ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೋತ್ತರ ಯೋಜನೆಗಳಿಗೆ ಮತದಾರರ ವಿವರ ಸಂಗ್ರಹ; ಪಕ್ಷಗಳಿಗೆ ಆಯೋಗದ ಎಚ್ಚರಿಕೆ

Published 2 ಮೇ 2024, 11:40 IST
Last Updated 2 ಮೇ 2024, 11:40 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆ ಮುಗಿದ ನಂತರ ವಿವಿಧ ಪ್ರಯೋಜನಗಳನ್ನು ನೀಡುವುದಕ್ಕಾಗಿ ರಾಜಕೀಯ ಪಕ್ಷಗಳು ಮತದಾರರ ವಿವರಗಳನ್ನು ಸಂಗ್ರಹಿಸುವುದನ್ನು ಚುನಾವಣಾ ಆಯೋಗವು ಗುರುವಾರ ನಿಷೇಧಿಸಿದೆ.

‘ಚುನಾವಣೆ ನಂತರ ಪ್ರಯೋಜನಗಳನ್ನು ವಿತರಿಸುವುದಕ್ಕಾಗಿ ಮತದಾರರ ವಿವರಗಳನ್ನು ಸಂಗ್ರಹಿಸುವುದು ಭ್ರಷ್ಟಾಚಾರವೇ ಸರಿ’ ಎಂದು ಹೇಳಿರುವ ಆಯೋಗ, ಈ ಸಂಬಂಧ ಎಲ್ಲ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿದೆ.

ಪ್ರಸಕ್ತ ಲೋಕಸಭಾ ಚುನಾವಣೆ ವೇಳೆ ‘ಗ್ಯಾರಂಟಿ’ ಕಾರ್ಡುಗಳನ್ನು ಹಂಚಿಕೆ ಮಾಡುತ್ತಿರುವ ಕಾಂಗ್ರೆಸ್‌ ಮೇಲೆ ಆಯೋಗದ ಈ ಕ್ರಮವು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

‘ಈ ವಿಷಯವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಕೆಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರ ವಿವರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಿದೆ. ಇಂತಹ ನಡೆಯು, ನ್ಯಾಯಸಮ್ಮತ ಸಮೀಕ್ಷೆ ಹಾಗೂ ಚುನಾವಣೆ ನಂತರ ಕೆಲ ಪ್ರಯೋಜನಗಳನ್ನು ನೀಡುವುದಕ್ಕಾಗಿ ಮತದಾರರ ವಿವರ ಸಂಗ್ರಹಿಸುವುದರ ನಡುವಿನ ವ್ಯತ್ಯಾಸವನ್ನು ಅಳಿಸಿ ಹಾಕುವಂತಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಐದು ನಿದರ್ಶನಗಳನ್ನು ಆಯೋಗ ಉಲ್ಲೇಖಿಸಿದೆ.

‘ಜಾಹೀರಾತುಗಳು, ಸಮೀಕ್ಷೆಗಳು ಅಥವಾ ಆ್ಯಪ್‌ ಮೂಲಕ ವ್ಯಕ್ತಿಗಳ ಹೆಸರು ನೋಂದಣಿ ಮಾಡಿಸುವಂತಹ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಆಯೋಗ ಸೂಚಿಸಿದೆ.

ಆಯೋಗದ ನಿರ್ದೇಶನ ಉಲ್ಲಂಘಿಸುವವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ ಸೆಕ್ಷನ್ 123(1) ಹಾಗೂ ಐಪಿಸಿ ಸೆಕ್ಷನ್‌ 171(ಬಿ) ಅಡಿ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದೆ.

‘ಗ್ಯಾರಂಟಿ ಕಾರ್ಡು’ಗಳನ್ನು ಹಂಚಿಕೆ ಮಾಡುತ್ತಿದ್ದ ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ಇತ್ತೀಚೆಗೆ ಆಯೋಗಕ್ಕೆ ದೂರು ನೀಡಿತ್ತು.

ಕಾರ್ಡು ಹಂಚಿಕೆ ಮುಂದುವರಿಕೆ: ಕಾಂಗ್ರೆಸ್‌
‘ಪಕ್ಷವು ಗ್ಯಾರಂಟಿ ಕಾರ್ಡುಗಳನ್ನು ಹಂಚುವುದನ್ನು ಮುಂದುವರಿಸುವುದು. ಆದರೆ ವ್ಯಕ್ತಿಗಳ ವಿವರಗಳಿರುವ ರಸೀದಿ (ಕೌಂಟರ್‌ಫಾಯಿಲ್) ಇದರೊಂದಿಗೆ ಇರುವುದಿಲ್ಲ’ ಎಂದು ಕಾಂಗ್ರೆಸ್‌ ಪಕ್ಷ ಪ್ರತಿಕ್ರಿಯಿಸಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರ ಸಹಿ ಹೊಂದಿದ ಕಾರ್ಡುಗಳನ್ನು ಪಕ್ಷವು ಹಂಚುತ್ತಿದೆ. ಐದು ‘ನ್ಯಾಯ’ಗಳಡಿ ಸಾಮಾಜಿಕ ಪ್ರಾತಿನಿಧ್ಯ ರೈತರು ಯುವಕರು ಮಹಿಳೆ ಮತ್ತು ಕಾರ್ಮಿಕರಿಗೆ 25 ‘ಗ್ಯಾರಂಟಿ’ಗಳನ್ನು ಒದಗಿಸುವ ಭರವಸೆಯನ್ನು ಪಕ್ಷವು ಈ ಕಾರ್ಡುಗಳ ಮೂಲಕ ನೀಡುತ್ತಿದೆ. ಈ ಕಾರ್ಡುಗಳನ್ನು ಹಂಚುವಾಗ ಅದರೊಂದಿಗಿನ ಕೌಂಟರ್‌ಫಾಯಿಲ್‌ನಲ್ಲಿ ಮತದಾರರ ವಿವರಗಳನ್ನು ನಮೂದಿಸಿ ಅದನ್ನು ಪಕ್ಷ ತನ್ನ ಬಳಿ ಇಟ್ಟುಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT