ನವದೆಹಲಿ: 'ಅಸುರ ಶಕ್ತಿ'ಯ ವಿರುದ್ಧ ನಮ್ಮ ಹೋರಾಟ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪುನರುಚ್ಚರಿಸಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದ್ವೇಷದಿಂದ ತುಂಬಿದ ಅಸುರ ಶಕ್ತಿ' ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ 'ಶಕ್ತಿ' ಹೇಳಿಕೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವಾಕ್ಸಮರಕ್ಕೆ ಕಾರಣವಾಗಿತ್ತು. 'ಭಾರತ ಜೋಡೊ ನ್ಯಾಯ ಯಾತ್ರೆ' ಸಮಾರೋಪ ಸಭೆಯಲ್ಲಿ ನಾವು 'ಶಕ್ತಿ' ವಿರುದ್ಧ ಹೋರಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಇದರ ವಿರುದ್ಧ ಬಿಜೆಪಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದರು. ಪ್ರತಿಯೊಬ್ಬ ತಾಯಿ ಮತ್ತು ಹೆಣ್ಣು ಮಗಳು 'ಶಕ್ತಿ'ಯ ರೂಪ. ಅವರನ್ನು ನಾನು ಆರಾಧಿಸುತ್ತೇನೆ. ಅವರ ರಕ್ಷಣೆಗಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧವಿದ್ದೇನೆ ಎಂದು ಹೇಳಿದ್ದರು.
ಇಂಡಿಯಾ ಒಕ್ಕೂಟದ ಪ್ರಣಾಳಿಕೆಯು 'ಶಕ್ತಿ'ಯನ್ನು ನಾಶಗೊಳಿಸುವ ಕುರಿತು ಹೇಳಿದೆ ಎಂದು ಆರೋಪಿಸಿದ್ದ ಪ್ರಧಾನಿ, ಇದು ಶಕ್ತಿಯನ್ನು ನಾಶಮಾಡಲು ಬಯಸುವವರು ಮತ್ತು ಅವರನ್ನು ಆರಾಧಿಸುವವರ ನಡುವಣ ಹೋರಾಟ ಎಂದು ಹೇಳಿದ್ದರು.