ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ: ದಿಂಗಾಲೇಶ್ವರ ಶ್ರೀ 

Published 8 ಏಪ್ರಿಲ್ 2024, 8:38 IST
Last Updated 8 ಏಪ್ರಿಲ್ 2024, 8:38 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಿರ್ಧರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಅವರು, ‘ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್‌ ಫಿಕ್ಸಿಂಗ್‌  ಮಾಡಿಕೊಂಡಿವೆ ಎಂದು ಜನರು  ಮಾತನಾಡುತ್ತಿದ್ದಾರೆ. ಇದು ಮತದಾರರಿಗೆ ಮಾಡುವ ಮೋಸ’ ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಲ್ಹಾದ ಜೋಶಿ ವಿರುದ್ಧ ಅವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನನ್ನ ಸ್ಪರ್ಧೆಯು ಕಾಂಗ್ರೆಸ್‌ ಮತ್ತು ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಮತ್ತು ಸ್ವಾರ್ಥಿ ರಾಜಕಾರಣಿಗಳ ದುರಾಡಳಿತದ ವಿರುದ್ಧ ಸ್ವಾಭಿಮಾನಿಗಳು ಸಾರಿದ ಧರ್ಮ ಯುದ್ದ’ ಎಂದು  ವಿಶ್ಲೇಷಿಸಿದರು.

‘ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು, ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ಧರ್ಮದಲ್ಲಿ ರಾಜಕೀಯ ಇರಬಾರದು.  ರಾಜಕೀಯದಲ್ಲಿ  ಧರ್ಮ ಇರಬೇಕು ಎಂದು ಜನರ ಬಯಸಿದ್ದಾರೆ.  ಈ ವಿಚಾರವನ್ನು ಚುನಾವಣೆಯ ನಂತರವೂ ಮುಂದುವರಿಸುತ್ತೇನೆ’ ಎಂದರು.

‘ನೊಂದ ಸಮಾಜಗಳು , ನಾಯಕರು ತಮ್ಮ ನೋವು ತೋಡಿಕೊಂಡ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇನೆ.  ಕುರುಬ, ರೆಡ್ಡಿ, ಜಂಗಮ, ಅಂಬಿಗ  ಹೀಗೆ ಬಹಳಷ್ಟು ಸಮಾಜಗಳನ್ನು  ಅಲಕ್ಷ್ಯ ಮಾಡಿ ಅತ್ಯಂತ  ಕಡಿಮೆ ಜನಸಂಖ್ಯೆ ಇರುವವರಿಗೆ  ಮೂರು ಸ್ಥಾನಗಳನ್ನು  ಕೊಟ್ಟಿರುವುದು ಬಹುಸಂಖ್ಯಾತರ ನೋವಿಗೆ ಕಾರಣವಾಗಿದೆ. ಎಲ್ಲಿದೆ ಸಾಮಾಜಿಕ ನ್ಯಾಯ’ ಎಂದೂ ಅವರು ಪ್ರಶ್ನಿಸಿದರು.

‘ಒಂಬತ್ತು ಜನ ವೀರಶೈವ ಲಿಂಗಾಯತ ಸಂಸದರು ಆಯ್ಕೆ ಆದಾಗ  ಒಬ್ಬರಿಗೂ  ಕೇಂದ್ರ ಕ್ಯಾಬಿನೆಟ್‌ ದರ್ಜೆಯಲ್ಲಿ ಅವಕಾಶ  ಮಾಡಿಕೊಟ್ಟಿಲ್ಲ. ಹಿಂದಿನಿಂದಲೂ ವೀರಶೈವ ಲಿಂಗಾಯತರಿಗೆ ರಾಜ್ಯ ಸಚಿವ  ಖಾತೆ ನೀಡಲಾಗಿದೆ’ ಎಂದು ದೂರಿದರು.

‘ಬೆಂಗಳೂರು ದಕ್ಷಿಣ ಕ್ಲೇತ್ರದಲ್ಲಿ ವಿ. ಸೋಮಣ್ಣ ಅವರಿಗೆ ಟಿಕೆಟ್‌ ಕೊಡುವುದನ್ನು ಬಿಟ್ಟು ತುಮಕೂರಿನಲ್ಲಿ ಕೊಡಲಾಗಿದೆ. ವೀರಶೈವ ಲಿಂಗಾಯತರು ಜಗಳವಾಡುವಂತೆ  ಮಾಡಿರುವುದು ಇಡೀ ಸಮಾಜಕ್ಕೆ ನೋವು ತಂದಿದೆ. ವೀರಶೈವ ಲಿಂಗಾಯತರ ಪ್ರಾಬಲ್ಯ ಕ್ಷೇತ್ರದಲ್ಲಿ ಬ್ರಾಹ್ಮಣರಿಗೆ ಟಿಕೆಟ್‌ ಕೊಟ್ಟಂತೆ, ಬ್ರಾಹ್ಮಣರ ಪ್ರಾಬಲ್ಯದ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯವರಿಗೆ ಟಿಕೆಟ್‌ ಕೊಡದಿರಲು ಕಾರಣವೇನು’ ಎಂದೂ ಅವರು ಪ್ರಶ್ನಿಸಿದರು. 

‘ಲಿಂಗಾಯತ ನಾಯಕರನ್ನು ಮತ್ತು ಸಮಾಜವನ್ನು ತುಳಿದು ಆಳುವ ವಿಷಯದಲ್ಲಿ ಧಾರವಾಡ ಸಂಸದ ಪ್ರಲ್ಹಾದ ಜೋಶಿಯವರ ಪಾತ್ರ ಎದ್ದು ಕಾಣುತ್ತದೆ. ಹಾವೇರಿ ಕ್ಷೇತ್ರದಲ್ಲಿ ಕೆ.ಎಸ್‌.  ಈಶ್ವರಪ್ಪನವರ ಮಗನಿಗೆ ಟಿಕೆಟ್‌ ತಪ್ಪಿಸಿದ್ದು ಇದೇ ಜೋಶಿ’ ಎಂದೂ ದೂರಿದರು. 

‘20 ವರ್ಷಗಳ  ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಜೀರೊ ಆಗಿದೆ. ಸಮಾಜಗಳನ್ನು, ನಾಯಕರನ್ನು ತುಳಿಯುವ  ಕಾರ್ಯದಲ್ಲಿ ಜೋಶಿಯವರು ಹೀರೊ ಆಗಿದ್ದಾರೆ’ ಎಂದರು.

‘ಪಕ್ಷಗಳಿಗೆ ಮತದಾರರು ಅನಿವಾರ್ಯವೇ ಹೊರತು ಮತದಾರರಿಗೆ ಪಕ್ಷಗಳು ಅನಿವಾರ್ಯವಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಬಸವಾದಿ ಶಿವಶರಣರನ್ನು ಮತ ಗಳಿಕೆಗೆ ಬಳಕೆ ಮಾಡಿಕೊಂಡು ಅವರ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿವೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT