ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈತ್ರಿಕೂಟದಲ್ಲಿ ಕಡೆಗಣನೆ; ಅಮಿತ್ ಶಾ ಭೇಟಿ ಸಲುವಾಗಿ ದೆಹಲಿಗೆ ಬಂದ ಅಜಿತ್ ಪವಾರ್

Published 7 ಜೂನ್ 2024, 4:46 IST
Last Updated 7 ಜೂನ್ 2024, 4:46 IST
ಅಕ್ಷರ ಗಾತ್ರ

ನವದೆಹಲಿ: ಎನ್‌ಡಿಎ ಮೈತ್ರಿಕೂಟದಲ್ಲಿ ತಮ್ಮ ಪಕ್ಷವನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನಗೊಂಡಿರುವ ಎನ್‌ಸಿಪಿ ಅಧ್ಯಕ್ಷ ಅಜಿತ್‌ ಪವಾರ್‌ ಅವರು ಅಮಿತ್‌ ಶಾ ಜೊತೆ ಚರ್ಚಿಸಲು ದೆಹಲಿಗೆ ಬಂದಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿರುವ ಅಜಿತ್‌, ದೆಹಲಿಗೆ ಬಂದಿದ್ದಾರಾದರೂ ಇಂದು ಸಂಜೆ 5ಕ್ಕೆ ನಡೆಯಲಿರುವ ಮಿತ್ರಪಕ್ಷಗಳ ಸಭೆಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ.

ನಗರದಲ್ಲಿ ಮಾತನಾಡಿರುವ ಅವರು, 'ಬಹುತೇಕ 300 ಸಂಸದರಿದ್ದಾರೆ. ಹಾಗಾಗಿ, ಎನ್‌ಡಿಎ ಮೈತ್ರಿಕೂಟ ಖಂಡಿತವಾಗಿಯೂ ಪೂರ್ಣಾವಧಿ ಸರ್ಕಾರ ನಡೆಸಲಿದೆ. ಎಲ್ಲವೂ ಸರಿಹೋಗಲಿದೆ ಚಿಂತಿಸುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ. ಆದರೆ, ಅಮಿತ್‌ ಶಾ ಭೇಟಿ ವಿಚಾರದ ಬಗ್ಗೆ ಮಾತನಾಡಿಲ್ಲ.

543 ಸದಸ್ಯ ಬಲವಿರುವ ಲೋಕಸಭೆಯಲ್ಲಿ ಸರಳ ಬಹುಮತಕ್ಕೆ 272 ಸ್ಥಾನಗಳ ಅಗ್ಯವಿದೆ. 2014 ಹಾಗೂ 2019ರಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿಯು ಸ್ವತಂತ್ರವಾಗಿ ಸರಳ ಬಹುಮತ ಸಾಧಿಸಿತ್ತು. 2014ರಲ್ಲಿ 282 ಮತ್ತು 2019ರಲ್ಲಿ 303 ಸ್ಥಾನ ಗೆದ್ದಿದ್ದ ಕೇಸರಿ ಪಕ್ಷ, ಈ ಬಾರಿ 240 ಸ್ಥಾನಗಳನ್ನಷ್ಟೇ ಗೆದ್ದಿದೆ.

ಒಟ್ಟಾರೆ, ಎನ್‌ಡಿಎ ಮೈತ್ರಿಕೂಟದ 293 ಅಭ್ಯರ್ಥಿಗಳು ಲೋಕಸಭೆಗೆ ಚುನಾಯಿತರಾಗಿದ್ದಾರೆ. ಹೀಗಾಗಿ, ಸರ್ಕಾರ ರಚಿಸುವ ಅವಕಾಶವಿದ್ದರೂ, ಮಿತ್ರ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುವ ಸವಾಲು ಬಿಜೆಪಿ ಮುಂದಿದೆ.

ಹೊಸದಾಗಿ ಆಯ್ಕೆಯಾಗಿರುವ ಎನ್‌ಡಿಎ ಮೈತ್ರಿಕೂಟದ ಸಂಸದರು ಇಂದು ಸಂಜೆ ಸಭೆ ಸೇರಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕ ಎಂದು ಆಯ್ಕೆ ಮಾಡಲಿದ್ದಾರೆ.

ಎನ್‌ಡಿಎ ನಾಯಕರಾಗಿ ಮೋದಿ ಆಯ್ಕೆ ಬಳಿಕ ಮೈತ್ರಿಕೂಟದ ಹಿರಿಯ ಸದಸ್ಯರಾದ ಟಿಡಿಪಿಯ ಎನ್. ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್ ಮತ್ತು ಶಿವಸೇನಾ ನಾಯಕ ಏಕನಾಥ ಶಿಂದೆ ಅವರ ಜೊತೆಗೆ ಮೋದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ತಮಗೆ ಬೆಂಬಲ ನೀಡಿರುವ ಸಂಸದರ ಪಟ್ಟಿಯನ್ನು ಸಲ್ಲಿಸಲಿದ್ದಾರೆ ಎಂದು ಎನ್‌ಡಿಎ ಮಿತ್ರ ಪಕ್ಷಗಳ ಸದಸ್ಯರು ಹೇಳಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT