ಆಶ್ವಾಸನೆ
Published 20 ಮಾರ್ಚ್ 2024, 15:13 IST
Last Updated 20 ಮಾರ್ಚ್ 2024, 15:13 IST
ಅಕ್ಷರ ಗಾತ್ರ

ಚೆನ್ನೈ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದ ಪ್ರತಿ ರಾಜ್ಯದಲ್ಲಿಯೂ ಎಲ್ಲ ಮಹಿಳೆಯರಿಗೆ ತಿಂಗಳಿಗೆ ₹1 ಸಾವಿರ ನೀಡಲಾಗುವುದು. ಅಲ್ಲದೆ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿಯನ್ನು ತಕ್ಷಣವೇ ಅನುಷ್ಠಾನಗೊಳಿಸಲಾಗುವುದು ಎಂದು ಡಿಎಂಕೆ ಭರವಸೆ ನೀಡಿದೆ.

‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ಪಾಲುದಾರ ಹಾಗೂ ತಮಿಳುನಾಡಿನ ಆಡಳಿತರೂಢ ಪಕ್ಷವಾದ ಡಿಎಂಕೆ, ಬುಧವಾರ ಬಿಡುಗಡೆ ಮಾಡಿದ ಲೋಕಸಭೆ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಆಶ್ವಾಸನೆ ನೀಡಿದೆ.

ಸಾಮಾಜಿಕ ನ್ಯಾಯದ ಆಧಾರದ ಮೇಲೆ ಶಿಕ್ಷಣ ಮತ್ತು ಉದ್ಯೋಗದಲ್ಲೂ ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವುದಾಗಿಯೂ ಹೇಳಿದೆ.  

ಎನ್‌ಡಿಎ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ರದ್ದುಪಡಿಸಲಾಗುವುದು. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಮಾಡುವ ಜತೆಗೆ ಅಲ್ಲಿ ಚುನಾವಣೆ ನಡೆಸಲಾಗುವುದು ಎಂದೂ ಹೇಳಿದೆ.

ಅಲ್ಲದೆ, ಹೊಸ ಶಿಕ್ಷಣ ನೀತಿ 2020 ರದ್ದತಿ, ಇಂಧನ ಬೆಲೆ ಕಡಿತ, ಕಾನೂನು ಕ್ರಮದಿಂದ ರಾಜ್ಯಪಾಲರಿಗೆ ರಕ್ಷಣೆ ನೀಡುವ ಸಂವಿಧಾನದ 361ನೇ ವಿಧಿ ರದ್ದು ಮತ್ತು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ರಾಜ್ಯಪಾಲರ ನೇಮಕಕ್ಕೆ ಕ್ರಮ ತೆಗೆದುಕೊಳ್ಳುವುದಾಗಿಯೂ ಪ್ರಕಟಿಸಿದೆ.

ಎಂ.ಎಸ್. ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ತರಲಾಗುವುದು. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಖಾತ್ರಿಗೆ ಕ್ರಮ ವಹಿಸಲಾಗುವುದು. ಅಲ್ಲದೆ, ಅಗ್ನಿಪಥ್ ಯೋಜನೆ ಕೈಬಿಟ್ಟು, ಸೇನಾ ಸಶಸ್ತ್ರ ಪಡೆಗಳಲ್ಲಿ ಶಾಶ್ವತ ನೇಮಕಾತಿಯನ್ನು ಪುನಃ ಆರಂಭಿಸುವುದಾಗಿಯೂ ಹೇಳಿದೆ.

ಜಾತಿವಾರು ಜನಗಣತಿ ಮತ್ತು ಬಡತನ ರೇಖೆಗಿಂತ ಕೆಳಗಿರುವವರ ಆರ್ಥಿಕ ಸಮೀಕ್ಷೆ ಸೇರಿದಂತೆ ಜನಗಣತಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಏಕಕಾಲದಲ್ಲಿ ನಡೆಸುವುದಾಗಿಯೂ ಪ್ರಕಟಿಸಿದೆ.

ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳು

* ಪೆಟ್ರೋಲ್‌ ಲೀಟರ್‌ಗೆ ₹75, ಡೀಸೆಲ್‌ಗೆ ₹65 ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ₹500ಕ್ಕೆ ನಿಗದಿಪಡಿಸಲಾಗುವುದು

* ಮಹಿಳಾ ಸ್ವಸಹಾಯ ಗುಂಪುಗಳಿಗೆ 10 ಲಕ್ಷದವರೆಗೆ ಬಡ್ಡಿ ರಹಿತ ಸಾಲ; ದೇಶದಾದ್ಯಂತ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಒಂದು ಲಕ್ಷದವರೆಗೆ ಬಡ್ಡಿರಹಿತ ವಾಹನ ಸಾಲ

* ಲಿಂಗ ಸಮಾನತೆಗೆ ಒತ್ತು ನೀಡುವ ನೀಡುವ ಮೂಲಕ ಮಹಿಳೆಯರಿಗೆ ಮುಟ್ಟಿನ ರಜೆಯ ಕಾನೂನು ಜಾರಿಗೆ ತರಲಾಗುವುದು

* ಮನೆಗೆಲಸದ ಕಾರ್ಮಿಕರ ಹಕ್ಕುಗಳು ಮತ್ತು ಕನಿಷ್ಠ ವೇತನ ರಕ್ಷಣೆಗೆ ‘ಏಕೀಕೃತ ರಾಷ್ಟ್ರೀಯ ಕಾನೂನು’ ಜಾರಿಗೊಳಿಸಲಾಗುವುದು. ಮನೆಗೆಲಸದ ಕಾರ್ಮಿಕರ ಉದ್ಯೋಗ ಕಾಯಂ, ಅವರ ಸಾಮಾಜಿಕ ಭದ್ರತೆ ಖಾತ್ರಿಗೆ ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸಲು ತ್ರಿಪಕ್ಷೀಯ ಸಮಿತಿ ರಚಿಸಲಾಗುವುದು

* ಸಣ್ಣ ಉದ್ಯಮಗಳಲ್ಲಿ ತೊಡಗಿರುವ ಮಹಿಳೆಯರಿಗೆ, ಪ್ರಸ್ತುತ ಇರುವ ಶೇ 30 ಬಂಡವಾಳ ಸಬ್ಸಿಡಿಯನ್ನು ಶೇ 35ಕ್ಕೆ ಹೆಚ್ಚಿಸಲಾಗುವುದು

* ರೈತ ಮಹಿಳೆಯರಿಗೆ ಟ್ರ್ಯಾಕ್ಟರ್‌ಗಳು ಮತ್ತು ಇತರ ಕೃಷಿ ಯಂತ್ರೋಪಕರಣಗಳನ್ನು ಚಲಾಯಿಸುವ ತರಬೇತಿ, ಮಣ್ಣಿನ ಆರೋಗ್ಯ, ಬೀಜ ಉತ್ಪಾದನೆ ಮತ್ತು ಬೀಜ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ಮಟ್ಟದ ತರಬೇತಿ ನೀಡಲಾಗುವುದು 

*ರೈತ ಮಹಿಳೆಯರಿಗೆ ನೇರ ಮಾರುಕಟ್ಟೆ ಪ್ರವೇಶ ಅವಕಾಶ ನೀಡಲು ಮಹಿಳೆಯರಿಂದಲೇ ನಿರ್ವಹಿಸಲ್ಪಡುವ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಮಾರುಕಟ್ಟೆಗಳನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗುವುದು

* ಶಾಲೆಯಿಂದ ಹೊರಗಿರುವ ಮಕ್ಕಳನ್ನು ಗುರುತಿಸಿ ಅವರ ಮುಂದಿನ ಶಿಕ್ಷಣಕ್ಕೆ ಹಾಗೂ ಅವರ ಕುಟುಂಬಗಳಿಗೆ ಅಗತ್ಯ ಆರ್ಥಿಕ ಅವಕಾಶಗಳನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು  

* ಕೆಲಸ, ಮದುವೆ, ಲೈಂಗಿಕ ಶೋಷಣೆ ಮತ್ತು ಅಂಗಾಂಗ ಮಾರಾಟಕ್ಕೆ ಮಕ್ಕಳ ಕಳ್ಳಸಾಗಣೆ ಆಗುವುದನ್ನು ತಡೆಯಲು ಪ್ರತ್ಯೇಕ ಕಾನೂನು ಜಾರಿ ಮತ್ತು ಸೂಕ್ತ ತನಿಖಾ ವ್ಯವಸ್ಥೆ ಜಾರಿಗೆ ತರಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT