ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಅಪಾಯ: ಸಚಿವ ಜಮೀರ್ ಅಹಮದ್‌ ಖಾನ್

Published 3 ಮೇ 2024, 15:27 IST
Last Updated 3 ಮೇ 2024, 15:27 IST
ಅಕ್ಷರ ಗಾತ್ರ

ಸಿಂಧನೂರು: ‘ಬಿಜೆಪಿ ಪಕ್ಷ ಕ್ಯಾನ್ಸರ್ ಇದ್ದಂತೆ. ಈಗಾಗಲೇ ಎರಡು ಬಾರಿ ಅಧಿಕಾರ ನಡೆಸಿ ಜನರ ಬದುಕನ್ನು ಹಾಳು ಮಾಡಿದೆ. ಈಗ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಸಂವಿಧಾನ ಮತ್ತು ದೇಶಕ್ಕೆ ಉಳಿಗಾಲವಿಲ್ಲ’ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್‌ ಖಾನ್ ಹೇಳಿದರು.

ಇಲ್ಲಿನ ಸತ್ಯ ಗಾರ್ಡನ್‍ನಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ನಗರದ 1 ರಿಂದ 31 ವಾರ್ಡ್‍ಗಳ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಜನಧನ ಖಾತೆಗೆ ₹15 ಲಕ್ಷ ಅಲ್ಲ. ₹15 ಪೈಸೆ ಹಾಕಿಲ್ಲ. ರೈತರ ಸಾಲ ಮನ್ನಾ ಮಾಡಿ ಎಂದರೆ ನಮ್ಮಲ್ಲಿ ನೋಟ್ ಪ್ರಿಂಟ್ ಮಷಿನ್ ಇಲ್ಲವೆಂದು ಹೇಳಿದ್ದರು. ಆದರೆ ಕಾರ್ಪೊರೇಟ್ ಕಂಪನಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇವರ ಅಚ್ಚೇದಿನ್ ಅದಾನಿ-ಅಂಬಾನಿಗೆ ಬಂದಿದೆ. ಹೊರತು ಬಡವರು, ರೈತರು, ಕಾರ್ಮಿಕರು, ಮಹಿಳೆಯರಿಗೆ ಬಂದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಪಾಕಿಸ್ತಾನ ಪರ ಜೈಕಾರ ಕೂಗಿದರೆ ಶೂಟ್‍ಔಟ್ ಮಾಡಿ’: ‘ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಎಲ್ಲ ಜಾತಿ, ಧರ್ಮದವರಿಗೆ ತಲುಪಿಸಿ ಮತ ಕೇಳುತ್ತಿದೆ. ಆದರೆ ಬಿಜೆಪಿ ಹಿಂದೂ-ಮುಸ್ಲಿಂ ಹೆಸರಿನಲ್ಲಿ ದ್ವೇಷ ಹರಡಿ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಜಾತಿ–ಧರ್ಮದ ಹೆಸರಿನಲ್ಲಿ ಒಡೆದಾಡಿ ಅಂತ ಇಸ್ಲಾಂ ಧರ್ಮ ಹೇಳಿಲ್ಲ. ಭಾರತೀಯತೆಯೇ ನಮ್ಮ ಧರ್ಮವೆಂದು ಸಾರಿದೆ. ನಾನು ಮೊದಲು ಹಿಂದೂಸ್ತಾನಿ, ಕನ್ನಡಿಗ, ಆ ಮೇಲೆ ಮುಸ್ಲಿಂ. ಕಾಂಗ್ರೆಸ್ ಸಭೆಗಳಲ್ಲಿ ಬಿಜೆಪಿಯ ಕಿಡಿಗೇಡಿಗಳೇ ಪಾಕಿಸ್ತಾನ ಪರ ಜೈಕಾರ ಹಾಕಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದರು.

ಅಧಿಕಾರಕ್ಕಾಗಿ ಬಿಜೆಪಿ ಏನು ಬೇಕಾದರೂ ಮಾಡುತ್ತದೆ. ಇನ್ನುಮುಂದೆ ಪಾಕಿಸ್ತಾನ ಪರ ಜೈಕಾರ ಕೂಗಿದರೆ ಅವರನ್ನು ಬಹಿರಂಗವಾಗಿ ಶೂಟ್‍ಔಟ್ ಮಾಡುವ ಕಾನೂನು ಜಾರಿಗೆ ತರಬೇಕು ಎಂದು ಹೇಳಿದರು.

‘30 ಸಾವಿರ ಲೀಡ್ ಕೊಟ್ಟರೆ ಬಾದರ್ಲಿಗೆ ಮಂತ್ರಿ ಸ್ಥಾನ’:  ಕೊಪ್ಪಳ ಕ್ಷೇತ್ರದಲ್ಲಿ ಎರಡು ಬಾರಿ ಸ್ವಲ್ಪ ಮತಗಳ ಅಂತರದಿಂದ ಸೋತಿರುವ ರಾಜಶೇಖರ ಹಿಟ್ನಾಳ ಅವರನ್ನು ಈ ಬಾರಿ 30 ಸಾವಿರ ಮತಗಳ ಲೀಡ್‍ನಿಂದ ಗೆಲ್ಲಿಸಿದರೆ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮಂತ್ರಿ ಸ್ಥಾನ ಸಿಗುವುದರಲ್ಲಿ ಸಂಶಯವಿಲ್ಲ’ ಎಂದರು.

‘ಸಿಂಧನೂರಿಗೆ 2 ಸಾವಿರ ಮನೆ ಮಂಜೂರು’: ‘ಸಿಂಧನೂರು ತಾಲ್ಲೂಕಿಗೆ ಜುಲೈ ತಿಂಗಳಲ್ಲಿ 2 ಸಾವಿರ ಮನೆಗಳು ಮಂಜೂರು ಆಗಲಿದ್ದು, ಎಲ್ಲ ಜಾತಿ, ಧರ್ಮದ ಬಡವರಿಗೆ ಸೂರು ಸಿಗಲಿವೆ’ ಎಂದು ಹೇಳಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ,‘20 ಎಕರೆಯಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿ ಕೊಡಲಾಗುವುದು. ₹86 ಕೋಟಿ ಅನುದಾನದಲ್ಲಿ ಕ್ಷೇತ್ರದಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರು, ಉದ್ಯಾನ ಅಭಿವೃದ್ಧಿ ಮಾಡಲು ಟೆಂಡರ್ ಕರೆಯಲಾಗಿದ್ದು, ಚುನಾವಣೆ ನಂತರ ಕೆಲಸಗಳು ಆರಂಭವಾಗಲಿವೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಹಿಟ್ನಾಳರಿಗೆ ಮತ ಹಾಕಿ ಗೆಲ್ಲಿಸಿ’ ಎಂದು ಕೋರಿದರು.

ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್‌ಪಾಷಾ ಮಾತನಾಡಿದರು.

ಜಿಲ್ಲಾಧ್ಯಕ್ಷ ಮೌಲಾ ಫರೀದ್‍ಖಾನ್, ಮುಖಂಡರಾದ ಎಂ.ಕಾಳಿಂಗಪ್ಪ ವಕೀಲ, ಬಾಬಾರ್‌ಪಾಷಾ ಜಾಗೀರದಾರ್, ಸೈಯದ್ ಜಾಫರ್‌ ಅಲಿ ಜಾಗೀರದಾರ್, ಹಾರೂನ್‍ ಪಾಷಾ ಜಾಗೀರದಾರ್, ಆರ್.ತಿಮ್ಮಯ್ಯ ನಾಯಕ, ಅಶೋಕ ಉಮಲೂಟಿ, ಫಾರೂಕ್‍ ಸಾಬ್ ಖಾಜಿ ತುರ್ವಿಹಾಳ, ಬಸವರಾಜ ಹಿರೇಗೌಡ, ರಂಗನಗೌಡ ಗೊರೇಬಾಳ ಹಾಗೂ ಖಾಜಿಮಲಿಕ್ ವಕೀಲ ಹಾಜರಿದ್ದರು. ಅನಿಲಕುಮಾರ ವೈ.ನಿರೂಪಿಸಿದರು.

‘ಮುಸ್ಲಿಮರೇ ಬಿಜೆಪಿಗೆ ಟಾರ್ಗೆಟ್’
‘ದೇಶದಲ್ಲಿ 10 ವರ್ಷ ಆಡಳಿತ ನಡೆಸಿದ ಬಿಜೆಪಿ ಪಕ್ಷಕ್ಕೆ ಮುಸ್ಲಿಮರೇ ಟಾರ್ಗೆಟ್ ಆಗಿದ್ದಾರೆ. ಇದರ ಭಾಗವಾಗಿಯೇ ಮುಸ್ಲಿಮರ ಮೀಸಲಾತಿ ತೆಗೆಯುವ ಹುನ್ನಾರ ನಡೆಸಿದ್ದಾರೆ’ ಎಂದು ಸಚಿವ ಜಮೀರ್ ಅಹಮದ್‌ ಖಾನ್ ಹೇಳಿದರು. ಹಿಜಾಬ್ ಹಲಾಲ್ ಕಟ್ ಮಸೀದಿಗಳ ಆಜಾನ್‍ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಾತಿ–ಧರ್ಮದ ಹೆಸರು ಹೇಳುವುದಾದರೆ ರಾಜಕಾರಣಕ್ಕೆ ಬರಬಾರದು. ಚುನಾವಣೆಯಲ್ಲಿ ಎಲ್ಲರೂ ವೋಟು ಹಾಕಿ ಗೆಲ್ಲಿಸಿರುತ್ತಾರೆ. ಗೆದ್ದ ನಂತರ ಜಾತಿ–ಧರ್ಮ ಅಂತ ಬೇರ್ಪಡಿಸಿ ಮೋಸ ಮಾಡಿದರೆ ನಮ್ಮ ಮಕ್ಕಳು ಹುಳ ಬಿದ್ದು ಸಾಯುತ್ತಾರೆ’ ಎಂದು ಆಕ್ರೋಶ ಭರಿತವಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT