ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LSPolls: ಮಂಡ್ಯಕ್ಕೆ ಎಚ್‌ಡಿಕೆ, ಹಾಸನಕ್ಕೆ ಪ್ರಜ್ವಲ್, ಕೋಲಾರಕ್ಕೆ ಎಂ.ಮಲ್ಲೇಶ್

Published 26 ಮಾರ್ಚ್ 2024, 21:53 IST
Last Updated 26 ಮಾರ್ಚ್ 2024, 21:53 IST
ಅಕ್ಷರ ಗಾತ್ರ

ಬೆಂಗಳೂರು/ಹಾಸನ: ಮಂಡ್ಯ ಲೋಕಸಭಾ ಕ್ಷೇತ್ರ ದಿಂದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ. ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್‌ ರೇವಣ್ಣ ಮತ್ತೊಮ್ಮೆ ಸ್ಪರ್ಧಿಸಲಿದ್ದು, ಕೋಲಾರ ಕ್ಷೇತ್ರದಲ್ಲಿ ಎಂ. ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸಲಾಗುತ್ತಿದೆ.

ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲು ಪಕ್ಷದ ‘ಕೋರ್‌ ಕಮಿಟಿ’ ಅಧ್ಯಕ್ಷರು ಮತ್ತು ಸದಸ್ಯರ ಜತೆ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಸಭೆ ನಡೆಸು ತ್ತಿದ್ದಾಗಲೇ ಹಾಸನ ಪ್ರವಾಸದಲ್ಲಿದ್ದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಮೂರೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಬಹಿರಂಗ ಸಭೆಯಲ್ಲಿ ಪ್ರಕಟಿಸಿದರು.

‘ನನ್ನ ಕೊನೆಗಾಲದಲ್ಲಿ ಬಂದು ಪ್ರಚಾರ ಮಾಡುತ್ತಿದ್ದೇನೆ. ಅಪಪ್ರಚಾರಕ್ಕೆ ಮಣಿಯದೇ ಪ್ರಜ್ವಲ್ ಅವರನ್ನು ಗೆಲ್ಲಿಸಿ ಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ’ ಎಂದರು.

ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್‌. ಪುಟ್ಟರಾಜು ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ನಾಯಕರು ಯೋಚಿಸಿದ್ದರು. ಆದರೆ, ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ವರಿಷ್ಠರು ಒತ್ತಡ ಹೇರಿದ್ದರು. ತಾವು ಪ್ರತಿನಿಧಿಸುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಮುಖಂಡರ ಜತೆ ಸರಣಿ ಸಭೆಗಳನ್ನು ನಡೆಸಿದ್ದ ಕುಮಾರಸ್ವಾಮಿ, ಅವರ ಅಭಿಪ್ರಾಯ ಆಲಿಸಿದ್ದರು. ಬಳಿಕ ಸ್ಪರ್ಧೆಯ ನಿರ್ಧಾರವನ್ನು ಅಂತಿಮಗೊಳಿಸಿದರು.

ಹಾಸನದಲ್ಲಿ ಪ್ರಜ್ವಲ್‌ ಬದಲಿಗೆ ಬೇರೊಬ್ಬರನ್ನು ಕಣಕ್ಕಿಳಿಸಬೇಕೆಂಬ ಬೇಡಿಕೆ ಬಿಜೆಪಿಯ ಕೆಲವು ನಾಯಕರಿಂದ ಬಂದಿತ್ತು. ಆದರೆ, ಅದಕ್ಕೆ ಜೆಡಿಎಸ್‌ ಮಣಿದಿಲ್ಲ. ಕೋಲಾರದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್‌, ಮಾಜಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಮತ್ತು ಮಲ್ಲೇಶ್‌ ಬಾಬು ಹೆಸರುಗಳು ಪರಿಶೀಲನೆಯಲ್ಲಿದ್ದವು. ಮಲ್ಲೇಶ್ ಬಾಬು ಅವರನ್ನೇ ಅಭ್ಯರ್ಥಿಯುನ್ನಾಗಿ ಕಣಕ್ಕಿಳಿಸುವ ತೀರ್ಮಾನವನ್ನು ಜೆಡಿಎಸ್‌ ಕೈಗೊಂಡಿದೆ.

ಮಲ್ಲೇಶ್‌ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2018 ಮತ್ತು 2023ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ಅವರ ತಾಯಿ ಮಂಗಮ್ಮ ಮುನಿಯಪ್ಪ ಅವರು ಎರಡು ಬಾರಿ ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಒಮ್ಮೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು.

ಪ್ರಚಾರದಲ್ಲಿ ಸಮನ್ವಯಕ್ಕೆ ನಿರ್ಧಾರ: ಜೆಡಿಎಸ್‌ ರಾಜ್ಯ ‘ಕೋರ್‌ ಕಮಿಟಿ’ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ–ಜೆಡಿಎಸ್‌ ಸಮನ್ವಯದಲ್ಲಿ ರಾಜ್ಯದಾದ್ಯಂತ ಚುನಾವಣಾ ಪ್ರಚಾರ ನಡೆಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ಪ್ರ ಪ್ರಚಾರ ಸಭೆ ನಡೆದರೂ ಹಾಜರಾಗಬೇಕು. ಜಿಲ್ಲೆ ಮತ್ತು ತಾಲ್ಲೂಕು ಹಂತದ ಎಲ್ಲ ಮುಖಂಡರು, ಕಾರ್ಯಕರ್ತರು ಪ್ರಚಾರದಲ್ಲಿ ಮಿತ್ರಪಕ್ಷದ ಜತೆ ಕೈಜೋಡಿಸಬೇಕು ಎಂಬ ಸೂಚನೆಯನ್ನು ಕುಮಾರಸ್ವಾಮಿ ನೀಡಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT