ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೀದರ್‌ ಕೋಟೆ’ ಖೂಬಾಗೊ, ಖಂಡ್ರೆಗೊ?

Published 28 ಏಪ್ರಿಲ್ 2024, 22:35 IST
Last Updated 28 ಏಪ್ರಿಲ್ 2024, 22:35 IST
ಅಕ್ಷರ ಗಾತ್ರ

ಬೀದರ್‌: ಕರ್ನಾಟಕದ ಮುಕುಟ ಮಣಿ ಬೀದರ್‌ ಲೋಕಸಭಾ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ನಡೆಸುತ್ತಿರುವ ಪೈಪೋಟಿಯಿಂದಾಗಿ ಬಿಸಿಲಿನ ಜೊತೆಗೆ ಚುನಾವಣಾ ಕಾವು ಸಹ ಮತ್ತಷ್ಟು ಹೆಚ್ಚುತ್ತಿದೆ.

ಬೀದರ್‌ ಜಿಲ್ಲೆಯ ಆರು ಹಾಗೂ ಕಲಬುರಗಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಲೋಕಸಭಾ ಕ್ಷೇತ್ರದ ಚುನಾವಣೆಯೂ ‘ಮೋದಿ ನಾಮಬಲ’ ಹಾಗೂ ಖಂಡ್ರೆ ಪರಿವಾರದ ಪ್ರಭಾವ, ‘ಗ್ಯಾರಂಟಿ’ಗಳ ನಡುವಣ ಜಿದ್ದಾಜಿದ್ದಿಯ ಹೋರಾಟದ ಕಣವಾಗಿ ಮಾರ್ಪಟ್ಟಿದೆ.

ಹಿಂದಿನ ಎರಡು ಚುನಾವಣೆಗಳಲ್ಲಿ ಗೆದ್ದು ಕೇಂದ್ರ ಸಚಿವರೂ ಆಗಿರುವ ಭಗವಂತ ಖೂಬಾ ಅವರು ‘ಮೋದಿ ನಾಮಬಲ’ವನ್ನು ನಂಬಿಕೊಂಡು ‘ಹ್ಯಾಟ್ರಿಕ್‌’ ಗೆಲುವಿನ ಭರವಸೆಯಲ್ಲಿದ್ದಾರೆ. ನೇರ, ನಿಷ್ಠುರ ಮಾತುಗಾರಿಕೆ ಅವರಿಗೆ ಮುಳುವಾಗಿದೆ. ಸ್ವಪಕ್ಷೀಯ ಶಾಸಕರಾದ ಪ್ರಭು ಚವಾಣ್‌ ಅನಾರೋಗ್ಯದ ಕಾರಣ ಕೊಟ್ಟು ಪ್ರಚಾರದಿಂದ ದೂರ ಉಳಿದಿದ್ದಾರೆ. ಬಸವಕಲ್ಯಾಣ ಶಾಸಕ ಶರಣು ಸಲಗರ ಅರೆ ಮನಸ್ಸಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಹೆಚ್ಚಿನ ಮುಖಂಡರು, ಕಾರ್ಯಕರ್ತರು ಇದೇ ಧೋರಣೆ ತಾಳಿದ್ದಾರೆ. 

ಕಣದಲ್ಲಿ ಒಟ್ಟು 18 ಅಭ್ಯರ್ಥಿಗಳಿದ್ದಾರೆ. ಆದರೆ, ಬಿಜೆಪಿಯ ಭಗವಂತ ಖೂಬಾ ಹಾಗೂ ಕಾಂಗ್ರೆಸ್ಸಿನ ಸಾಗರ್‌ ಖಂಡ್ರೆ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಂಡಾಯ ಅಭ್ಯರ್ಥಿಯಾಗಿ ಮರಾಠ ಸಮುದಾಯದ ಡಾ.ದಿನಕರ್‌ ಮೋರೆ ಪಕ್ಷೇತರರಾಗಿ ಕಣಕ್ಕಿಳಿದಿರುವುದು ಬಿಜೆಪಿಯ ಚಿಂತೆಯನ್ನು ಹೆಚ್ಚಿಸಿದೆ. ಕ್ಷೇತ್ರದಲ್ಲಿ ಲಿಂಗಾಯತರು, ಮರಾಠರು ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರು. ಮರಾಠ ಮತಗಳು ಚದುರಿದರೆ ಬಿಜೆಪಿಗೆ ಸಂಕಷ್ಟ ಎದುರಾಗಬಹುದು.

26 ವರ್ಷ ವಯಸ್ಸಿನ ಸಾಗರ್‌ ಖಂಡ್ರೆ ಅವರಿಗೆ ಇದು ಮೊದಲ ಚುನಾವಣೆ. ಕಾನೂನು ಪದವೀಧರರಾಗಿರುವ ಅವರು, ಬದಲಾವಣೆ ಬಯಸಿ ಜನರಿಂದ ಮತ ಕೇಳುತ್ತಿದ್ದಾರೆ. ಉದ್ಯೋಗ ಸೃಷ್ಟಿಯ ಮಾತುಗಳನ್ನು ಆಡುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಖಂಡ್ರೆ ಪರಿವಾರದ ಕುಡಿ ಎಂಬುದು ಅವರಿಗೆ ಸಕಾರಾತ್ಮಕ ಅಂಶ. ಸಾಗರ್‌ ಅವರ ತಂದೆ, ಪರಿಸರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಗನನ್ನು ಗೆಲುವಿನ ದಡ ಸೇರಿಸಲು ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ.

ಖೂಬಾ ಅವರು ಮೋದಿ ಹೆಸರನ್ನೇ ನೆಚ್ಚಿಕೊಂಡಿದ್ದಾರೆ. ಸಾಗರ್‌ ಅವರು ಖಂಡ್ರೆ ಮನೆತನದ ಕೊಡುಗೆಗಳು, ‘ಗ್ಯಾರಂಟಿ’ ಹೆಸರಲ್ಲಿ ಮತ ಯಾಚಿಸುತ್ತಿದ್ದಾರೆ. ಜಿಲ್ಲೆಯ ಇನ್ನೊಬ್ಬ ಸಚಿವ ರಹೀಂ ಖಾನ್‌ ಹಾಗೂ ಕಾಂಗ್ರೆಸ್ಸಿನ ಮುಖಂಡರು ಒಗ್ಗಟ್ಟಾಗಿ ಸಾಗರ್‌ ಪರ ಕೆಲಸ ಮಾಡುತ್ತಿದ್ದಾರೆ. ಈ ಒಗ್ಗಟ್ಟು ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ಜೆಡಿಎಸ್‌–ಬಿಜೆಪಿ ಮೈತ್ರಿಯಿದ್ದರೂ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆ ಪಕ್ಷಕ್ಕೆ ಹೇಳಿಕೊಳ್ಳುವಂತಹ ನೆಲೆಯಿಲ್ಲ.

ಖೂಬಾ ಹಾಗೂ ಸಾಗರ್‌, ಲಿಂಗಾಯತ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಲಿಂಗಾಯತರು, ಮರಾಠರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಕುರುಬರು, ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಖೂಬಾ ಹಾಗೂ ಸಾಗರ್‌ ಅವರು ಭವಿಷ್ಯದ ಯೋಜನೆಗಳ ಕುರಿತು ಸ್ಪಷ್ಟವಾಗಿ ಜನರಿಗೆ ಬಿಡಿಸಿ ಹೇಳುತ್ತಿಲ್ಲ. ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಮತದಾರರಲ್ಲೂ ಕಾಣಿಸುತ್ತಿಲ್ಲ. ಕೆಲವರು ‘ದೇಶಭಕ್ತಿ’ ಮೈಯಲ್ಲಿ ಉಕ್ಕಿ ಬಂದಂತೆ ಮಾತಾಡುತ್ತಿದ್ದರೆ, ಮತ್ತೆ ಕೆಲವು ಮಂದಿ ‘ಗ್ಯಾರಂಟಿ’ಯಿಂದ ಬದುಕಿಗೆ ಬೆಳಕಾಗುತ್ತಿದೆ ಎನ್ನುತ್ತಿದ್ದಾರೆ.

ನಾನು ಕಾನೂನು ಪದವೀಧರ. ಸುಪ್ರೀಂ ಕೋರ್ಟಿನ ನಿವೃತ್ತ ವಕೀಲರಿಂದ ಜ್ಞಾನ ಸಂಪಾದಿಸಿರುವೆ. ಗೆದ್ದರೆ ಜನರಿಗೆ ನ್ಯಾಯ ಒದಗಿಸುವೆ
ಸಾಗರ್‌ ಖಂಡ್ರೆ ಕಾಂಗ್ರೆಸ್‌ ಅಭ್ಯರ್ಥಿ
ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರಕ್ಕೆ ₹1 ಲಕ್ಷ ಕೋಟಿಗೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿರುವೆ. ಬಹುತೇಕರಿಗೆ ಕೇಂದ್ರದ ಯೋಜನೆಗಳ ಲಾಭ ಸಿಕ್ಕಿದೆ
ಭಗವಂತ ಖೂಬಾ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT