ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೂ.1ರಂದು ಚುನಾವಣೆ ಮುಗಿಯುತ್ತಿದ್ದಂತೆ ಸಭೆ ನಡೆಸಲಿರುವ ‘ಇಂಡಿಯಾ’ ನಾಯಕರು

Published 27 ಮೇ 2024, 9:59 IST
Last Updated 27 ಮೇ 2024, 9:59 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಾಧನೆಯ ಬಗ್ಗೆ ಚರ್ಚಿಸಲು ಮತ್ತು ಮುಂದಿನ ಕಾರ್ಯತಂತ್ರ ರೂಪಿಸಲು ‘ಇಂಡಿಯಾ’ ಕೂಟದ ಪ್ರಮುಖ ನಾಯಕರು ಜೂನ್ 1ಕ್ಕೆ ಸಭೆ ಸೇರಲಿದ್ದಾರೆ. 

ಜೂನ್ 1ರಂದು ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯಲಿದ್ದು, ಅಂದು ಮಧ್ಯಾಹ್ನ ನವದೆಹಲಿಯಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

‘ಇಂಡಿಯಾ’ ಕೂಟದ ಪ್ರಮುಖ ಪಾಲುದಾರ ಪಕ್ಷವಾದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.

ಎನ್‌ಡಿಎ ಮೈತ್ರಿಕೂಟವು ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ‘ಇಂಡಿಯಾ’ ಕೂಟವು ತಡೆಯಲಿದೆ ಮತ್ತು ಈ ಬಾರಿ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಲೇ ಬರುತ್ತಿವೆ.

‘ಇಂಡಿಯಾ’ ಕೂಟದಲ್ಲಿ ಒಟ್ಟು 28 ಪಕ್ಷಗಳಿವೆ. ನಿತೀಶ್ ಕುಮಾರ್ ಅವರ ಜನತಾ ದಳ (ಯು) ಮತ್ತು ರಾಷ್ಟ್ರೀಯ ಲೋಕ ದಳ ಪಕ್ಷಗಳು ಎನ್‌ಡಿಎ ಕೂಟ ಸೇರಿದ್ದವು.

ಟಿಎಂಸಿ ಪಾಲ್ಗೊಳ್ಳುವುದಿಲ್ಲ: ಜೂನ್ 1ರ ‘ಇಂಡಿಯಾ’ ಕೂಟದ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರು ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಜೂನ್ ಒಂದರಂದು ಕೋಲ್ಕತ್ತ ದಕ್ಷಿಣ ಮತ್ತು ಕೋಲ್ಕತ್ತ ಉತ್ತರ ಸೇರಿದಂತೆ ಒಂಬತ್ತು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅವು ಪಕ್ಷದ ಪಾಲಿಗೆ ಮಹತ್ವದ ಕ್ಷೇತ್ರಗಳು. ಜತೆಗೆ ಅಂದು ಪಕ್ಷದ ಪ್ರಮುಖರಾದ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಮುಂತಾದವರು ಮತದಾನ ಮಾಡಲಿದ್ದಾರೆ. ಹೀಗಾಗಿ ಅಂದು ನಡೆಯುವ ಸಭೆಯಲ್ಲಿ ಪಕ್ಷದ ಪ್ರತಿನಿಧಿಗಳು ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಈ ವಿಚಾರವನ್ನು ಸಭೆಯ ಸಂಘಟಕರಿಗೆ ತಿಳಿಸಲಾಗಿದೆ. ‘ಇಂಡಿಯಾ’ ಕೂಟದ ಇದುವರೆಗಿನ ಬಹುತೇಕ ಎಲ್ಲ ಸಭೆಗಳಲ್ಲೂ ಪಕ್ಷವು ಪಾಲ್ಗೊಂಡಿದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT