ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ನಾಟಕ, ಬೇರೇನೂ ಅಲ್ಲ: ಬಿಜೆಪಿ ವಿರುದ್ಧ ರಾಮೇಶ್ವರಂ ಮೀನುಗಾರರ ಆಕ್ರೋಶ

ಕಚ್ಚತೀವು ವಿಷಯ: ಬಿಜೆಪಿ ವಿರುದ್ಧ ರಾಮೇಶ್ವರಂ ಮೀನುಗಾರರ ಆಕ್ರೋಶ
Published 2 ಏಪ್ರಿಲ್ 2024, 23:28 IST
Last Updated 2 ಏಪ್ರಿಲ್ 2024, 23:28 IST
ಅಕ್ಷರ ಗಾತ್ರ

ರಾಮೇಶ್ವರಂ, ತಮಿಳುನಾಡು: ‘ಇದು, ಚುನಾವಣೆಗೆ ಮೊದಲು ಜನರನ್ನು ವಂಚಿಸಲು ಆರಂಭಿಸಿರುವ ರಾಜಕೀಯ ನಾಟಕ ಎಂಬುದು ಸ್ಪಷ್ಟ. ಮತ ಸೆಳೆಯುವುದೊಂದೇ ಇದರ ಉದ್ದೇಶ...’

ಕಾಂಗ್ರೆಸ್‌– ಬಿಜೆಪಿ ನಡುವೆ ಸದ್ಯ ವಾಕ್ಸಮರಕ್ಕೆ ಕಾರಣವಾಗಿರುವ ‘ಕಚ್ಚತೀವು’ ದ್ವೀಪದ ಉಲ್ಲೇಖ ಕುರಿತಂತೆ ತಮಿಳುನಾಡಿನ ಪ್ರಮುಖ ಮೀನುಗಾರಿಕೆ ತಾಣ, ರಾಮೇಶ್ವರಂನಲ್ಲಿ ಕೇಳಿಬಂದ ಮಾತಿದು.

ಮೀನುಗಳನ್ನು ವಿಂಗಡಿಸುವ, ಮೀನುಗಾರಿಕೆಗೆ ಬೋಟ್‌ಗಳನ್ನು ಸಜ್ಜುಗೊಳಿಸುವ ಕೆಲಸಗಳಲ್ಲಿ ನಿರತರಾದ ಮೀನುಗಾರರ ನಡುವೆ ‘ಕಚ್ಚತೀವು’ ಈಗ ಚರ್ಚೆಯ ವಸ್ತುವಾಗಿದೆ.

285 ಎಕರೆ ವಿಸ್ತೀರ್ಣದ ಕಚ್ಚತೀವು ದ್ವೀಪ, ರಾಮೇಶ್ವರಂನಿಂದ 16 ನಾಟಿಕಲ್ ಮೈಲು ದೂರದಲ್ಲಿದೆ. ಮೆಕ್ಯಾನಿಕ್‌ ಬೋಟ್‌ನಲ್ಲಿ 90 ನಿಮಿಷದ ಪಯಣ. 1974ರಲ್ಲಿ ಇದನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡಲಾಗಿದೆ.

ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ಕಾವು ಹೆಚ್ಚುತ್ತಿರುವ ಹೊತ್ತಿನಲ್ಲಿ ಕಚ್ಚತೀವು ದ್ವೀಪದ ವಿಷಯ ಪ್ರಸ್ತಾವಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರೇ ಈ ಚರ್ಚೆಗೆ ಕಿಡಿಹೊತ್ತಿಸಿದ್ದಾರೆ ಎನ್ನುವುದು ಸ್ಥಳೀಯರ ಪ್ರತಿಕ್ರಿಯೆ. 

‘ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷವಾಯಿತು. ಇಷ್ಟು ವರ್ಷ ನಿದ್ರೆಯಲ್ಲಿದ್ದಂತೆ ಇದ್ದವರು ಈಗ ದಿಢೀರನೆ ಈ ವಿಷಯ ಪ್ರಸ್ತಾಪಿಸಿದ್ದಾರೆ’ ಎಂದು ಮೀನುಗಾರರು ಹೇಳಿದರು.

‘ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದ್ದಾಗ, ಕೇಂದ್ರದ ಕಾಂಗ್ರೆಸ್‌ ಸರ್ಕಾರ ದ್ವೀಪ ಬಿಟ್ಟುಕೊಟ್ಟಿತು ಎನ್ನುವುದು ಸಾಮಾನ್ಯ ಜ್ಞಾನ. ಅದನ್ನೇ ಈಗ ಹೊಸತಾಗಿ ಹೇಳುತ್ತಿರುವ ಉದ್ದೇಶವಾದರೂ ಎಂದು’ ಮೀನುಗಾರರ ಸಂಘದ ಅಧ್ಯಕ್ಷ ಎನ್.ದೇವದಾಸ್ ಪ್ರಶ್ನಿಸಿದರು.

‘ಭಾರತದ ಜಲಗಡಿಯಲ್ಲಿ ಹೆಚ್ಚು ಮೀನು ಸಿಗದು. ರಾಮೇಶ್ವರಂನಿಂದ 12 ನಾಟಿಕಲ್ ಮೈಲು ದೂರದ ಅಂತರರಾಷ್ಟ್ರೀಯ ಜಲ ಗಡಿ ದಾಟುವುದು ಅನಿವಾರ್ಯ. ಆಗ ಮೀನುಗಾರರ ಬಂಧನವಾಗುತ್ತದೆ. ಅವರನ್ನು ಬಿಡಿಸಿಕೊಂಡು ಬರುವುದೇ ಕಷ್ಟ. ಮೀನುಗಾರರ ಬಿಡುಗಡೆಗೆ ಕೇಂದ್ರ ಏನನ್ನೂ ಮಾಡಿಲ್ಲ. ನಿಯಮದಂತೆ 14 ದಿನಗಳ ಬಳಿಕ ಬಿಡುಗಡೆ ಆದಾಗ, ಅದು ತನ್ನದೇ ಸಾಧನೆ ಎಂಬಂತೆ ಹೇಳಿಕೊಳ್ಳುತ್ತದೆ’ ಎಂದು ಎಸ್‌.ಎಮ್ರಿಕ್ ಹೇಳಿದರು.

ಕಚ್ಚತೀವು ದ್ವೀಪವನ್ನು ಮರಳಿ ಪಡೆಯುವುದು ಬೇಡ. ಭಾರತೀಯ ಮೀನುಗಾರರ ಹಕ್ಕುಗಳ ರಕ್ಷಣೆ ಬಗ್ಗೆ ಶ್ರೀಲಂಕಾ ಜೊತೆ ಚರ್ಚಿಸಲಿ. ಈ ಹಕ್ಕು  1974ರ ಭಾರತ–ಶ್ರೀಲಂಕಾ ಒಪ್ಪಂದದಲ್ಲೂ ಇದೆ ಎನ್ನುತ್ತಾರೆ ದೇವದಾಸ್.

‘ನನ್ನ 367 ಸಂಖ್ಯೆಯ ಬೋಟ್‌ ತಡೆಹಿಡಿದಿದ್ದರು. ಬಿಡಿಸಲು ₹ 10 ಲಕ್ಷ ವ್ಯಯಿಸಿದ್ದೆ. ಆದರೂ ಬಿಡಿಸಿಕೊಳ್ಳಲು ಆಗಲಿಲ್ಲ. ಬಿಜೆಪಿ ರಾಜಕಾರಣ ಮಾಡುವುದು ಬಿಟ್ಟು ಮೀನುಗಾರರ ನೆರವಿಗೆ ಬರಲಿ. ಶ್ರೀಲಂಕಾದ ನೌಕಾಪಡೆ 10 ವರ್ಷಗಳಲ್ಲಿ ಸುಮಾರು 360 ದೋಣಿಗಳನ್ನು ತಡೆಹಿಡಿದಿದೆ. ಕೇಂದ್ರವು ಎಷ್ಟು ಬೋಟ್‌ಗಳನ್ನು ಬಿಡಿಸಿದೆ, ಎಷ್ಟು ಮೀನುಗಾರರ ಬಿಡುಗಡೆಗೆ ನೆರವಾಗಿದೆ ಎಂದು ತಿಳಿಸಲಿ’ ಎಂದು ಆಗ್ರಹಿಸಿದರು.

‘ಮೀನುಗಾರರ ಮೇಲಿನ ದೌರ್ಜನ್ಯ ತಡೆಯುವುದಾಗಿ 2014ರಲ್ಲಿ ಪ್ರಚಾರಕ್ಕೆ ಬಂದಿದ್ದ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದರು. ಅದು ಏನಾಯಿತು? ಮೋದಿ ಈ ವರ್ಷದ ಜನವರಿಯಲ್ಲಿ ರಾಮೇಶ್ವರಕ್ಕೆ ಬಂದಿದ್ದರು. ಕಚ್ಚತೀವು ಭಾರತದ ಭಾಗವಲ್ಲ ಎಂದು ಆಗ ಗೊತ್ತಿರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಸ್ವಾತಂತ್ರ್ಯದ 75ನೇ ವರ್ಷದ ನಿಮಿತ್ತ 75 ದೋಣಿಗಳ ಕಾರ್ಯಾಚರಣೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಚಾಲನೆ ನೀಡಿದ್ದರು. ಈ ಪೈಕಿ ಒಂದನ್ನು ಈಗ ನೆರೆ ರಾಜ್ಯದ ನೌಕಾಪಡೆ ತಡೆಹಿಡಿದಿದೆ. ಬಿಜೆಪಿ ಈ ಬಗ್ಗೆ ಚರ್ಚಿಸುವುದೇ’ ಎನ್ನುವುದು ಮೀನುಗಾರ ಪೆರುಮಾಳ್‌ ಪ್ರಶ್ನೆ.

ಸಂಘರ್ಷ‌ಕ್ಕೆ ಇಂಬುಗೊಟ್ಟೀತು: ಚಿದಂಬರಂ ಎಚ್ಚರಿಕೆ

ನವದೆಹಲಿ: ‘ಕಚ್ಚತೀವು ದ್ವೀಪ ಕುರಿತಂತೆ 50 ವರ್ಷಗಳ ನಂತರ ‘ಅಸತ್ಯ ಮತ್ತು ಕದನಕ್ಕೆ ಪ್ರೇರೇಪಿಸುವಂತಹ’ ಹೇಳಿಕೆ ನೀಡುವುದು ಶ್ರೀಲಂಕಾ ಸರ್ಕಾರ ಹಾಗೂ ಅಲ್ಲಿ ನೆಲೆಸಿರುವ ತಮಿಳಿಗರ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರು ಕೇಂದ್ರಕ್ಕೆ ಎಚ್ಚರಿಸಿದ್ದಾರೆ. ‘ಸಚಿವ ಎಸ್‌.ಜೈಶಂಕರ್ ಮತ್ತು ಇತರರು ಹೇಳಿಕೆ ನೀಡುವ ಮುನ್ನ ಅಲ್ಲಿ 25 ಲಕ್ಷ ಶ್ರೀಲಂಕಾ ತಮಿಳಿಗರು 10 ಲಕ್ಷ ಭಾರತೀಯ ತಮಿಳಿಯನ್ನರು ಇದ್ದಾರೆ ಎಂದು ಮರೆಯಬಾರದು. ನೆರೆಯ ಚೀನಾ ಭಾರತದ ಸುಮಾರು 2 ಸಾವಿರ ಅಡಿ ಭೂಮಿ ಅತಿಕ್ರಮಣ ಮಾಡಿದೆ. ಕೇಂದ್ರ ಸರ್ಕಾರ ಯುದ್ಧೋತ್ಸಾಹವನ್ನು ಚೀನಾದತ್ತ ತೋರಿಸಲಿ. ’ ಎಂದು ಎಕ್ಸ್ ಜಾಲತಾಣದ ಮೂಲಕ ಸಲಹೆ ಮಾಡಿದ್ದಾರೆ.

‘ಡಿಎಂಕೆಯಿಂದ ಬೇಜವಾಬ್ದಾರಿ ಹೇಳಿಕೆ’

ಚೆನ್ನೈ : ‘ಕಚ್ಚತೀವು ಕುರಿತು ಡಿಎಂಕೆ ಸರ್ಕಾರ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದೆ’ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದಾರೆ. ‘1974ರಲ್ಲಿ ಮುಖ್ಯಮಂತ್ರಿಯಾಗಿದ್ದ ಆಗಿನ ಡಿಎಂಕೆ ಅಧ್ಯಕ್ಷ ದಿವಂಗತ ಎಂ.ಕರುಣಾನಿಧಿ ಅವರಿಗೆ ಆಗ ಕೇಂದ್ರದಲ್ಲಿ ಇದ್ದ ಕಾಂಗ್ರೆಸ್‌ ಸರ್ಕಾರದ ನಡೆ ಕುರಿತಂತೆ ಮಾಹಿತಿ ಇತ್ತು. ಆದರೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ’ ಎಂದು ಹೇಳಿದ್ದಾರೆ. ಮಂಗಳವಾರ ಇಲ್ಲಿ ‘ವಿಕಸಿತ ಭಾರತ’ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಷಯ ಚರ್ಚಿಸಿಲ್ಲ: ಶ್ರೀಲಂಕಾ ಸ್ಪಷ್ಟನೆ

ಕೊಲಂಬೊ : ಕಚ್ಚತೀವು ದ್ವೀಪದ ಸಂಬಂಧ ಸಚಿವ ಸಂಪುಟ ಈವರೆಗೆ ಚರ್ಚೆ ನಡೆಸಿಲ್ಲ ಎಂದು ಶ್ರೀಲಂಕಾ ಸರ್ಕಾರದ ವಕ್ತಾರರು ಮಂಗಳವಾರ ಇಲ್ಲಿ ಹೇಳಿದರು. 1974ರಲ್ಲಿ ಈ ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದ್ದಕ್ಕೆ ಭಾರತದ ಆಡಳಿತಾರೂಢ ಬಿಜೆಪಿ ಕಾಂಗ್ರೆಸ್ ಅನ್ನು ಟೀಕಿಸಿರುವುದಕ್ಕೆ ಶ್ರೀಲಂಕಾ ಈ ಪ್ರತಿಕ್ರಿಯೆ ನೀಡಿದೆ. ‘ಸಂಪುಟದಲ್ಲಿ ಈ ವಿಷಯ ಪ್ರಸ್ತಾಪವಾಗಿಲ್ಲ ಹಾಗಾಗಿ ಚರ್ಚೆ ಆಗಿಲ್ಲ’ ಎಂದು ವಾರ್ತಾ ಸಚಿವ ಬಂದುಲ ಗುಣವರ್ಧನ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT