ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಕ್ಕೆ ಟಿಕೆಟ್‌ ಕೊಟ್ಟು ಖಳನಾಯಕ ಮಾಡಿದರು: BJP ವಿರುದ್ಧ ಸಂಗಣ್ಣ ಕರಡಿ ಆರೋಪ

Published 18 ಏಪ್ರಿಲ್ 2024, 11:08 IST
Last Updated 18 ಏಪ್ರಿಲ್ 2024, 11:08 IST
ಅಕ್ಷರ ಗಾತ್ರ

ಕೊಪ್ಪಳ: ’ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಳ ವೇಳೆ ಕೊಪ್ಪಳ ಕ್ಷೇತ್ರಕ್ಕೆ ನನ್ನ ಕುಟುಂಬದವರಿಗೆ ಬೇಡವೆಂದರೂ ಟಿಕೆಟ್‌ ನೀಡಿದ ಬಿಜೆಪಿ ನಾಯಕರು ನನ್ನನ್ನು ಖಳನಾಯಕನನ್ನಾಗಿ ಮಾಡಿದರು’ ಎಂದು ಒಂದು ದಿನದ ಹಿಂದೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘2018ರಲ್ಲಿ ಸಿ.ವಿ. ಚಂದ್ರಶೇಖರ್‌ ಅವರಿಗೆ ಟಿಕೆಟ್‌ ಘೋಷಣೆಗೂ ಮೊದಲು ಯಾರೂ ನನ್ನ ಅಭಿಪ್ರಾಯ ಕೇಳಿರಲಿಲ್ಲ. ಹಿಂದಿನ ಚುನಾವಣೆಯಲ್ಲಿ ನಮ್ಮ ಕುಟುಂಬಕ್ಕೆ ಟಿಕೆಟ್‌ ನೀಡುವಂತೆ ಬೇಡಿಕೆಯನ್ನೇ ಇಟ್ಟಿರಲಿಲ್ಲ. ನಮ್ಮ ಕುಟುಂಬದವರಿಗೆ ಟಿಕೆಟ್‌ ಬೇಡವೇ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದರೂ ಶೋಭಾ ಕರಂದ್ಲಾಜೆ ಮಹಿಳಾ ಕೋಟದಲ್ಲಿ ನಿಮ್ಮ ಸೊಸೆಗೆ ಟಿಕೆಟ್‌ ಕೊಡುವುದಾಗಿ ಕೊನೆಯಲ್ಲಿ ಕೊಟ್ಟರು. ಇದರಿಂದ ಎರಡೂ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಪಕ್ಷದ ತೀರ್ಮಾನದಿಂದಾಗಿ ನಾನು ಎಲ್ಲರಿಗೂ ಖಳನಾಯಕನಾಗಬೇಕಾಯಿತು’ ಎಂದು ಹೇಳಿದರು.

‘ಯಾವ ಷರತ್ತು ವಿಧಿಸದೆ ಕಾಂಗ್ರೆಸ್‌ ಸೇರಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ ಸಾಮಾನ್ಯ. ಟಿಕೆಟ್‌ ಸಿಗದ ಕಾರಣಕ್ಕೆ ಬಿಜೆಪಿ ತೊರೆದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಕಾಂಗ್ರೆಸ್‌ ಸೇರಬೇಕಾಯಿತು. ಪಕ್ಷದಲ್ಲಿದ್ದವರನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವ ಸೌಜನ್ಯವೂ ಬಿಜೆಪಿಯಲ್ಲಿಲ್ಲ. ಅಭಿವೃದ್ಧಿ ಕುರಿತು ಚರ್ಚೆಯೇ ಮಾಡದಿರುವುದು ನೋವುಂಟು ಮಾಡಿದೆ’ ಎಂದು ಹೇಳಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಗೆಲ್ಲುವುದು ನಿಶ್ಚಿತ. ಸಿಂಗಟಾಲೂರು ನೀರಾವರಿ, ರೈಲ್ವೆ, ವಿಮಾನ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವ ಉದ್ದೇಶ ನನ್ನದಾಗಿದ್ದು ಎಲ್ಲರೂ ಒಗ್ಗೂಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

‘ಬಿಜೆಪಿ ಕಾರ್ಯಕರ್ತರ ವನವಾಸ ಅಂತ್ಯವಾಗಿ ಒಳ್ಳೆಯ ದಿನಗಳು ಶುರುವಾಗಿವೆ’ ಎಂದು ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ’ಸಿವಿಸಿಗೆ ಒಳ್ಳೆಯದಾಗಲಿ. ಕಾರ್ಯಕರ್ತರಿಗೆ ಒಳ್ಳೆಯದಾದರೆ ನನಗೂ ಖುಷಿ. ಎರಡು ಬಾರಿ ಸಂಸದ ಮತ್ತು ಶಾಸಕರಾದರೂ ಸಚಿವ ಸ್ಥಾನವೇ ಸಿಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ದನ ಹುಲಿಗಿ, ಕಾಂಗ್ರೆಸ್ ಮುಖಂಡರಾದ ವೀರನಗೌಡ ಪಾಟೀಲ್, ಪ್ರಸನ್ನ ಗಡಾದ, ಅಮರೇಶ ಕರಡಿ ಪಾಲ್ಗೊಂಡಿದ್ದರು.

ಸಿ.ಟಿ. ರವಿಗೆ ಸಂಗಣ್ಣ ಸವಾಲು

ಯೋಜನೆಗಳನ್ನು ಕ್ಷೇತ್ರಕ್ಕೆ ಕೊಡುವುದು ಬಿಜೆಪಿ ಹಾಗೂ ನರೇಂದ್ರ ಮೋದಿ ಎನ್ನುವ ದೇವರು. ಪಕ್ಷ ಬಿಟ್ಟು ಹೋಗಿದ್ದು ಪೂಜಾರಿ (ಸಂಗಣ್ಣ ಕರಡಿ) ಮಾತ್ರ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಬುಧವಾರ ಕೊಪ್ಪಳದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಟೀಕಿಸಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಗಣ್ಣ ‘ಯೋಜನೆಗಳು ತಮ್ಮಷ್ಟಕ್ಕೆ ತಾವೇ ಜಾರಿಯಾಗುವುದಾದರೆ ಅಭ್ಯರ್ಥಿಯನ್ನು ಯಾಕೆ ನಿಲ್ಲಿಸಬೇಕಿತ್ತು. ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವ ಉದ್ದೇಶವಿರಲಿಲ್ಲ. ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆನ್ನುವ ಕಾರಣಕ್ಕೆ ಸೊಸೆ ಮಂಜುಳಾಗೆ ನೀಡಿದರು. ಹೀಗೆ ಆರೋಪ ಮಾಡುವ ಮೂಲಕ ಪಕ್ಷದವರು ವಿಲನ್‌ ಮಾಡಿದ್ದಾರೆ. ಇದಕ್ಕೆ ಸಿ.ಟಿ. ರವಿ ಉತ್ತರ ಕೊಡಲಿ ನೋಡೋಣ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT