ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಕೊನೆಗೂ ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್‌ ಮುಖಂಡರು

Published 17 ಏಪ್ರಿಲ್ 2024, 11:42 IST
Last Updated 17 ಏಪ್ರಿಲ್ 2024, 11:42 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮೂರು, ಮತ್ತೊಂದು ಬಣಗಳಿಂದ ಸುದ್ದಿಯಾಗಿದ್ದ ಹಾಗೂ ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಇದುವರೆಗೆ ಒಟ್ಟಿಗೆ ಸೇರದಿದ್ದ ವಿಜಯನಗರ ಜಿಲ್ಲೆಯ ಕಾಂಗ್ರೆಸ್‌ನ ಬಹುತೇಕ ಮುಖಂಡರು ಬುಧವಾರ ಇಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಪರೂಪದ ಒಗ್ಗಟ್ಟು ಪ್ರದರ್ಶಿಸಿದರು.

ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಭಾರಿ ಭಿನ್ನಮತ ಇರುವುದನ್ನು ಮನಗಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಎರಡು ತಿಂಗಳಿಂದ ಜಿಲ್ಲೆಯತ್ತ ಮುಖ ಮಾಡಿರಲಿಲ್ಲ. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌ ಅವರು ಪಕ್ಷದ ಪ್ರಚಾರ ಸಭೆಗಳಿಂದ ದೂರವೇ ಉಳಿದಿದ್ದರು. ಕೆಎಂಎಫ್‌ ಅಧ್ಯಕ್ಷ  ಭೀಮಾ ನಾಯ್ಕ್ ಅವರ ಹೆಸರೆತ್ತಿದರೆ ಉರಿದು ಬೀಳುತ್ತಿದ್ದರು. ಲೋಕಸಭಾ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಮತ್ತು ಗುಜ್ಜಲ್‌ ನಾಗರಾಜ್‌ ಪ್ರಚಾರ ಸಭೆಗಳಿಗೆ ಬರುತ್ತಿರಲಿಲ್ಲ. ಅವರೆಲ್ಲರೂ ಬುಧವಾರ ಶಾಸಕ ಎಚ್‌.ಆರ್.ಗವಿಯಪ್ಪ ಅವರಿಗೆ ಸೇರಿದ ಇಲ್ಲಿನ ಸಾಯಿಲೀಲಾ ರಂಗಮಂದಿರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು.

ಹೀಗಿದ್ದರೂ ಎಲ್ಲಾ ಅಸಮಾಧಾನ ಕೊನೆಗೊಂಡಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ, ಪಕ್ಷದ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ ಮಾತ್ರ ಸಭೆಯಿಂದ ದೂರವೇ ಉಳಿದಿದ್ದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷರನ್ನಾಗಿ ನಿಯೋಜಿಸಿ, ಒಂದೇ ದಿನದಲ್ಲಿ ಆದೇಶ ಹಿಂಪಡೆದ ವಿದ್ಯಮಾನದ ಬಳಿಕ ಅವರು ಸ್ಥಳೀಯ ಶಾಸಕ ಗವಿಯಪ್ಪ ಅವರೊಂದಿಗೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಗೈರು ಹಾಜರಿ ಎದ್ದುಕಾಣಿಸಿತು.

ಹೆಚ್ಚು ಮತ ತೆಗೆಸಿಕೊಡುವ ಪೈಪೋಟಿ: ಇದೇ 12ರಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಅವರ ನಾಮಪತ್ರ ಸಲ್ಲಿಕೆ ವೇಳೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಹಾಜರಿದ್ದರು. ಆದರೆ ಪಕ್ಷದ ಪ್ರಚಾರ ಸಭೆಗಳಿಗೆ ಇದುವರೆಗೆ ಬಂದಿರದಿದ್ದ ಸಚಿವರು ಕಾರ್ಯಕರ್ತರ ಸಭೆಗೆ ಇದೇ ಮೊದಲ ಬಾರಿಗೆ ಬಂದಿದ್ದರು. ‘ಪಕ್ಷದ ಕಾರ್ಯಕರ್ತರ ಉತ್ಸಾಹ ಕಂಡರೆ ಬಳ್ಳಾರಿಗಿಂತ ವಿಜಯನಗರ ಜಿಲ್ಲೆಯಲ್ಲೇ ಅಧಿಕ ಮತವನ್ನು ನಾನು ತುಕಾರಾಂ ಅವರಿಗೆ ತೆಗೆಸಿಕೊಡುವುದು ಖಂಡಿತ’ ಎಂದು ಆತ್ಮವಿಶ್ವಾಸದಿಂದ ಹೇಳಿದರು.

‘ವಿಜಯನಗರಕ್ಕಿಂತ ಬಳ್ಳಾರಿ ಜಿಲ್ಲೆಯಲ್ಲೇ ಅಧಿಕ ಮತಗಳನ್ನು ತೆಗೆಸಿಕೊಡುವ ಹುಮ್ಮಸ್ಸಿನಲ್ಲಿ ನಾನು ಇದುವರೆಗೆ ಇದ್ದೆ. ಜಮೀರ್ ಅಹ್ಮದ್ ಖಾನ್‌ ಅವರ ಉತ್ಸಾಹ ನೋಡಿದರೆ ವಿಜಯನಗರ ಜಿಲ್ಲೆಯಲ್ಲಿ ಸಹ ಅವರು ಅಧಿಕ ಮತ ಗಳಿಸಿಕೊಡುವುದು ನಿಶ್ಚಿತ. ಇದೀಗ ನನ್ನ ಹೊಣೆಗಾರಿಕೆ ಹೆಚ್ಚಾಗಿದೆ, ಬಳ್ಳಾರಿಯಲ್ಲಿ ಇನ್ನಷ್ಟು ಹೆಚ್ಚು ಮತವನ್ನು ತುಕಾರಾಂ ಅವರಿಗೆ ದೊರಕಿಸಿಕೊಡಬೇಕಿದೆ. ನಮ್ಮಿಬ್ಬರ ಪೈಪೋಟಿಯಲ್ಲಿ ತುಕಾರಾಂ ಈ ಬಾರಿ 2.5 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ’ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ಕೆಲವು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಿದರು. ಇದಕ್ಕೆ ಮೊದಲು ಬೆಳಿಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಸಮಾಜದ ಮುಖಂಡರ ಸಭೆ ನಡೆಸಲಾದರೆ, ಸಂಜೆ ಅಲ್ಲೇ ದಲಿತ  ಸಮುದಾಯದ ಮುಖಂಡರ ಸಭೆ ಹಮ್ಮಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT