ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ‘ಕಮಲದ ಕೊಳ’ದಲ್ಲಿ ಹೆಚ್ಚಿದ ಒಳಸುಳಿ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ
Published 20 ಏಪ್ರಿಲ್ 2024, 1:09 IST
Last Updated 20 ಏಪ್ರಿಲ್ 2024, 1:09 IST
ಅಕ್ಷರ ಗಾತ್ರ

ಬೆಂಗಳೂರು: ಸತತ ನಾಲ್ಕು ಅವಧಿಯಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ‘ಕಮಲ’ ಅರಳುತ್ತಿದೆ. ಈ ಬಾರಿ ಪಂಚ ‘ಗ್ಯಾರಂಟಿ’ಗಳ ನೆರಳಿನಲ್ಲಿ ಕ್ಷೇತ್ರ ‘ಕೈ’ವಶ ಖಚಿತವೆಂಬ ಲೆಕ್ಕಾಚಾರ– ವಿಶ್ವಾಸ ಕಾಂಗ್ರೆಸ್‌ ನಾಯಕರದ್ದು. 

1952ರ ಮೊದಲ ಚುನಾವಣೆಯಿಂದ ಕೆಂಗಲ್ ಹನುಮಂತಯ್ಯ, ಸಿ.ಕೆ. ಜಾಫರ್ ಷರೀಫ್ ಅವರಂಥ ಘಟಾನುಘಟಿ ನಾಯಕರನ್ನು ಚುನಾಯಿಸುವ ಮೂಲಕ ಹಿಂದೊಮ್ಮೆ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, 2004ರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಎಚ್‌.ಟಿ. ಸಾಂಗ್ಲಿಯಾನ, 2009ರಲ್ಲಿ ಡಿ.ಬಿ. ಚಂದ್ರೇಗೌಡ 2014 ಹಾಗೂ 2019ರಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರನ್ನು ಆರಿಸುವ ಮೂಲಕ ಮತದಾರರು ಒಲವು ಬದಲಿಸಿದ್ದರು. 

ಹಾಲಿ ಸಂಸದ ಸದಾನಂದ ಗೌಡರ ಬದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಈ ಬಾರಿ ಕಣಕ್ಕಿಳಿಸಿದೆ. ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ, ಶೋಭಾ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದ ಕೆಲವೆಡೆ ‘ಗೋ ಬ್ಯಾಕ್ ಶೋಭಕ್ಕಾ’ ಭಿತ್ತಿಪತ್ರಗಳನ್ನು ಹಿಡಿದು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದರು. ‘ಎರಡು ಬಾರಿ ಗೆದ್ದರೂ ಕ್ಷೇತ್ರ ಅಭಿವೃದ್ದಿ ಮಾಡದ ಶೋಭಾ ನಮ್ಮ ಕ್ಷೇತ್ರಕ್ಕೆ ಬರುವುದು ಬೇಡ. ಸ್ಥಳೀಯ ಒಕ್ಕಲಿಗರ ನಾಯಕರಲ್ಲಿ ಯಾರಿಗಾದರು ಟಿಕೆಟ್ ಕೊಡಿ. ಸದಾನಂದಗೌಡರನ್ನೇ ಮತ್ತೊಮ್ಮೆ ಕಣಕ್ಕಿಳಿಸಿ’ ಎಂದೂ ಬೇಡಿಕೆ ಇಟ್ಟಿದ್ದರು. ಆರಂಭದಲ್ಲಿದ್ದ ಈ ಅಪಸ್ವರ ಈಗ ತಣ್ಣಗಾಗಿದೆ. ‘ಯಾರೋ ತಮಿಳುನಾಡಿನಿಂದ ಬಂದು ದಿ ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಇರಿಸಿ ಹೋಗುತ್ತಾರೆ’ ಎಂದು ತಾವು ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಶೋಭಾ ಕ್ಷಮೆ ಯಾಚಿಸಿದ್ದೂ ಮರೆಗೆ ಸರಿದಿದೆ. ಅದೇನೇ ಇದ್ದರೂ, ಮೋದಿ ಅಲೆ ಹಾಗೂ ಬಿಜೆಪಿಯ ನಿಶ್ಚಿತ ಮತಗಳು ಆರಾಮವಾಗಿ ದಡ ಸೇರಿಸಬಹುದೆಂಬ ವಿಶ್ವಾಸ ಶೋಭಾ ಅವರದ್ದು.   

ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ. ರಾಜೀವ್‌ ಗೌಡ ಅವರಿಗೆ ‘ಚುನಾವಣಾ’ ರಾಜಕೀಯ ಹೊಸತು. ಸೂಕ್ತ ಅಭ್ಯರ್ಥಿಯ ಶೋಧದಲ್ಲಿದ್ದ ಕಾಂಗ್ರೆಸ್‌ ನಾಯಕರು, ರಾಜ್ಯಸಭೆ ಸದಸ್ಯರಾಗಿ ಅನುಭವ ಹೊಂದಿರುವ ಈ ‘ಪ್ರೊಫೆಸರ್‌’ಗೆ ಟಿಕೆಟ್‌ ನೀಡಿದೆ. 2019ರ ಚುನಾವಣೆಯಲ್ಲಿ ವರಿಷ್ಠರ ಒತ್ತಾಸೆ, ಮನವೊಲಿಕೆ ಮೇರೆಗೆ ಒಲ್ಲದ ಮನಸ್ಸಿನಿಂದ ಕಣಕ್ಕಿಳಿದು ಸೋಲು ಕಂಡಿದ್ದ ಸಚಿವ ಕೃಷ್ಣ ಬೈರೇಗೌಡರು ರಾಜೀವ್‌ ಗೌಡರ ಬೆನ್ನಿಗೆ ನಿಂತಿದ್ದಾರೆ.

ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದಾಗ ಮಾಡಿದ ಕೆಲಸ ಯಶವಂತಪುರ ಮತ್ತು ಕೆಂಗೇರಿಯಲ್ಲಿ ಹೆಚ್ಚು ಮತಗಳನ್ನು ತಂದುಕೊಡಬಹುದು ಎಂಬ ವಿಶ್ವಾಸ ಶೋಭಾ ಅವರದ್ದು. ಆದರೆ, ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್‌ ಕಡೆ ಮುಖ ಮಾಡಿರುವ ಶಾಸಕ ಎಸ್‌.ಟಿ. ಸೋಮಶೇಖರ್‌ ಮಗ್ಗುಲ ಮುಳ್ಳು ಆಗಬಹುದೇ ಎಂಬ ಆತಂಕವೂ ಇದೆ. ಕ್ಷೇತ್ರವ್ಯಾಪ್ತಿಯ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದರೂ, ಭವಿಷ್ಯದ ರಾಜಕೀಯ ಲೆಕ್ಕಾಚಾರಗಳ ಕಾರಣಕ್ಕೆ ಎಲ್ಲರೂ ‘ಕಮಲ’ ಅರಳಿಸಲು ಶ್ರಮ ಹಾಕುತ್ತಾರೆ ಎಂಬ ವಿಶ್ವಾಸವೂ ಬಿಜೆಪಿ ನಾಯಕರಲ್ಲಿ ಕಾಣಿಸುತ್ತಿಲ್ಲ. ಇದೂ ಶೋಭಾ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಜೀವ್ ಗೌಡ ಅವರು ಅಪಾರ್ಟ್‌ಮೆಂಟ್ ಸಂಘಗಳನ್ನು ಓಲೈಸಿ ಕಾಂಗ್ರೆಸ್‌ಗೆ ಒಂದಷ್ಟು ಮತಗಳನ್ನು ಸೆಳೆದಿದ್ದರು. ‘ಕಾಂಗ್ರೆಸ್ ನನ್ನಂಥ ಮಣ್ಣಿನ ಮಗನನ್ನು ಆಯ್ಕೆ ಮಾಡಿದೆ. ಇಲ್ಲಿ ನನಗೆ ಸಂಬಂಧಿಕರು ಮತ್ತು ಕುಟುಂಬ ಸದಸ್ಯರಿರುವುದರಿಂದ ಕ್ಷೇತ್ರದ ಮನೆ ಮಗನಾಗಿದ್ದೇನೆ’ ಎಂದು ಪ್ರತಿಪಾದಿಸುತ್ತಿರುವ ರಾಜೀವ್ ಗೌಡರು, ‘ಗ್ಯಾರಂಟಿ’ಗಳು ಕೈ ಹಿಡಿಯಬಹುದೆಂದು ನಂಬಿದ್ದಾರೆ.

ಶೋಭಾ ಕರಂದ್ಲಾಜೆ (ಬಿಜೆಪಿ)
ಶೋಭಾ ಕರಂದ್ಲಾಜೆ (ಬಿಜೆಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT