ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಸುರೇಶ್‌ ₹593 ಕೋಟಿ ಒಡೆಯ: ಓಡಾಡಲು ಇಲ್ಲ ಸ್ವಂತ ಕಾರು!

ಐದು ವರ್ಷದಲ್ಲಿ ಸುರೇಶ್ ಆಸ್ತಿ ₹254 ಕೋಟಿ ಏರಿಕೆ; ಕುಟುಂಬದವರಿಗೇ ₹44 ಕೋಟಿ ಸಾಲ
Published 28 ಮಾರ್ಚ್ 2024, 22:28 IST
Last Updated 28 ಮಾರ್ಚ್ 2024, 22:28 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ₹106.71 ಕೋಟಿ ಚರಾಸ್ತಿ ಹಾಗೂ ₹ 486.33 ಕೋಟಿ ಸ್ಥಿರಾಸ್ತಿಯೊಂದಿಗೆ ಒಟ್ಟು ₹593.05 ಕೋಟಿ ಒಡೆಯ.

ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿಯ ಮೌಲ್ಯ ₹254.19 ಕೋಟಿಯಷ್ಟು ಏರಿಕೆಯಾಗಿದೆ. ಆದರೂ, ಕಾಂಗ್ರೆಸ್‌ ಅಭ್ಯರ್ಥಿ ಬಳಿ ಸ್ವಂತ ಕಾರು ಇಲ್ಲ! 

2019ರಲ್ಲಿ ಅವರು ₹338.86 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. 2014ರ ಚುನಾವಣೆಯಲ್ಲಿ ಘೋಷಿಸಿಕೊಂಡಿದ್ದ ಆಸ್ತಿ ₹85.87 ಕೋಟಿ. ಅದಕ್ಕೆ ಹೋಲಿಸಿದರೆ, ಹತ್ತು ವರ್ಷಗಳಲ್ಲಿ ಅವರ ಆಸ್ತಿಯ ಮೌಲ್ಯ ₹507.18 ಕೋಟಿ ಹೆಚ್ಚಳವಾಗಿದೆ.

ತಾಯಿ ಗೌರಮ್ಮ ಅವರಿಗೆ ₹4.75 ಕೋಟಿ, ಸಹೋದರ ಡಿ.ಕೆ.ಶಿವಕುಮಾರ್‌ ಅವರಿಗೆ ₹30.08 ಕೋಟಿ, ಡಿಕೆಶಿ ಪುತ್ರಿ ಐಶ್ವರ್ಯಾ ಹೆಗ್ಡೆಗೆ ₹7.94 ಕೋಟಿ ಹಾಗೂ ಪುತ್ರ ಆಕಾಶ್ ಕೆಂಪೇಗೌಡಗೆ ₹1.06 ಕೋಟಿ ಸೇರಿದಂತೆ ಕುಟುಂಬ ಸದಸ್ಯರಿಗೆ ₹43.83 ಕೋಟಿ ಸಾಲ ಕೊಟ್ಟಿದ್ದಾರೆ. ಇಷ್ಟು ಸಾಲ ಕೊಟ್ಟಿರುವ ಸುರೇಶ್ ಸ್ವತಃ ₹150 ಕೋಟಿ ಸಾಲಗಾರ!

ಡಿ.ಕೆ.ಸುರೇಶ್ ಅವರು 21 ಕಡೆ ₹32.75 ಕೋಟಿ ಮೌಲ್ಯದ 72 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ. ಬೆಂಗಳೂರು, ಕನಕಪುರ, ಆನೇಕಲ್ ಸೇರಿದಂತೆ 27 ಕಡೆ ₹210.47 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇವರ ಒಡೆತನದಲ್ಲಿದೆ.

ಬೆಂಗಳೂರಿನ ಗ್ಲೋಬಲ್ ಮಾಲ್‌ನಲ್ಲಿ ಸುಮಾರು 40 ಸಾವಿರ ಚದರ ಅಡಿ ಜಾಗ ಸೇರಿ ಒಟ್ಟು ಒಂಬತ್ತು ವಾಣಿಜ್ಯ ಕಟ್ಟಡ  ಹೊಂದಿದ್ದಾರೆ. ಇವುಗಳ ಮಾರುಕಟ್ಟೆ ಮೌಲ್ಯವೇ ₹211.97 ಕೋಟಿ. ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆ ಸೇರಿದಂತೆ ಸುರೇಶ್ ಬಳಿ ₹ 27.13 ಕೋಟಿ ಮೌಲ್ಯದ ಮೂರು ಮನೆಗಳಿವೆ. 1,260 ಗ್ರಾಂ ಚಿನ್ನಾಭರಣ ಮತ್ತು 4.86 ಕೆ.ಜಿ ಬೆಳ್ಳಿ ಇದೆ. ಇವುಗಳ ಮೌಲ್ಯ ₹23.45 ಲಕ್ಷ.  

ದ್ವಿತೀಯ ಪಿಯು ಓದಿರುವ ಅವರು ಮೂಲತಃ ಕೃಷಿಕ. ಅದರೊಂದಿಗೆ ಉದ್ಯಮಿ ಹಾಗೂ ಸಮಾಜ ಸೇವಕ ಎಂದು ಘೋಷಿಸಿಕೊಂಡಿದ್ದು, 31 ಪುಟಗಳಲ್ಲಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗುರುವಾರ ರಾಮನಗರದಲ್ಲಿ ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗುರುವಾರ ರಾಮನಗರದಲ್ಲಿ ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ಮೂರು ಪ್ರಕರಣ 

ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ ವೇಳೆ ನೀಡಿರುವ ಪ್ರಮಾಣಪತ್ರದಲ್ಲಿ ತಮ್ಮ ಮೇಲೆ ಮೂರು ಪ್ರಕರಣಗಳವೆ ಎಂದು ಡಿ.ಕೆ.ಸುರೇಶ್ ನಮೂದಿಸಿದ್ದಾರೆ. 2022ರಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಕನಕಪುರ ಟೌನ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣವಿದೆ. ಮೊದಲೆರಡು ಪ್ರಕರಣಗಳಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಸಲ್ಲಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT