ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Election Results: ಪ್ರಮುಖ ನಾಯಕರ ಸೋಲು–ಗೆಲುವು

Published 4 ಜೂನ್ 2024, 22:42 IST
Last Updated 4 ಜೂನ್ 2024, 22:42 IST
ಅಕ್ಷರ ಗಾತ್ರ

ಸೋತವರು

ಕೆ. ಅಣ್ಣಾಮಲೈ, ಬಿಜೆಪಿ, ತಮಿಳುನಾಡು

ತಮಿಳುನಾಡು ಬಿಜೆಪಿ ಪ್ರಮುಖ ನಾಯಕ ಕೆ. ಅಣ್ಣಾಮಲೈ ಅವರು ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ. 2019ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದ ಇವರು, 2020ರ ಆಗಸ್ಟ್‌ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅದಾದ 10 ತಿಂಗಳಲ್ಲಿ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಲಾಯಿತು. ಕೋಯಮತ್ತೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್‌ ಅವರೆದುರು ಸೋತಿದ್ದಾರೆ.

ಮಾಧವಿ ಲತಾ

ತೆಲುಗು ಮತ್ತು ತಮಿಳು ಚಿತ್ರಗಳ ಜನಪ್ರಿಯ ನಟಿ ಮಾಧವಿ ಲತಾ ಅವರು ಬಿಜಿಪಿ ಟಿಕೆಟ್‌ನಲ್ಲಿ ತೆಲಂಗಾಣದ ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ತಮ್ಮ ಎದುರಾಳಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರ ವಿರುದ್ಧ 3.38 ಲಕ್ಷ ಮತಗಳ ಅಂತರದಲ್ಲಿ ಅವರು ಸೋತಿದ್ದಾರೆ.

ರಾಜೀವ್‌ ಚಂದ್ರಶೇಖರ್‌ 

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಕೇರಳದ ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಹಾಲಿ ಸಂಸದ, ಜನಪ್ರಿಯ ನಾಯಕ ಶಿಶಿ ತರೂರ್ ಅವರ ವಿರುದ್ಧ ರಾಜೀವ್‌ ಅವರು ಸೋಲು ಅನುಭವಿಸಿದ್ದಾರೆ. 

ತಮಿಳ್‌ ಇಸೈ ಸೌಂದರರಾಜನ್‌

ಚೆನ್ನೈ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದ ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕಿ ತಮಿಳ್‌ ಇಸೈ ಅವರು ಡಿಎಂಕೆಯ ಟಿ. ಸುಮತಿ ಅವರೆದುರು ಸೋತಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಅವರು 1999ರಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಪುದುಚೆರಿಯ ಲೆಫ್ಟಿನಂಟ್‌ ಗವರ್ನರ್‌ ಹಾಗೂ ತೆಲಂಗಾಣದ ರಾಜ್ಯಪಾಲಾಗಿಯೂ ಸೇವೆ ಸಲ್ಲಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ತೂತುಕುಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಡಿಎಂಕೆಯ ಕನಿಮೋಳಿ ಎದುರು ಸೋತಿದ್ದರು.

ಗೆದ್ದವರು

ಶಶಿಕಾಂತ್‌ ಸೆಂಥಿಲ್‌

ಕರ್ನಾಟಕ ಕೇಡರ್‌ನ ಮಾಜಿ ಐಎಎಸ್‌ ಅಧಿಕಾರಿ ಶಶಿಕಾಂತ್‌ ಸೆಂಥಲ್‌ ಅವರು ಈ ಬಾರಿಯ ಚುನಾವಣೆಯಲ್ಲಿ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಹುದ್ದೆಗೆ ರಾಜೀನಾಮೆ ನೀಡಿ 2019ರಲ್ಲಿ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. 2023ರ ಕರ್ನಾಟಕ ಚುನಾವಣೆ ವೇಳೆ ಕಾಂಗ್ರೆಸ್‌ ಪರ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಶಶಿ ತರೂರ್‌

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕ ಎಂದೇ ಗುರುತಿಸಿಕೊಂಡಿರುವ ಶಶಿ ತರೂರ್‌ ಅವರು ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆ ಆಗಿದ್ದಾರೆ. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಈ ಬಾರಿ ಶಶಿ ತರೂರ್‌ ಎದುರಾಳಿಯಾಗಿ ಕೇರಳದ ತಿರುವನಂತಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕಿಳಿದಿದ್ದರು. ಈ ಕಾರಣಕ್ಕಾಗಿ ಈ ಕ್ಷೇತ್ರದ ಫಲಿತಾಂಶವು ಕುತೂಹಲ ಮೂಡಿಸಿತ್ತು.

ಕರಣ್‌ ಭೂಷಣ್‌ ಸಿಂಗ್‌

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಕಾರಣಕ್ಕೆ ವಿವಾದಕ್ಕೀಡಾಗಿದ್ದ ಬಿಜೆಪಿ ಪ್ರಮುಖ ನಾಯಕ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ಅವರ ಪುತ್ರ ಕರಣ್‌ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದ ಕೈಸರ್‌ಗಂಜ್‌ ಕ್ಷೇತ್ರದಿಂದ //    // ಸಾಧಿಸಿದ್ದಾರೆ. //ತಮ್ಮ ಗೆಲುವನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ//. ದೌರ್ಜನ್ಯ ಪ್ರಕರಣದ ಕಾರಣ ಬ್ರಿಜ್‌ ಭೂಷಣ್‌ಗೆ ಟಿಕೆಟ್‌ ನಿರಾಕರಿಸಿದ್ದ ಬಿಜೆಪಿ, ಅವರ ಪುತ್ರನನ್ನು ಕಣಕ್ಕಿಳಿಸಿತ್ತು. ಪಕ್ಷದ ಈ ನಡೆಗೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. 

ಅಭಿಜಿತ್‌ ಗಂಗೋಪಾದ್ಯಾಯ

ಈ ಬಾರಿ ಬಿಜೆಪಿಯು ಕಣಕ್ಕಿಳಿಸಿದ್ದ ಪ್ರಮುಖ ಅಭ್ಯರ್ಥಿಗಳಲ್ಲಿ ಕಲ್ಕತ್ತ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾದ್ಯಾಯ ಒಬ್ಬರು. ಪಶ್ಚಿಮ ಬಂಗಾಳದ ತುಮಲುಕ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಇವರು ತಮ್ಮ ಎದುರಾಳಿ, ಟಿಎಂಸಿಯ ದೇಬಾಂಕ್ಷು ಭಟ್ಟಾಚಾರ್ಯ ಅವರ ಎದುರು //     ಅಂತರದ ಗೆಲುವು// ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT