ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಕಾಂಗ್ರೆಸ್‌ನ ವೃತ್ತಿಪರರಿಂದ ಮನೆ ಮನೆಗೆ ತೆರಳಿ ಪ್ರಚಾರ

ರಾಹುಲ್‌ ನಡೆಸಿದ ಸಂವಾದಗಳ ಮೂಲಕ ಕಾಂಗ್ರೆಸ್‌ ನಿಲುವು ತಿಳಿಸುವ ಯತ್ನ
Published 20 ಮಾರ್ಚ್ 2024, 14:14 IST
Last Updated 20 ಮಾರ್ಚ್ 2024, 14:14 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್‌ನ ವೃತ್ತಿಪರರ ಘಟಕವು ಆಯ್ದ ನಗರಗಳಲ್ಲಿರುವ ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಪರ ಪ್ರಚಾರ ನಡೆಸಲು ನಿರ್ಧರಿಸಿದೆ.

ಕೆಲ ನಿರ್ದಿಷ್ಟ ವಲಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ ರಾಜಕೀಯ ವಿರೋಧಿಗಳು ರೂಪಿಸಿರುವ ಕಾರ್ಯಸೂಚಿಗೆ ತಿರುಗೇಟು ನೀಡಲು ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್‌ (ಎಐಪಿಸಿ) ನಿರ್ಧರಿಸಿದೆ.

ನಗರದ ಪ್ರದೇಶದಲ್ಲಿನ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸುವುದಕ್ಕೆ ಸಂಬಂಧಿಸಿ, ಎರಡು ಬಗೆಯ ಕಾರ್ಯತಂತ್ರಗಳನ್ನು ಎಐಪಿಸಿ ಸಿದ್ಧಪಡಿಸಿದೆ. 

ಮೊದಲನೇ ಕಾರ್ಯತಂತ್ರದ ಭಾಗವಾಗಿ, ಎಐಪಿಸಿ ತನ್ನ ರಾಜ್ಯ ಘಟಕಗಳನ್ನು ವಿಸರ್ಜಿಸಿದೆ. ಇದರ ಬದಲಾಗಿ, ಆಯಾ ವಿಷಯಕ್ಕೆ ಸಂಬಂಧಿಸಿದ ಘಟಕಗಳನ್ನು ರಚಿಸಿದೆ. ನಿರ್ದಿಷ್ಟ ವಿಷಯ ಕುರಿತು ಪಕ್ಷ ತಳೆದ ನಿಲುವನ್ನು ಜನರಿಗೆ ತಿಳಿಸಲು ಇದರಿಂದ ಅನಕೂಲವಾಗಲಿದೆ.

ಎರಡನೇ ಕಾರ್ಯತಂತ್ರದಡಿ, ಪ್ರಚಾರ ಕಾರ್ಯದಲ್ಲಿ ಕಂಡುಬಂದ ವಿದ್ಯಮಾನಗಳ ಕುರಿತಂತೆ ಪಕ್ಷದ ಕೇಂದ್ರೀಯ ವಾರ್‌ರೂಮ್‌ನೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಕೇಂದ್ರವು ವಹಿಸುವ ನಿರ್ದಿಷ್ಟ ಕಾರ್ಯವನ್ನು ಕಾರ್ಯಗತಗೊಳಿಸುವುದಾಗಿದೆ ಎಂದು ಎಐಪಿಸಿ ಅಧ್ಯಕ್ಷ ಪ್ರವೀಣ್‌ ಚಕ್ರವರ್ತಿ ಹೇಳಿದ್ದಾರೆ.

‘ಸಂಘಟನೆಯ (ಎಐಪಿಸಿ) ಕಾರ್ಯವೈಖರಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ, ಚಾರ್ಟರ್ಡ್‌ ಅಕೌಂಟಂಟ್ಸ್‌ (ಸಿಎ), ಐಟಿ ವೃತ್ತಿಪರರು, ಶಿಕ್ಷಣ ತಜ್ಞರು, ಗಣಿ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ವೃತ್ತಿಪರರೊಂದಿಗೆ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ನಡೆಸಿದ ಸಂವಾದಗಳ ಮೂಲಕ ಪಕ್ಷದ ಸಿದ್ಧಾಂತ–ನಿಲುವುಗಳನ್ನು ಜನರಿಗೆ ತಿಳಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ನೋಟು ರದ್ದತಿ, ಜಿಎಸ್‌ಟಿ ಕುರಿತು ಕಾಂಗ್ರೆಸ್‌ ನಿಲುವನ್ನು ದೇಶದ ಚಾರ್ಟರ್ಡ್‌ ಅಕೌಂಟಂಟ್‌ಗಳಿಗೆ ತಿಳಿಸಬೇಕಿತ್ತು. ಇದಕ್ಕಾಗಿ, ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ, ರಾಹುಲ್‌ ಗಾಂಧಿ ಅವರು ಸಿಎಗಳ ಜೊತೆ ನಡೆಸಿದ ಸಂವಾದದ ವಿಡಿಯೊಗಳನ್ನು ಸುಮಾರು 6 ಲಕ್ಷ ಚಾರ್ಟರ್ಡ್‌ ಅಕೌಂಟಂಟ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಐಟಿ ವೃತ್ತಿಪರರೊಂದಿಗೆ ರಾಹುಲ್‌ ಗಾಂಧಿ ನಡೆಸಿದ ಸಂವಾದದ ವಿಡಿಯೊಗಳನ್ನು ಒಂದು ಕೋಟಿ  ವೃತ್ತಿಪರರೊಂದಿಗೆ ಹಂಚಿಕೊಳ್ಳಲಾಗಿದೆ. ನಾವು ವಿಭಿನ್ನ ಶೈಲಿಯ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಪಕ್ಷದ ನಿಲುವು–ಮುನ್ನೋಟಗಳನ್ನು ದೊಡ್ಡದಾದ ರೀತಿಯಲ್ಲಿ ಜನರಿಗೆ ತಲುಪಿಸುವಲ್ಲಿ ಇದು ನೆರವಾಗುತ್ತಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವಲ್ಲಿಯೂ ಎಐಪಿಸಿ ನೆರವಾಗುತ್ತಿದೆ. ಪ್ರಣಾಳಿಕೆ ಸಮಿತಿ ಸಾವಿರಾರು ಸಲಹೆಗಳನ್ನು ಸ್ವೀಕರಿಸಿದೆ. ಇವುಗಳನ್ನು ವಿಂಗಡಿಸಿ ಸಮಿತಿಗೆ ಸಲ್ಲಿಸಲಾಗುವುದು ಪ್ರವೀಣ್‌ ಚಕ್ರವರ್ತಿ ಎಐಪಿಸಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT