ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರ ನಡುವೆ ಬಾಂಧವ್ಯಕ್ಕೆ ಒತ್ತು: ಬಿಜೆಪಿ–ಜೆಡಿಎಸ್‌ ಸಭೆಯಲ್ಲಿ ನಿರ್ಣಯ

ಬಿಜೆಪಿ–ಜೆಡಿಎಸ್‌ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಣಯ
Published 29 ಮಾರ್ಚ್ 2024, 15:33 IST
Last Updated 29 ಮಾರ್ಚ್ 2024, 15:45 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರ ನಡುವೆ ಉತ್ತಮ ಬಾಂಧವ್ಯ ಬೆಸೆದು, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪೂರಕ ವಾತಾವರಣ ನಿರ್ಮಿಸಲು ಶುಕ್ರವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಎರಡೂ ಪಕ್ಷಗಳ ನಾಯಕರು ನಿರ್ಣಯ ಕೈಗೊಂಡರು.

ಬಿಜೆಪಿ- ಜೆಡಿಎಸ್‌ ಎರಡೂ ಒಂದೇ:  

ಸಭೆಯಲ್ಲಿ ಮಾತನಾಡಿದ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ‘ಬಿಜೆಪಿ- ಜೆಡಿಎಸ್‌ ಬೇರೆಯಲ್ಲ. ನಾವೆಲ್ಲ ಒಂದೇ ತಾಯಿ ಮಕ್ಕಳಂತೆ. ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಪಣ ತೊಡಿ’ ಎಂದು ಕೋರಿದರು.

ದೇಶ- ವಿದೇಶಗಳಲ್ಲಿ ನಿರಂತರ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ 91ರ ವಯಸ್ಸಿನಲ್ಲೂ ಅತ್ಯಂತ ಉತ್ಸಾಹದಿಂದ ರಾಜ್ಯ ಪ್ರವಾಸ ಮಾಡಲು ಸಿದ್ಧರಾಗಿರುವ ಎಚ್.ಡಿ.ದೇವೇಗೌಡರು ನಮಗೆಲ್ಲ ಆದರ್ಶಪ್ರಾಯ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್‌ ಅಗರವಾಲ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜೆಡಿಎಸ್‌ ನಾಯಕರಾದ ಎಚ್‌.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ನಿಖಿಲ್‌ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಬಿ.ಎಸ್‌. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಆರ್. ಅಶೋಕ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಗೋವಿಂದ ಕಾರಜೋಳ ಉಪಸ್ಥಿತರಿದ್ದರು.

ಸಮನ್ವಯಕ್ಕೆ ಸೂತ್ರ

  • ಬಿಜೆಪಿ–ಜೆಡಿಎಸ್‌ ಜಿಲ್ಲಾ ಕಚೇರಿಗಳಲ್ಲಿ ಎನ್‌ಡಿಎ ವಿಭಾಗ ತೆರೆಯಬೇಕು

  • ವಿಧಾನಸಭಾ ಕ್ಷೇತ್ರವಾರು ಸಮನ್ವಯ ಸಮಿತಿ ಸಭೆ ನಡೆಸಬೇಕು

  • ಕರಪತ್ರ, ಬ್ಯಾನರ್‌, ಬಂಟಿಂಗ್ಸ್‌ ಮತ್ತಿತರ ಚುನಾವಣಾ ಪ್ರಚಾರ ಸಾಮಗ್ರಿಗಳಲ್ಲಿ ಎರಡೂ ಪಕ್ಷಗಳ ಚಿಹ್ನೆ ಬಳಕೆ

  • ಪ್ರಚಾರ ಕಾರ್ಯಗಳಲ್ಲಿ ಎರಡೂ ಪಕ್ಷಗಳ ಬಾವುಟ ಕಡ್ಡಾಯ

  • ಎನ್‌ಡಿಎ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಉಪಸ್ಥಿತಿ

  • ಕಾರ್ಯಕರ್ತರ ನಡುವೆ ಸಾಮರಸ್ಯ ಮೂಡಿಸುವುದು ಆಯಾ ಕ್ಷೇತ್ರಗಳ ಎರಡೂ ಪಕ್ಷಗಳ ನಾಯಕ ಹೊಣೆ

ಇಬ್ಬರ ಸಮ್ಮತಿ ಮೈತ್ರಿಗೆ ಶಕ್ತಿ: ವಿಜಯೇಂದ್ರ

2006ರಲ್ಲೇ ಬಿಜೆಪಿ–ಜೆಡಿಎಸ್‌ ಮಧ್ಯೆ ಹೊಂದಾಣಿಕೆಯಾಗಿದ್ದರೂ ದೇವೇಗೌಡರ ಸಮ್ಮತಿ ಇರಲಿಲ್ಲ. ಈಗ ದೇಶದ ಭದ್ರತೆ ಅಭಿವೃದ್ಧಿ ದೃಷ್ಟಿಯಿಂದ ಮೈತ್ರಿಗೆ ಪ್ರಧಾನಿ ಹಾಗೂ ಮಾಜಿ ಪ್ರಧಾನಿಯವರ ಸಮ್ಮತಿ ಸಿಕ್ಕಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಸಮನ್ವಯ ಸಮಿತಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಅವರ ಸಂದೇಶ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ದೊಡ್ಡ ಶಕ್ತಿ ತಂದು ಕೊಟ್ಟಿದೆ. ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ಎರಡೂ ಪಕ್ಷಗಳ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು. ಈ ಬಾರಿ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಫಲಿತಾಂಶ ಬರಲಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT