ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಲೋಕಸಭಾ ಚುನಾವಣೆ: ನಿವೃತ್ತ ಐಎಎಸ್ ಅಧಿಕಾರಿಗೆ ಮಣೆ ಹಾಕಿದ ಕಾಂಗ್ರೆಸ್

Published 22 ಮಾರ್ಚ್ 2024, 6:34 IST
Last Updated 22 ಮಾರ್ಚ್ 2024, 6:34 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ರಾಯಚೂರು ಎಸ್‌.ಟಿ.ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪಕ್ಷದೊಳಗೆ ಸಮರ್ಥ ಅಭ್ಯರ್ಥಿ ‘ಕೈ’ ಸಿಗದ ಕಾರಣ ಕಾಂಗ್ರೆಸ್‌ ಪಕ್ಷವು ನಿವೃತ್ತ ಐಎಎಸ್‌ ಅಧಿಕಾರಿಯನ್ನೇ ಚುನಾವಣಾ ಕಣಕ್ಕೆ ಇಳಿಸಲು ನಿರ್ಧರಿಸಿದೆ. ನಿರೀಕ್ಷೆಯಂತೆ ಜಿ.ಕುಮಾರ ನಾಯಕ ಅವರಿಗೆ ಪಕ್ಷದ ಟಿಕೆಟ್ ಪ್ರಕಟಿಸಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಅಧಿಕ ಇದ್ದರೂ ಜಿಲ್ಲೆಯಲ್ಲಿರುವ ಎರಡು ಬಣಗಳ ರಾಜಕೀಯವೇ ಹೈಕಮಾಂಡಗೆ ತಲೆ ನೋವು ಆಗಿತ್ತು. ಜಿಲ್ಲೆಯವರಿಗೆ ಪರಿಚಿತರೇ ಆಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕಗೆ ಟಿಕೆಟ್ ಘೋಷಣೆ ಮಾಡಿದ ನಂತರ ಗೊಂದಲಕ್ಕೂ ತೆರೆ ಬಿದ್ದಿದೆ.

ಜಿ.ಕುಮಾರ ನಾಯಕ ಅವರು ನೇರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಂಪರ್ಕಿಸಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಕೋರಿದ್ದರು. ಖರ್ಗೆ ಅವರು ಜಿಲ್ಲೆಯಲ್ಲಿರುವ ಕಾಂಗ್ರೆಸ್‌ನ ಎರಡೂ ಬಣಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ್ದರು. ಎರಡೂ ಬಣಗಳು ಸಹಮತ ವ್ಯಕ್ತಪಡಿಸಿದ ನಂತರವೇ ತಮ್ಮ ನಿರ್ಧಾರ ಪ್ರಕಟಿಸಿ ಜಾಣ್ಮೆಯನ್ನು ತೋರಿದ್ದಾರೆ.

ಕುಮಾರ ನಾಯಕ ಎರಡು, ಮೂರು ತಿಂಗಳಿಂದ ನಗರದ ಹೋಟೆಲೊಂದರಲ್ಲಿ ರೂಮ್‌ ಮಾಡಿಕೊಂಡು ರಾಜಕೀಯ ನಾಯಕರನ್ನು ಸಂಪರ್ಕಿಸಿ ರಾಜಕೀಯ ವೇದಿಕೆ ಗಟ್ಟಿಮಾಡಿಕೊಂಡಿದ್ದರು. ಕುಮಾರನಾಯಕ ಅವರಿಗೆ ಟಿಕೆಟ್‌ ಪ್ರಕಟಗೊಂಡು ಕಾಂಗ್ರೆಸ್‌ ಅಭ್ಯರ್ಥಿ ಯಾರು ಎನ್ನುವ ಕುತೂಹಲಕ್ಕೂ ತೆರೆ ಬಿದ್ದಿದೆ.


ಬಿಜೆಪಿ ಟಿಕೆಟ್‌ ಬಿ.ವಿ.ನಾಯಕಗೆ?

ರಾಯಚೂರಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರ ಬದಲು ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್‌ ದೊರೆಯಲಿದೆ ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿವೆ. ಆದರೆ, ರಾಜಾ ಅಮರೇಶ್ವರ ನಾಯಕ ಎರಡನೇ ಅವಧಿಗೂ ಬಿಜೆಪಿಯಿಂದಲೇ ಚುನಾವಣಾ ಕಣಕ್ಕೆಇಳಿದರೆ ಅಚ್ಚರಿ ಇಲ್ಲ.

ಬಿಜೆಪಿಯಲ್ಲಿ ಬಿ.ವಿ.ನಾಯಕ ಹಾಗೂ ರಾಜಾ ಅಮರೇಶ್ವರ ನಾಯಕ ಎರಡೇ ಹೆಸರುಗಳು ಕೇಳಿ ಬರುತ್ತಿವೆ. ಒಂದು ವರ್ಷದಿಂದ ತಣ್ಣಗೆ ಇದ್ದ ರಾಜಾ ಅಮರೇಶ್ವರ ನಾಯಕ ಇದೀಗ ಪಕ್ಷದ ವೇದಿಕೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಐದು ವರ್ಷ ಉತ್ತಮವಾಗಿ ಕೆಲಸ ಮಾಡಿರುವ ಕಾರಣ ಪಕ್ಷದ ಟಿಕೆಟ್‌ ನನಗೆ ಸಿಗಲಿದೆ" ಎನ್ನುವ ವಿಶ್ವಾಸದಲ್ಲಿ ರಾಜಾ ಅಮರೇಶ್ವರ ಇದ್ದಾರೆ. ಬಿಜೆಪಿ ಕಾರ್ಯಕರ್ತರು ಮಾತ್ರ ಬೇರೆ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡುವುದು ಸೂಕ್ತ ಎಂದು ಪಕ್ಷದ ಮುಖಂಡರಿಗೆ ಸಲಹೆ ಕೊಡುತ್ತಿದ್ದಾರೆ. ಮಾ.22ರಂದು ಬಿಜೆಪಿ ಪಟ್ಟಿ ಬಿಡುಗಡೆಯಾಗಲಿದ್ದು, ಕುತೂಹಲಕ್ಕೆ ತೆರೆಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT