ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Andhra Pradesh Elections: ಆಂಧ್ರದ ಮತದಾರರಲ್ಲಿ ಜೀವನೋಪಾಯದ ಪ್ರಶ್ನೆ

ಎಸ್.ಎನ್.ವಿ. ಸುಧೀರ್
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ವಿಜಯವಾಡ/ಗುಂಟೂರು/ಪ್ರಕಾಶಂ: ಐವತ್ತು ವರ್ಷ ವಯಸ್ಸಿನ ಜಯಮ್ಮ ಅವರು ಈಚಿನ ದಿನಗಳಲ್ಲಿ ತೃಪ್ತಿಯಿಂದ ಇದ್ದಾರೆ. ವಿಜಯವಾಡದ ನಾಲ್ಕು ಮನೆಗಳ ಕೆಲಸದ ಮೂಲಕ ಅವರು ತಿಂಗಳಿಗೆ ಅಂದಾಜು ₹10 ಸಾವಿರ ಸಂಪಾದಿಸುತ್ತಾರೆ. ಇದರ ಜೊತೆಯಲ್ಲೇ ಅವರ ಕುಟುಂಬಕ್ಕೆ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರದ ಒಂದಲ್ಲ ಒಂದು ಯೋಜನೆಯ ಮೂಲಕ ವರ್ಷಕ್ಕೆ ₹60 ಸಾವಿರದಿಂದ ₹1 ಲಕ್ಷದವರೆಗೆ ನೆರವು ಸಿಗುತ್ತಿದೆ.

‘ನಾನು ಸಂಪಾದಿಸುವುದು ಮಾತ್ರವೇ ಅಲ್ಲದೆ ಸರ್ಕಾರದಿಂದ ಸಿಗುವ ಹಣ ಬಳಸಿ ಈಗ ನಾನು ನನ್ನ ಮೊಮ್ಮಗಳಿಗೆ ಒಮ್ಮೊಮ್ಮೆ ಚಾಕೊಲೇಟ್ ಖರೀದಿಸುತ್ತೇನೆ, ಕೆಲವೊಮ್ಮೆ ಬೇರೆ ಏನಾದರೂ ಖರೀದಿಸುತ್ತೇನೆ. ನನ್ನ ಪತಿಯ ಆರೋಗ್ಯ ಸರಿ ಇರುವುದಿಲ್ಲವಾದ ಕಾರಣ, ಅವರು ಕೆಲಸ ಮಾಡುತ್ತಿಲ್ಲ’ ಎಂದು ‘ಪ್ರಜಾವಾಣಿ’ ಜೊತೆ ಮಾತಿಗೆ ನಿಂತ ಜಯಮ್ಮ ಹೇಳಿದರು.

ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ನೇತೃತ್ವದ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಪ್ರಯೋಜನ ಪಡೆದಿರುವ ಹಲವು ಕುಟುಂಬಗಳ ಕಥೆ ಜಯಮ್ಮ ಅವರ ಕಥೆಯಂತೆಯೇ ಇದೆ. ಅಭಿವೃದ್ಧಿ ಯೋಜನೆಗಳ ಮೂಲಕ ಫಲಾನುಭವಿಗಳ ಖಾತೆಗೆ ₹2.6 ಲಕ್ಷ ಕೋಟಿಯಷ್ಟು ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ರೆಡ್ಡಿ ಅವರು ಯಾವಾಗಲೂ ಹೇಳುತ್ತಾರೆ.

ಅಂದರೆ, ತಮ್ಮ ನೇತೃತ್ವದ ಸರ್ಕಾರವು ಬಡವರ ಕಿಸೆಗೆ ಹಣ ಹಾಕಿದೆ ಎಂದು ಅವರು ಹೇಳುತ್ತಾರೆ. ಆರ್ಥಿಕ ನೆರವು ತಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ನೆರವು ಪಡೆದಿರುವ ಕುಟುಂಬಗಳು ಹೇಳುತ್ತಿವೆ. ಆದರೆ, ಮುಂಬರುವ ಚುನಾವಣೆಯು ಅಭಿವೃದ್ಧಿ ಕಾರ್ಯಸೂಚಿ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯಗಳ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಲಿದೆ ಎಂಬುದನ್ನು ಆಂಧ್ರಪ್ರದೇಶದ ಕರಾವಳಿಯ ನಗರಗಳು, ಪಟ್ಟಣಗಳ ಸಂಚಾರ ನಡೆಸಿದಾಗ ಗೊತ್ತಾಗುತ್ತದೆ. ಮತದಾರರ ಮನಸ್ಸಿನಲ್ಲಿ ಇರುವ ಗೊಂದಲಗಳು ಕೂಡ ಚುನಾವಣೆಯ ಮೇಲೆ ಪ್ರಭಾವ ಬೀರಲಿವೆ.

‘ನನ್ನ ಮಗಳು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಳೆ. ನನ್ನ ಕುಟುಂಬವು ಅಮ್ಮಾವೊಡಿ ಯೋಜನೆಗೆ ಮಾತ್ರ ಅರ್ಹವಾಗಿದೆ. ನನ್ನ ಸಣ್ಣ ಉದ್ಯಮಕ್ಕೆ ಸರ್ಕಾರದ ಯೋಜನೆಯ ಅಡಿಯಲ್ಲಿ ನೆರವು ಪಡೆಯಲು ಯತ್ನಿಸಿದೆ. ಅದು ಸಿಗಲಿಲ್ಲ. ಅಮ್ಮಾವೊಡಿ ಯೋಜನೆಯ ಅಡಿಯಲ್ಲಿ ಪ್ರತಿವರ್ಷ ನೀಡುವ ₹12 ಸಾವಿರವು ಮೂರು ಮಂದಿಯ ನನ್ನ ಕುಟುಂಬಕ್ಕೆ ಸಾಕಾಗುವುದಿಲ್ಲ. ಸೋಡಾ ತಯಾರಿಕೆಯನ್ನು ನಾನು 40 ವರ್ಷಗಳಿಂದ ಮಾಡುತ್ತಿದ್ದೇನೆ. ವಹಿವಾಟು ಇಷ್ಟು ಕಡಿಮೆ ಆಗಿದ್ದನ್ನು ಕಳೆದ ನಾಲ್ಕು ವರ್ಷಗಳಲ್ಲಿ ಕಂಡಿರಲಿಲ್ಲ. ಮಾಮೂಲಿ ಆದಾಯಕ್ಕೆ ಪೆಟ್ಟುಬಿದ್ದರೆ ಸರ್ಕಾರದಿಂದ ಬರುವ ಯಾವುದೇ ಹಣ ಸಾಕಾಗುವುದಿಲ್ಲ’ ಎಂದು ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ತಳ್ಳುಗಾಡಿಯಲ್ಲಿ ಸೋಡಾ ಮಾರಾಟ ಮಾಡುವ ಶೇಖ್ ಸುಭಾನಿ ಹೇಳಿದರು.

ಕ್ಯಾಬ್ ಇಟ್ಟುಕೊಂಡಿರುವ ಮೊಹಮ್ಮದ್ ಅಹ್ಮದ್ ವಲಿ ಅವರೂ ಇದೇ ಬಗೆಯ ಅನಿಸಿಕೆ ವ್ಯಕ್ತಪಡಿಸಿದರು. ‘2014ರಿಂದ 2019ರವರೆಗೆ ವಿಜಯವಾಡ ಸುತ್ತ ಬಹಳ ಚಟುವಟಿಕೆಗಳು ನಡೆಯುತ್ತಿದ್ದವು. ಕ್ಯಾಬ್ ಚಾಲಕರಾಗಿ ನಮಗೆ ಕೆಲವೊಮ್ಮೆ ಊಟ, ತಿಂಡಿ ಮಾಡಲೂ ಬಿಡುವು ಸಿಗುತ್ತಿರಲಿಲ್ಲ. ಆದರೆ ಜಗನ್ ಅವರು ಮುಖ್ಯಮಂತ್ರಿ ಆದ ನಂತರ ಆ ಹುರುಪು ಮಾಯವಾಗಿದೆ. ಆ ದಿನಗಳು ನನ್ನ ಪಾಲಿಗೆ ಬಹಳ ಚೆನ್ನಾಗಿದ್ದವು. ವಾಹನಮಿತ್ರ ಯೋಜನೆಯ ಪ್ರಯೋಜನವು ಮೊದಲ ವರ್ಷ ಮಾತ್ರ ಸಿಕ್ಕಿದೆ’ ಎಂದು ವಲಿ ಅವರು ತಿಳಿಸಿದರು.

2019ಕ್ಕೂ ಮೊದಲು ಬೇಡಿಕೆ ಪೂರೈಸುವುದಕ್ಕಾಗಿ ಸಾಲ ಮಾಡಿ ಹೊಸದೊಂದು ಕ್ಯಾಬ್ ಖರೀದಿಸಲು ಕೂಡ ವಲಿ ಆಲೋಚಿಸಿದ್ದರು. ಆದರೆ, ಈಗ ಅವರು, ಕ್ಯಾಬ್ ಖರೀದಿಸದೆ ಇದ್ದುದಕ್ಕೆ ಸಮಾಧಾನಪಡುತ್ತಿದ್ದಾರೆ.

 ‘ಜಗನ್ ಅಣ್ಣನ ಪರ ನಿಲ್ಲುವೆವು’ 

‘2014ರಲ್ಲಿ ನಾನು ಟಿಡಿಪಿ ‍ಪಕ್ಷಕ್ಕೆ ಮತ ನೀಡಿದೆ. ಟಿಡಿಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಸ್ಥಳೀಯ ನಾಯಕರು ನನ್ನ ಕುಟುಂಬದ ಹೆಸರನ್ನು ಸರ್ಕಾರಿ ಯೋಜನೆಗಳ ಪಟ್ಟಿಯಲ್ಲಿ ಸೇರಿಸಿರಲಿಲ್ಲ. 2019ರಲ್ಲಿ ನನ್ನ ಕುಟುಂಬದವರೆಲ್ಲ ವೈಎಸ್‌ಆರ್‌ಸಿಪಿ ಪಕ್ಷಕ್ಕೆ ಮತ ಹಾಕಿದೆವು. ಈಗ ನಮಗೆ ಸರ್ಕಾರದಿಂದ ಎಲ್ಲ ಪ್ರಯೋಜನಗಳೂ ಸಿಗುತ್ತಿವೆ. ಜೀವನ ಸುಲಭವಾಗಿದೆ. ಈ ಸಂದರ್ಭದಲ್ಲಿ ಜಗನ್ ಅಣ್ಣನ ಪರವಾಗಿ ನಿಲ್ಲುವುದು ನಮ್ಮ ಜವಾಬ್ದಾರಿ’ ಎಂದು ಪ್ರಕಾಶಂ ಜಿಲ್ಲೆಯ ಕೊಂಡೇಪಿ ಮಂಡಲದ ವೆಣ್ಣೂರಿನ ಬಡಗಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT