ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | 4ನೇ ಹಂತದ ಮತದಾನದ ವೇಳೆ ಹಲವೆಡೆ ಹಿಂಸಾಚಾರ

96 ಲೋಕಸಭಾ ಕ್ಷೇತ್ರಗಳಲ್ಲಿ ಶೇ 62.84 ಮತದಾನ
Published 13 ಮೇ 2024, 16:21 IST
Last Updated 13 ಮೇ 2024, 18:44 IST
ಅಕ್ಷರ ಗಾತ್ರ

ನವದೆಹಲಿ‌: ಲೋಕಸಭಾ ಚುನಾವಣೆಯ ನಾಲ್ಕನೆಯ ಹಂತದ ಮತದಾನದಲ್ಲಿ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಈ ಹಂತದಲ್ಲಿ 96 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಶೇಕಡ 62.84ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತದಾನ ಪ್ರಮಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗವು ರಾತ್ರಿ 8 ಗಂಟೆಗೆ ಬಿಡುಗಡೆ ಮಾಡಿದೆ. ಹಲವು ಮತಗಟ್ಟೆಗಳಲ್ಲಿ ಮತದಾನಕ್ಕಾಗಿ ಮತದಾರರು ಸರದಿಯಲ್ಲಿ ನಿಂತಿದ್ದಾರೆ, 6 ಗಂಟೆಯ ನಂತರವೂ ಮತದಾನ ಮುಂದುವರಿದಿದೆ. ಹೀಗಾಗಿ, ಮತದಾನದ ಪ್ರಮಾಣದಲ್ಲಿ ವ್ಯತ್ಯಾಸ ಆಗಬಹುದು ಎಂದು ಆಯೋಗ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತದಾನ, ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಮತದಾನ ಆಗಿದೆ.

ಆಂಧ್ರ ಪ್ರದೇಶದಲ್ಲಿನ ಚುನಾವಣಾ ಹಿಂಸಾಚಾರಕ್ಕೆ ಕಾರಣರು ಯಾರು ಎಂಬ ವಿಚಾರವಾಗಿ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪ ನಡೆದಿದೆ. ಪಲ್ನಾಡು, ಕಡಪ ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿದೆ.

ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜೊತೆಯಲ್ಲೇ ವಿಧಾನಸಭೆಗೂ ಮತದಾನ ನಡೆದಿದೆ. ಒಡಿಶಾದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕೂಡ ಸೋಮವಾರ ಮತದಾನ ಆಗಿದೆ.

ಆಂಧ್ರ ಪ್ರದೇಶದಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಡಿಪಿ ಪಕ್ಷವು ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ವೈಎಸ್‌ಆರ್‌ಸಿಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಟಿಡಿಪಿ ನಾಯಕರು ವೇಮೂರು ವಿಧಾನಸಭಾ ಕ್ಷೇತ್ರದಲ್ಲಿ ಐದು ಮತಗಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಆರೋಪಿಸಿದೆ. ಕುಪ್ಪಂನಲ್ಲಿ ಒಂದು ಮತಗಟ್ಟೆಯ ಅಧಿಕಾರಿಯು ಟಿಡಿಪಿ ನಾಯಕರ ಜೊತೆ ಶಾಮೀಲಾಗಿ, ಚುನಾವಣಾ ಅಕ್ರಮಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ದೂರಿದೆ.

ಜನರಿಗೆ ತಮ್ಮ ಹಕ್ಕು ಚಲಾಯಿಸಲು ರಾಜ್ಯದಲ್ಲಿ ಶಾಂತಿಯುತವಾದ ವಾತಾವರಣ ಇರಲಿಲ್ಲ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

‘ಬೆಳಿಗ್ಗೆಯಿಂದ ವರದಿಯಾಗುತ್ತಿರುವ ಹಿಂಸಾಚಾರವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ವೈಎಸ್‌ಆರ್‌ಸಿಪಿ ಪಕ್ಷವು ತನ್ನ ಸಂಚನ್ನು ಸಂಘಟಿತವಾಗಿ ಕಾರ್ಯರೂಪಕ್ಕೆ ತರುತ್ತಿದೆ. ಮಾಚೆರ್ಲ ಕ್ಷೇತ್ರದಲ್ಲಿ ಹಿಂಸಾಚಾರವನ್ನು ತಡೆಯುವಲ್ಲಿ ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ’ ಎಂದು ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಲವೆಡೆ ಜನರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದರು. ಶಹಜಹಾನಪುರದ ಕೆಲವು ಹಳ್ಳಿಗಳ ಜನರು ರಸ್ತೆ ಸೌಲಭ್ಯ ಸರಿಯಿಲ್ಲ, ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ದೂರಿ ಮತದಾನದಿಂದ ದೂರ ಉಳಿದರು.

ಪಶ್ಚಿಮ ಬಂಗಾಳದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನದ ದಿನ ಹಿಂಸಾಚಾರ ನಡೆದಿದೆ. ಬೀರ್‌ಭೂಮ್ ಮತ್ತು ಬರ್ಧಮಾನ್–ದುರ್ಗಾಪುರ ಲೋಕಸಭಾ ಕ್ಷೇತ್ರಗಳ ಹಲವು ಕಡೆಗಳಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ನಾಲ್ಕನೆಯ ಹಂತದ ಮತದಾನವು ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗ ಹೇಳಿದೆಯಾದರೂ, ಇವಿಎಂ ಸರಿಯಾಗಿ ಕೆಲಸ ಮಾಡಿಲ್ಲ ಎಂದು, ಏಜೆಂಟರಿಗೆ ಮತಗಟ್ಟೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಒಟ್ಟು 1,088 ದೂರುಗಳನ್ನು ವಿವಿಧ ಪಕ್ಷಗಳು ಆಯೋಗಕ್ಕೆ ಸಲ್ಲಿಸಿವೆ.

ಬರ್ಧಮಾನ್–ದುರ್ಗಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿಲೀಪ್ ಘೋಷ್ ಅವರ ವಾಹನಗಳ ಮೇಲೆ ಎರಡು ಕಡೆಗಳಲ್ಲಿ ಕಲ್ಲು ತೂರಲಾಗಿದೆ. ಟಿಎಂಸಿ ಕಾರ್ಯಕರ್ತರು ಘೋಷ್ ಅವರಿಗೆ ಅಡ್ಡಿ ಉಂಟುಮಾಡುವ ಕೆಲಸ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಒಡಿಶಾದ ಹಲವು ಕಡೆಗಳಲ್ಲಿ ಇವಿಎಂನಲ್ಲಿ ದೋಷಗಳು ಕಂಡುಬಂದವು ಎಂದು ವರದಿಯಾಗಿದೆ. 

ಎಲ್ಲೆಲ್ಲಿ ಹಿಂಸಾಚಾರ

ಆಂಧ್ರಪ್ರದೇಶ

l ತೆನಾಲಿ ಕ್ಷೇತ್ರದ ಶಾಸಕ, ವೈಎಸ್‌ಆರ್‌ಸಿಪಿ ನಾಯಕ ಎ. ಶಿವಕುಮಾರ್ ಅವರು ತೆನಾಲಿಯಲ್ಲಿ ಮತದಾರರೊಬ್ಬರ ಕಪಾಲಕ್ಕೆ ಬಾರಿಸಿದ್ದಾರೆ. ಸರದಿ ತಪ್ಪಿಸಿ ಶಾಸಕ ಮುಂದೆ ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ ಶಾಸಕ ಹೊಡೆದಿದ್ದಾರೆ ಎಂಬ ದೂರು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಆ ಮತದಾರ ಕೂಡ ಶಾಸಕನ ಕೆನ್ನೆಗೆ ಬಾರಿಸಿದ್ದಾರೆ ಎಂದು ತಿಳಿಸಿದ್ದಾರೆ. ಬಳಿಕ ಶಾಸಕರ ಬೆಂಬಲಿಗರು ಮತದಾರನನ್ನು ಥಳಿಸಿದ್ದಾರೆ

l ಮೈಡೂರುಕು ಕ್ಷೇತ್ರದ ನಕ್ಕಲದಿನ್ನೆ ಹಳ್ಳಿಯಲ್ಲಿ ಟಿಡಿಪಿ ಏಜೆಂಟ್‌ ಒಬ್ಬರ ಮೇಲೆ ಹಲ್ಲೆ ನಡೆದಿದೆ

l ವೈಎಸ್ಆರ್‌ಸಿಪಿ ಏಜೆಂಟ್ ಸುರೇಶ್ ರೆಡ್ಡಿ ಅವರಿಗೆ ಚಿತ್ತೂರಿನ ಗುಡಿಪಲ ಮಂಡಲದ ಮಂಡಿ ಕೃಷ್ಣಾಪುರಂ ಹಳ್ಳಿಯಲ್ಲಿ ಚೂರಿಯಿಂದ ಇರಿಯಲಾಗಿದೆ ಎಂದು ಪಕ್ಷ ದೂರಿದೆ.
ಪಕ್ಷದ ಸದಸ್ಯ ಬಿ. ಅಂಜಿರೆಡ್ಡಿ ಅವರ ಮೇಲೆ
ಟಿಡಿಪಿ ಬೆಂಬಲಿಗರು ದಾಳಿ ಮಾಡಿದ್ದಾರೆ,
ಅವರ ತಲೆಗೆ ಗಾಯ ಆಗಿದೆ ಎಂದು
ಆರೋಪಿಸಿದೆ

l ಪಲ್ನಾಡು ಜಿಲ್ಲೆಯ ರೆಂಟಿಚಿಂತಲ ಮಂಡಲದ ರೆಂಟಾಲ ಹಳ್ಳಿಯಲ್ಲಿ ಟಿಡಿಪಿ ಬೆಂಬಲಿಗರ ಮೇಲೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ದೂರಿ ಟಿಡಿಪಿ ಶಾಸಕ ಮೊಹಮ್ಮದ್ ಅಹ್ಮದ್ ಶರೀಫ್ ಅವರು ಮುಖ್ಯ ಚುನಾವಣಾ ಅಧಿಕಾರಿ ಮುಕೇಶ್ ಕುಮಾರ್ ಮೀನಾ ಅವರಿಗೆ ಪತ್ರ ಬರೆದಿದ್ದಾರೆ

l ವೈಎಸ್‌ಆರ್‌ಸಿಪಿ ಹಿರಿಯ ನಾಯಕ ನಂದಿಗಂ ಸುರೇಶ್ ಅವರ ವಾಹನಕ್ಕೆ ಟಿಡಿಪಿ ಕಾರ್ಯಕರ್ತರು ಹಾನಿ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಪಶ್ಚಿಮ ಬಂಗಾಳ

l ಬೀರ್‌ಭೂಮ್ ಲೋಕಸಭಾ ಕ್ಷೇತ್ರದ ನಾನೂರ್‌ನಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

l ಬಿಜೆಪಿ ಅಭ್ಯರ್ಥಿ ದಿಲೀಪ್‌ ಘೋಷ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ

l ಕೃಷ್ಣಾನಗರ ಲೋಕಸಭಾ ಕ್ಷೇತ್ರದ ಛಪರಾದಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರ
ಲಾಗಿದೆ. ಈ ಆರೋಪವನ್ನು ಟಿಎಂಸಿ ನಿರಾಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT