ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ಹಂತದ ಮತದಾನ ಇಂದು; ಮೋದಿ ಸೇರಿದಂತೆ ಕಣದಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ

57 ಕ್ಷೇತ್ರಗಳಲ್ಲಿ ಮತದಾನ l ಕಣದಲ್ಲಿ ಮೋದಿ, ಕಂಗನಾ, ಚನ್ನಿ l ಜೂನ್‌ 4ರಂದು ಮತಎಣಿಕೆ
Published 31 ಮೇ 2024, 23:08 IST
Last Updated 31 ಮೇ 2024, 23:08 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಶನಿವಾರ ನಡೆಯಲಿದೆ. 57 ಕ್ಷೇತ್ರಗಳಲ್ಲಿ ಕಣದಲ್ಲಿರುವ 904 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಅಂತಿಮ ಹಂತದಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ.

ನರೇಂದ್ರ ಮೋದಿ (ಬಿಜೆಪಿ): ವಾರಾಣಸಿ, ಉತ್ತರ ಪ್ರದೇಶ

ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಪ್ರಧಾನಿ ನರೇಂದ್ರ ಮೋದಿ, ‘ಹ್ಯಾಟ್ರಿಕ್‌’ ಜಯದ ನಿರೀಕ್ಷೆಯಲ್ಲಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ ಪಕ್ಷವು ಅಜಯ್‌ ರಾಯ್‌ ಅವರನ್ನು ಸ್ಪರ್ಧೆಗಿಳಿಸಿದೆ. 2001ರಿಂದ 2014ರವರೆಗೆ ಗುಜರಾತ್‌ನ ಮುಖ್ಯಮುಂತ್ರಿಯಾಗಿದ್ದ ಮೋದಿ, ರಾಷ್ಟ್ರಮಟ್ಟದ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಲು ವಾರಾಣಸಿ ಕ್ಷೇತ್ರವನ್ನು ಆಯ್ದುಕೊಂಡಿದ್ದರು. 2014ರ ಚುನಾವಣೆಯಲ್ಲಿ 3.71 ಲಕ್ಷ ಮತಗಳು ಮತ್ತು 2019ರಲ್ಲಿ 4.79 ಲಕ್ಷ ಮತಗಳ ಅಂತರದಿಂದ ಜಯಿಸಿದ್ದ ಅವರು ಈ ಬಾರಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ರವಿಕಿಶನ್ (ಬಿಜೆಪಿ): ಗೋರಖಪುರ, ಉತ್ತರ ಪ್ರದೇಶ

ಯೋಗಿ ಆದಿತ್ಯನಾಥ ಅವರು ಪ್ರತಿನಿಧಿಸಿದ್ದ ಗೋರಖಪುರ ಕ್ಷೇತ್ರದಲ್ಲಿ ಭೋಜ್‌ಪುರಿ ನಟ ರವಿಕಿಶನ್ ಅವರಿಗೆ ಬಿಜೆಪಿ ಮತ್ತೆ ಅವಕಾಶ ನೀಡಿದೆ. ಅವರ ವಿರುದ್ಧ ಸಮಾಜವಾದಿ ಪಕ್ಷದ ಕಾಜಲ್‌ ನಿಶಾದ್‌ ಕಣದಲ್ಲಿದ್ದಾರೆ. 2019ರ ಚುನಾವಣೆಯಲ್ಲಿ ರವಿಕಿಶನ್‌ ಅವರು ಎಸ್‌ಪಿಯ ರಾಮ್‌ಭುಯಲ್ ನಿಶಾದ್‌ ಅವರನ್ನು ಮಣಿಸಿದ್ದರು.

ಕಂಗನಾ ರನೌತ್ (ಬಿಜೆಪಿ): ಮಂಡಿ, ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿರುವ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ನಟಿ ಕಂಗನಾ ರನೌತ್‌ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಪಕ್ಷವು ಕಂಗನಾ ವಿರುದ್ಧ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಅಖಾಡಕ್ಕಿಳಿಸಿದೆ. ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿಕ್ರಮಾದಿತ್ಯ, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಹಾಗೂ ಕಾಂಗ್ರೆಸ್‌ ಹಿಮಾಚಲ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರ ಪುತ್ರರಾಗಿದ್ದಾರೆ.

ಅನುರಾಗ್‌ ಠಾಕೂರ್‌ (ಬಿಜೆಪಿ): ಹಮೀರ್‌ಪುರ, ಹಿಮಾಚಲ ಪ್ರದೇಶ

ಬಿಜೆಪಿಯು ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಿಂದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರನ್ನು ಕಣಕ್ಕಿಳಿಸಿದೆ. ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್‌ನಿಂದ ಸತ್ಪಾಲ್‌ಸಿಂಗ್‌ ರಾಯಜಾದಾ ಅಖಾಡಕ್ಕಿಳಿದಿದ್ದಾರೆ. ಅನುರಾಗ್‌ ಅವರು 2008ರ ಉಪ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮೊದಲ ಬಾರಿ ಗೆದ್ದಿದ್ದರು. ಆ ಬಳಿಕ 2009, 2014 ಮತ್ತು 2019 ರಲ್ಲೂ ಸತತವಾಗಿ ಇಲ್ಲಿಂದ ಆಯ್ಕೆಯಾಗಿದ್ದಾರೆ.

ಮೀಸಾ ಭಾರತಿ (ಆರ್‌ಜೆಡಿ): ಪಾಟಲಿಪುತ್ರ, ಬಿಹಾರ

ಆರ್‌ಜೆಡಿಯು ಲಾಲು ಪ್ರಸಾದ್ ಅವರ ಹಿರಿಯ ಪುತ್ರಿ ಮೀಸಾ ಭಾರತಿ ಅವರನ್ನು ಬಿಹಾರದ ಪಾಟಲಿಪುತ್ರ ಕ್ಷೇತ್ರದಿಂದ ಸ್ಪರ್ಧೆಗಿಳಿಸಿದೆ. ಅವರ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ರಾಮ್‌ ಕೃಪಾಲ್‌ ಯಾದವ್ ಅವರು ‘ಹ್ಯಾಟ್ರಿಕ್‌’ ಜಯದ ನಿರೀಕ್ಷೆಯಲ್ಲಿದ್ದಾರೆ. 2014 ಮತ್ತು 2019 ರಲ್ಲಿ ರಾಮ್‌ ಕೃಪಾಲ್‌ ಎದುರು ಸೋತಿದ್ದ ಮೀಸಾ, ಈ ಬಾರಿ ಗೆಲುವಿನ ನಗು ಬೀರುವರೇ ಎಂಬುದನ್ನು ನೋಡಬೇಕು.

ಅಭಿಷೇಕ್‌ ಬ್ಯಾನರ್ಜಿ (ಟಿಎಂಸಿ): ಡೈಮಂಡ್‌ ಹಾರ್ಬರ್, ಪಶ್ಚಿಮ ಬಂಗಾಳ

ಟಿಎಂಸಿ ಭದ್ರಕೋಟೆಯಾಗಿರುವ ಡೈಮಂಡ್‌ ಹಾರ್ಬರ್‌ ಕ್ಷೇತ್ರದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಸತತ ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2019 ರಲ್ಲಿ ಅವರು ಸಮೀಪದ ಪ್ರತಿಸ್ಪರ್ಧಿಯನ್ನು 3 ಲಕ್ಷಕ್ಕೂ ಅಧಿಕ ಮತಗಳಿಂದ ಮಣಿಸಿದ್ದರು. ಈ ಬಾರಿ ಇಲ್ಲಿ ಟಿಎಂಸಿ, ಬಿಜೆಪಿ ಮತ್ತು ಸಿಪಿಎಂ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಚರಣ್‌ಜಿತ್‌ ಸಿಂಗ್‌ ಚನ್ನಿ (ಕಾಂಗ್ರೆಸ್)‍: ಜಲಂಧರ್‌, ಪಂಜಾಬ್ 

ಪಂಜಾಬ್‌ನ ಜಲಂಧರ್‌ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ ಪಕ್ಷವು ರಾಜ್ಯದ ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಟಿಕೆಟ್‌ ನೀಡಿದೆ. ಅವರು ಎಎಪಿಯ ಪವನ್‌ ಕುಮಾರ್‌ ಟೀನು ಮತ್ತು ಶಿರೋಮಣಿ ಅಕಾಲಿ ದಳದ ಮೊಹಿಂದರ್ ಸಿಂಗ್‌ ಅವರ ಸವಾಲು ಎದುರಿಸಲಿದ್ದಾರೆ.

ಹರ್‌ಸಿಮ್ರತ್‌ ಕೌರ್‌ ಬಾದಲ್ (ಎಸ್‌ಎಡಿ): ಬಠಿಂಡಾ, ಪಂಜಾಬ್

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷವು ಬಠಿಂಡಾ ಕ್ಷೇತ್ರದಿಂದ ಹರ್‌ಸಿಮ್ರತ್‌ ಕೌರ್‌ ಬಾದಲ್ ಅವರಿಗೆ ಟಿಕೆಟ್‌ ನೀಡಿದೆ. ಈ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಜೀತ್‌ ಮೊಹಿಂದರ್‌ ಸಿಂಗ್‌, ಎಎಪಿಯಿಂದ ಗುರ್ಮೀತ್‌ ಸಿಂಗ್‌ ಮತ್ತು ಬಿಜೆಪಿಯ ಪರಂಪಾಲ್‌ ಕೌರ್‌ ಸಿಧು ಕಣದಲ್ಲಿದ್ದಾರೆ.

ಮತಗಟ್ಟೆ ಸಮೀಕ್ಷೆಯತ್ತ ಚಿತ್ತ

ಮತದಾನ ಪ್ರಕ್ರಿಯೆಗೆ ಶನಿವಾರ ತೆರೆಬೀಳಲಿರುವುದರಿಂದ ಎಲ್ಲರ ಗಮನ ಮತಗಟ್ಟೆ ಸಮೀಕ್ಷೆಯತ್ತ ನೆಟ್ಟಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಮಾಧ್ಯಮಗಳು ಜೂನ್‌ 1ರ ಸಂಜೆ 6.30ರ ಬಳಿಕ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಪ್ರಸಾರ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT