ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ರಾಜ್ಯ ಬಿಜೆಪಿ ಚುನಾವಣಾ ಪ್ರಚಾರಕ್ಕೆ ನಾಲ್ಕು ತಂಡಗಳು

ಮೋದಿ, ಶಾ,ಯೋಗಿ ಪ್ರಚಾರಕ್ಕೆ ಬೇಡಿಕೆ ಹೆಚ್ಚು
Published 27 ಮಾರ್ಚ್ 2024, 14:49 IST
Last Updated 27 ಮಾರ್ಚ್ 2024, 14:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನಾಲ್ಕು ತಂಡಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರವನ್ನು ನಡೆಸಲಿದ್ದು, ಬಿ.ವೈ.ವಿಜಯೇಂದ್ರ, ಬಿ.ಎಸ್‌.ಯಡಿಯೂರಪ್ಪ, ಆರ್‌.ಅಶೋಕ ನೇತೃತ್ವದಲ್ಲಿ ಮೂರು ತಂಡಗಳು ರಚಿತವಾಗಲಿವೆ. ನಾಲ್ಕನೇ ತಂಡ ಕೇಂದ್ರ ನಾಯಕರ ನೇತೃತ್ವದಲ್ಲಿ ಪ್ರಚಾರವನ್ನು ಮುನ್ನಡೆಸಲಿದೆ.

ಮತ್ತೊಂದು ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಾಗ ಅವರ ವೇದಿಕೆಯಲ್ಲಿ ವಿಜಯೇಂದ್ರ ಮತ್ತು ಅಶೋಕ ಅವರು ಇರುವುದಿಲ್ಲ. ಯಡಿಯೂರಪ್ಪ ಅವರಿಗೆ ಮಾತ್ರ ಅವಕಾಶ ಇರುತ್ತದೆ. ಪ್ರತಿ ತಂಡದಲ್ಲೂ ಐವರು ಪ್ರಮುಖ ನಾಯಕರು ಇರುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೋದಿ ಅವರು ಪ್ರಚಾರಕ್ಕೆ ಬಂದಾಗ ಅದೇ ಸಮಯದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಉಳಿದ ನಾಯಕರೂ ಪ್ರಚಾರದಲ್ಲಿ ತೊಡಗಿಸಿಕೊಂಡಿರಬೇಕು. ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನೆಪದಲ್ಲಿ ಉಳಿದ ಕಡೆಗಳಲ್ಲಿ ಪ್ರಚಾರ ಕಾರ್ಯಕ್ಕೆ ತಡೆ ಬೀಳಬಾರದು. ಏಕಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಕ್ಕೆ ಇಳಿಯುವ ಮೂಲಕ ಹೆಚ್ಚು ಹೆಚ್ಚು ಜನರನ್ನು ತಲುಪುವ ಕೆಲಸ ಆಗಬೇಕು. ಇಲ್ಲವಾದರೆ ಒಂದರಿಂದ ಎರಡು ಇಡೀ ದಿನ ವ್ಯರ್ಥವಾಗುತ್ತದೆ ಎಂಬುದು ಮೋದಿ ಅವರ ಚಿಂತನೆ ಎಂದೂ ಮೂಲಗಳು ಹೇಳಿವೆ. 

ಪ್ರಧಾನಿಯವರ ಒಂದೆರಡು ಸಭೆಗಳಿಗೆ ಜೆಡಿಎಸ್‌ ಹಿರಿಯ ನಾಯಕರಿಗೆ ಆಹ್ವಾನ ನೀಡಲಾಗುತ್ತದೆ. ಉಳಿದಂತೆ ಬಿಜೆಪಿ–ಜೆಡಿಎಸ್‌ ನಾಯಕರು ಜಂಟಿಯಾಗಿ ಪ್ರಚಾರ ನಡೆಸುವ ಉದ್ದೇಶವಿದೆ.
ಪಿ.ರಾಜೀವ್‌, ರಾಜ್ಯಪ್ರಧಾನ ಕಾರ್ಯದರ್ಶಿ ಬಿಜೆಪಿ

‘ಮೋದಿಯವರಿಂದ ನಾಲ್ಕು, ಅಮಿತ್‌ ಶಾ ಅವರಿಂದ ಆರು, ಯೋಗಿ ಆದಿತ್ಯನಾಥ ಮತ್ತು ಜೆ.ಪಿ.ನಡ್ಡಾ ಅವರಿಂದ ತಲಾ ನಾಲ್ಕು ಸಮಾವೇಶಗಳಿಗೆ ಕೋರಿಕೆ ಸಲ್ಲಿಸಿದ್ದೇವೆ. ಮೋದಿಯವರು ಎಲ್ಲಿ, ಯಾವ ಕ್ಷೇತ್ರಕ್ಕೆ ಮತ್ತು ಯಾವಾಗ ಬರಬೇಕು ಎಂಬುದನ್ನು ಅವರ ಚುನಾವಣಾ ತಂಡವೇ ತೀರ್ಮಾನಿಸುತ್ತದೆ. ಮೋದಿ ಬರುವುದರಿಂದ ಕ್ಷೇತ್ರಕ್ಕೆ ಅನುಕೂಲ ಆಗುತ್ತದೆಯೇ ಎಂಬ ಮಾಹಿತಿಯನ್ನು ಆಧರಿಸಿ ತಂಡ ನಿರ್ಧಾರ ತೆಗೆದುಕೊಳ್ಳುತ್ತದೆ. ಅವರು ಬರುವ ಮುನ್ನ, ಬಂದ ನಂತರ ಮತದಾರರ ಮೇಲೆ ಯಾವ ರೀತಿ ಪರಿಣಾಮ ಆಗಿದೆ ಎಂಬುದರ ಸಮೀಕ್ಷೆಯನ್ನು ಆ ತಂಡವೇ ನಡೆಸುತ್ತದೆ‘ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಿಗೆ ಆರಂಭದ ಹಂತದಲ್ಲಿ ಶೇ 70ರಷ್ಟು ಮತ್ತು ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲಿಗೆ ಶೇ 30 ಸಮಯವನ್ನು ನಿಗದಿ ಮಾಡಲಾಗುವುದು. ಮೊದಲ ಹಂತದ ಮತದಾನ ಮುಗಿದ ಬಳಿಕ ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಶೇ 100 ಸಮಯ ನಿಗದಿ ಮಾಡಲಾಗುವುದು. ಕ್ಷೇತ್ರಕ್ಕೆ ಯಾವ ನಾಯಕರನ್ನು ಪ್ರಚಾರಕ್ಕೆ ಕರೆಸಬೇಕು ಎಂಬ ಬಗ್ಗೆ ಅಭ್ಯರ್ಥಿಗಳಿಂದಲೇ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಅದರ ಆಧಾರದ ಮೇಲೆ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ ಎಂದು ವಿವರಿಸಿದರು.

‘ನಮೋ’ ಮತ್ತು ‘ಸರಳ್‌’ ಆ್ಯಪ್‌ನಲ್ಲಿ ಪಕ್ಷದ ಅಧ್ಯಕ್ಷರೂ ಸೇರಿ ಸಂಬಂಧಪಟ್ಟ ಎಲ್ಲರೂ ಪ್ರತಿಯೊಂದು ಕಾರ್ಯಕ್ರಮವನ್ನು ದಾಖಲಿಸಬೇಕು. ಗ್ರಾಮ ಚಲೋ, ಕೇಂದ್ರ ಯೋಜನೆಗಳ ಫಲಾನುಭವಿಗಳ ಸಂಪರ್ಕ, ರೈತರ ಪರಿಕ್ರಮ, ಗ್ರಾಮ ಪರಿಕ್ರಮ ಯಾತ್ರೆ ಇವುಗಳ ಪ್ರಗತಿ ಮತ್ತು ಭಾಗವಹಿಸುವಿಕೆ ಮಾಹಿತಿಯನ್ನು ವರಿಷ್ಠರು ಪಡೆಯುತ್ತಾರೆ. ಈ ಎಲ್ಲ ಚಟುವಟಿಕೆಗಳೂ ಚುನಾವಣೆ ಮುಗಿಯುವವರೆಗೆ ಮುಂದುವರಿಯುತ್ತವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT