ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Assembly Election 2023| ಬೀಳಗಿ ಕ್ಷೇತ್ರದ ಅಭ್ಯರ್ಥಿಗಳ ಸಂದರ್ಶನ

Published 29 ಏಪ್ರಿಲ್ 2023, 18:38 IST
Last Updated 29 ಏಪ್ರಿಲ್ 2023, 18:38 IST
ಅಕ್ಷರ ಗಾತ್ರ

ಬೀಳಗಿ ವಿಧಾನಸಭಾ ಕ್ಷೇತ್ರವು ಬೀಳಗಿ, ಬಾಗಲಕೋಟೆ, ಬಾದಾಮಿ ತಾಲ್ಲೂಕಿನ ಹಳ್ಳಿಗಳನ್ನು ಒಳಗೊಂಡಿರುವ ದೊಡ್ಡ ಕ್ಷೇತ್ರಗಳಲ್ಲಿ ಒಂದು. ಬಿಜೆಪಿಯಿಂದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಕಾಂಗ್ರೆಸ್‌ನಿಂದ ಜೆ.ಟಿ. ಪಾಟೀಲ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ಯ ಹಿರಿಯ ವರದಿಗಾರ ಬಸವರಾಜ ಹವಾಲ್ದಾರ ಅವರು ನಡೆಸಿರುವ ಸಂದರ್ಶನ ಇಲ್ಲಿದೆ.

ಎರಡು ವರ್ಷಗಳಲ್ಲಿ ಕ್ಷೇತ್ರ ಪೂರ್ಣ ನೀರಾವರಿ: ಮುರುಗೇಶ ನಿರಾಣಿ

ಮುರುಗೇಶ ನಿರಾಣಿ
ಮುರುಗೇಶ ನಿರಾಣಿ

ನಿಮಗೆ ಯಾಕೆ ಮತ ಹಾಕಬೇಕು?

ಕ್ಷೇತ್ರದ 1.27 ಲಕ್ಷ ಎಕರೆಯನ್ನು ನೀರಾವರಿ ಮಾಡಲಾಗಿದೆ. ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗಿದೆ. ₹320 ಕೋಟಿ ವೆಚ್ಚದಲ್ಲಿ 10 ವಿದ್ಯತ್ ಪರಿವರ್ತಕ ಕೇಂದ್ರಗಳ ಆರಂಭಿಸಿದ ಪರಿಣಾಮ ರೈತರಿಗೆ ಹಗಲು ವೇಳೆ 7 ಗಂಟೆ ಗುಣಮಟ್ಟದ ವಿದ್ಯುತ್‌ ದೊರೆಯುತ್ತಿದೆ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ನಮ್ಮ ಫೌಂಡೇಷನ್‌ ವತಿಯಿಂದ ₹3 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ ಬೋರ್ಡ್‌ ಅಳವಡಿಸಲಾಗಿದೆ.

₹162 ಕೋಟಿ ವೆಚ್ಚದಲ್ಲಿ ಜಲ ಜೀವನ್‌ ಮಿಷನ್‌ ಮೂಲಕ ಗ್ರಾಮಗಳ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ, ₹411 ಕೋಟಿಯ ಅನುದಾನ, ₹200 ಕೋಟಿ ವೆಚ್ಚದ ಕೆರೂರ, ₹101 ಕೋಟಿ ವೆಚ್ಚದ ಕೈನಕಟ್ಟಿ ಸೇರಿದಂತೆ ಹಲವು ಏತ ನೀರಾವರಿ ಯೋಜನೆಗಳ ಜಾರಿ, ಹೆರಕಲ್‌, ಚಿಕ್ಕಸಂಗಮ ಬಳಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸುವ ಮೂಲಕ ಭೂಮಿಗೆ ನೀರುಣಿಸುವ ಕೆಲಸ ಆಗಿದೆ.

ಮುಳುಗಡೆಯಾಗುವ ಪ್ರತಿ ಎಕರೆ ಒಣಭೂಮಿಗೆ ₹5 ಲಕ್ಷದಿಂದ ₹20 ಲಕ್ಷಕ್ಕೆ, ನೀರಾವರಿ ಭೂಮಿಗೆ ₹6 ರಿಂದ 24 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದೊಂದು ಐತಿಹಾಸಿಕ ನಿರ್ಣಯವಾಗಿದೆ.

ಕ್ಷೇತ್ರದ ಜನತೆಗೆ ನಿಮ್ಮ ಭರವಸೆಗಳೇನು?

ಜನಸಾಮಾನ್ಯನೂ ವಿಮಾನದಲ್ಲಿ ಓಡಾಡುವಂತೆ ಆಗಬೇಕು. ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದಾಗಲೂ ಪ್ರತಿಪಕ್ಷದವರು ಹಾಸ್ಯ ಮಾಡಿದ್ದರು. ಉಡಾನ್‌ ಯೋಜನೆ ಜಾರಿ ನಂತರ ಎಲ್ಲೆಡೆ ವಿಮಾನ ಸಂಚಾರ ಆರಂಭವಾಗಿದೆ. ವಿಮಾನದಲ್ಲಿ ಹೋಗಬೇಕು ಅನ್ನುವುದಷ್ಟೇ ಅಲ್ಲ, ಅವರನ್ನು ಅಷ್ಟು ಆರ್ಥಿಕವಾಗಿ ಸಬಲರಾಗಿಸುವ ಗುರಿ ಹೊಂದಲಾಗಿದೆ.

ಜಿಲ್ಲೆಯ ಹಲಕುರ್ಕಿಯಲ್ಲಿ ₹24 ಸಾವಿರ ಕೋಟಿ ಹೂಡಿಕೆಯಾಗಲಿದ್ದು, 20 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಒತ್ತಾಯದಿಂದ ಭೂಮಿ ತೆಗೆದುಕೊಳ್ಳುವುದಿಲ್ಲ. ಐದು ವರ್ಷಗಳಲ್ಲಿ ಲಕ್ಷ ಜನರಿಗೆ ಉದ್ಯೋಗ, ಎರಡು ವರ್ಷಗಳಲ್ಲಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲಾಗುವುದು. ಆಲಮಟ್ಟಿ ಹಿನ್ನೀರಿನಲ್ಲಿ ಜಲ ಸಾರಿಗೆ, ಹೆರಕಲ್‌ ಬಳಿ ₹65 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ.

ನಿಮ್ಮ ಎದುರಾಳಿ ಯಾರು?

ಕಣದಲ್ಲಿರುವವರೆಲ್ಲರೂ ಪ್ರತಿಸ್ಪರ್ಧಿಗಳೇ. ಚುನಾವಣೆಗೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇರುವುದರಿಂದ ಯಾರೇ ಸ್ಪರ್ಧಿಸಿದರೂ ಎದರಿಸಲು ಸಿದ್ಧನಾಗಿದ್ದೇನೆ.

ಪ್ರಚಾರಕ್ಕೆ ಸ್ಪಂದನೆ ಹೇಗಿದೆ?

ಐದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಸಂತೃಪ್ತಗೊಂಡಿರುವ ಮತದಾರರು ಆರತಿ ಎತ್ತಿ, ಹಾರ ಹಾಕಿ ಸ್ವಾಗತಿಸುತ್ತಿದ್ದಾರೆ. ಎಲ್ಲೆಡೆಯೂ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಸಂತ್ರಸ್ತರಿಗೆ ಪುನರ್‌ ವಸತಿ: ಕಾಂಗ್ರೆಸ್‌ ಅಭ್ಯರ್ಥಿ ಜೆ.ಟಿ. ಪಾಟೀಲ

ಜೆ.ಟಿ. ಪಾಟೀಲ
ಜೆ.ಟಿ. ಪಾಟೀಲ

ನಿಮಗೆ ಯಾಕೆ ಮತ ಹಾಕೇಬೇಕು?

ಶಾಸಕನಾಗಿದ್ದಾಗ ಬೀಳಗಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಹೆರಕಲ್‌ ಬ್ರಿಡ್ಜ್‌ ಕಂ ಬ್ಯಾರೇಜ್‌, ಗಲಗಲಿ, ಕೊರ್ತಿ ಕೊಲ್ಹಾರ ಬ್ಯಾರೇಜ್ ನಿರ್ಮಾಣ, 20 ಕೆರೆಗಳ ತುಂಬಿಸಿದ್ದರಿಂದ ಅಂತರ್ಜಲ ಹೆಚ್ಚಾಗಿದೆ.

ಅನಗವಾಡಿ, ಕೊರ್ತಿ ಕೊಲ್ಹಾರ ಬ್ರಿಡ್ಜ್‌ ನಿರ್ಮಾಣ, ಸಾವಳಗಿ–ತುಂಗಳಗಿ, ತೆಗ್ಗಿ–ಸಿದ್ದಾಪುರ, ಸೊನ್ನ, ರೊಳ್ಳಿ ಏತ ನೀರಾವರಿಗಳ ಜಾರಿ ಮಾಡಲಾಗಿದೆ. ಉಪವಾಸ ಮಾಡಿ ಮುಳುಗಡೆಯಾದ ಪ್ರತಿ ಎಕರೆ ಒಣ ಭೂಮಿಯ ಬೆಲೆಯನ್ನು ₹8 ರಿಂದ ₹75 ಸಾವಿರಕ್ಕೆ, ನೀರಾವರಿ ಪ್ರತಿ ಎಕರೆಗೆ 11 ಸಾವಿರದಿಂದ ₹1.16 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು. ನಂತರ ಮತ್ತೆ ಹೆಚ್ಚಳ ಮಾಡಲಾಗಿದೆ.

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಭರವಸೆಗಳೇನು?

ಬೀಳಗಿ ಪಟ್ಟಣದ ಗಟಾರ ನೀರು ಕೆರೆ ತುಂಬದಂತೆ ಮಾಡುವುದು. ಅಪೂರ್ಣವಾಗಿರುವ 1,089 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದು. ನಿತ್ಯ ನೀರು ಪೂರೈಕೆಗೆ ಕ್ರಮ. ಯುಕೆಪಿ ಯೋಜನೆಯಡಿ 80ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗುತ್ತವೆ. ಅವರಿಗೆ ಸುವ್ಯವಸ್ಥಿತ ಪುನರ್‌ ವಸತಿ ಕಲ್ಪಿಸುವುದು. ಬೀಳಗಿ ರಸ್ತೆ ವಿಸ್ತರಣೆ ಮಾಡುವುದು.

ನಿಮ್ಮ ಪ್ರತಿ ಸ್ಪರ್ಧಿ ಯಾರು?

ಬಿಜೆಪಿಯೇ ನೇರ ಎದುರಾಳಿ. ಹಿಂದಿನ ಚುನಾವಣೆಗಳನ್ನ ನೋಡಿದಾಗ ಎರಡೂ ಪಕ್ಷಗಳ ನಡುವೆಯೇ ಪೈಪೋಟಿ ನಡೆದಿದೆ.

ಕಾಂಗ್ರೆಸ್‌ನಲ್ಲಿದ್ದ ಅಸಮಾಧಾನ ಶಮನವಾಗಿದೆಯೇ?

ಈಗಾಗಲೇ ಬಸವಪ್ರಭು ಸರನಾಡಗೌಡರು ಪ್ರಚಾರಕ್ಕೆ ಇಳಿದಿದ್ದಾರೆ. ಎಸ್‌.ಆರ್‌. ಪಾಟೀಲ ಇಷ್ಟು ವರ್ಷಗಳಲ್ಲಿ ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಲ್ಲ. ಅವರೊಂದಿಗೆ ನನ್ನ ಬಾಂಧವ್ಯ ಚೆನ್ನಾಗಿದೆ. ಖೋತ ಅವರೂ ಪಕ್ಷದ ಪರ ಕೆಲಸ ಮಾಡುವ ಪ್ರಮಾಣ ಮಾಡಿದ್ದರು. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ.

ಪ್ರಚಾರಕ್ಕೆ ಸ್ಪಂದನೆ ಹೇಗಿದೆ?

ಜನರಿಂದ ಒಳ್ಳೆಯ ಸ್ವಾಗತ ಸಿಗುತ್ತಿದೆ. ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುವ ಜನರು ಪರಿಹಾರ ಒದಗಿಸಬೆಕು ಎಂಬ ಬೇಡಿಕೆ ಈಡೇರುತ್ತಿದ್ದಾರೆ. ಮನೆ, ಮನೆಗೆ ಹೋಗಿ ಎಲ್ಲರೂ ಪ್ರಚಾರ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT