ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಲೋಕಸಭಾ ಕ್ಷೇತ್ರ | ಶೇ 96ರಷ್ಟು ಪಕ್ಷೇತರರಿಗೆ ಠೇವಣಿಯೂ ಸಿಕ್ಕಿಲ್ಲ!

Published 1 ಮೇ 2024, 6:20 IST
Last Updated 1 ಮೇ 2024, 6:20 IST
ಅಕ್ಷರ ಗಾತ್ರ

ಕಲಬುರಗಿ: ಯಾವುದೇ ಚುನಾವಣೆಯಲ್ಲಿ ಸೋಲು–ಗೆಲುವಿನಷ್ಟೇ ಚರ್ಚೆಯಾಗೋದು ಠೇವಣಿ ಕಳೆದುಕೊಂಡವರೆಷ್ಟು? ಉಳಿಸಿಕೊಂಡವರೆಷ್ಟು ಎಂಬ ಅಂಶ.

ಕಲಬುರಗಿ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ 1951ರಿಂದ 2019ರ ತನಕ ನಡೆದ ಚುನಾವಣೆಗಳಲ್ಲಿ ಗೆಲುವಿನ ಸಿಹಿ ಬರೀ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಷ್ಟೇ ಸಂದಿದೆ! ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ಸಮೀಪವೂ ಸುಳಿದಿಲ್ಲ!

ಈ ಅವಧಿಯಲ್ಲಿ ಉಪಚುನಾವಣೆಗಳು ಸೇರಿದಂತೆ ಒಟ್ಟು 19 ಚುನಾವಣೆಗಳು ನಡೆದಿದ್ದು, ಒಟ್ಟು 146 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ ಗೆದ್ದ 20 ಅಭ್ಯರ್ಥಿಗಳು ಹಾಗೂ ಸೋತ 23 ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಇನ್ನುಳಿದಂತೆ ಪಕ್ಷೇತರರು ಸೇರಿ ಇತರೆ ಪಕ್ಷಗಳ 103 ಉಮೇದುವಾರರು ಠೇವಣಿ ಕಳೆದುಕೊಂಡಿದ್ದಾರೆ.

1951ರ ಚುನಾವಣೆಯಿಂದಲೂ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿಗಳು ಸತತ ಗೆಲುವಿನ ನಗೆ ಬೀರದಿದ್ದರೂ, ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 1991ರಿಂದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು ಸೋತರೂ ಠೇವಣಿ ಉಳಿಸಿಕೊಳ್ಳುತ್ತ ಬಂದಿದ್ದಾರೆ.

ಠೇವಣಿ ಕಳೆದುಕೊಂಡ 103 ಅಭ್ಯರ್ಥಿಗಳಲ್ಲಿ 56 ಪಕ್ಷೇತರರು ಹಾಗೂ 47 ಮಂದಿ ಇತರೆ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ್ದ 58 ಪಕ್ಷೇತರರ ಪೈಕಿ 1951ರ ಚುನಾವಣೆಯಲ್ಲಿ ಶರಣಗೌಡ (39,041 ಮತಗಳು, ಶೇ36.78), 1957ರ ಚುನಾವಣೆಯಲ್ಲಿ ಶರಣಗೌಡ ಸಿದ್ರಾಮಯ್ಯ (1,09,124 ಮತ, ಶೇ20.55) ಮಾತ್ರವೇ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ್ದವರ ಪೈಕಿ ಶೇ 96.55ರಷ್ಟು ಮಂದಿಗೆ ಠೇವಣಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಭಾರತ ಚುನಾವಣಾ ಆಯೋಗದ ನಿಯಮದ ಪ್ರಕಾರ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯು ಠೇವಣಿ ಉಳಿಸಿಕೊಳ್ಳಲು ಆ ಮತಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ (ತಿರಸ್ಕೃತ ಮತಬಿಟ್ಟು) ಆರನೇ ಒಂದರಷ್ಟು ಮತಗಳನ್ನು ಪಡೆಯಬೇಕು. ಅಂದರೆ, ಒಟ್ಟು ಒಂದು ಲಕ್ಷ ಮಂದಿ ಮತದಾನ ಮಾಡಿದ್ದರೆ, ಅದರಲ್ಲಿ ಅಭ್ಯರ್ಥಿಗಳು ಕನಿಷ್ಠ 16,666 ಮತಗಳನ್ನು ಪಡೆಯಬೇಕು. ಅದರಲ್ಲಿ ವಿಫಲರಾಗುವ ಅಭ್ಯರ್ಥಿಗಳ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಖಜಾನೆಗೆ ಕಳುಹಿಸಲಾಗುತ್ತದೆ.

ಈಗ ಲೋಕಸಭಾ ಚುನಾವಣೆಗೆ ಪ್ರತಿ ಸಾಮಾನ್ಯ ವರ್ಗದ ಅಭ್ಯರ್ಥಿ ₹25 ಸಾವಿರ ಠೇವಣಿ ಇಡಬೇಕಾಗುತ್ತದೆ. ಎಸ್ಸಿ,ಎಸ್ಟಿ ಉಮೇದುವಾರರು ₹12,500 ಠೇವಣಿ ಇಡಬೇಕಾಗುತ್ತದೆ.

ಪ್ರಸಕ್ತ ಚುನಾವಣೆಯಲ್ಲಿ 14 ಉಮೇದುವಾರರು ಕಣದಲ್ಲಿದ್ದು, ಕ್ಷೇತ್ರದ ಮತದಾರರು ಎಷ್ಟು ಅಭ್ಯರ್ಥಿಗಳ ಠೇವಣಿ ಉಳಿಸಲಿದ್ದಾರೆ ಎಂಬ ಕುತೂಹಲಕ್ಕೆ ಜೂನ್‌ 4ರ ಫಲಿತಾಂಶ ತೆರೆ ಎಳೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT