ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ | ಮನೆಯಿಂದ ಮತ ಚಲಾವಣೆಗೆ ಗರಿಷ್ಠ ನೋಂದಣಿ

ವಾಹನ ವ್ಯವಸ್ಥೆ, ವಿಡಿಯೊ ಚಿತ್ರೀಕರಣ ಜಿಲ್ಲಾಡಳಿತಕ್ಕೆ ಸವಾಲು
Published 3 ಏಪ್ರಿಲ್ 2024, 5:40 IST
Last Updated 3 ಏಪ್ರಿಲ್ 2024, 5:40 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಮತದಾರರು ಮನೆಯಿಂದ ಮತ ಚಲಾಯಿಸುವ ಅವಕಾಶವನ್ನು ಆಯ್ಕೆ ಮಾಡಿಕೊಂಡಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 8,027 ಜನರು ಮನೆಯಿಂದ ಮತದಾನಕ್ಕೆ ಆಸಕ್ತಿ ತೋರಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರಿಗೆ (ಪಿಡ್ಲ್ಯುಡಿ) ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದ ಚುನಾವಣಾ ಆಯೋಗವು, ಈ ಬಾರಿ ವಯೋಮಿತಿಯನ್ನು ಹೆಚ್ಚಿಸಿ 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತ ಚಲಾಯಿಸಲು ಅವಕಾಶ ನೀಡಿದೆ. ಶೇ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವವರೂ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಒಟ್ಟು 10,512 ಮತದಾರರಿಗೆ ಅಗತ್ಯವಿರುವ 12ಡಿ ಅರ್ಜಿ ವಿತರಿಸಲಾಗಿದ್ದು, 6,050 ಮಂದಿ ಮನೆಯಿಂದ ಮತದಾನ ಮಾಡಲು ಬಯಸಿದ್ದಾರೆ. 4,455 ಮಂದಿ ಮತಗಟ್ಟೆಗೆ ಬಂದು ಮತ ಚಲಾಯಿಸುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಂಚೆ ಮತ ಚಲಾಯಿಸಲು ಹೆಸರು ನೋಂದಾಯಿಸಿರುವ 2–3 ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡವೂ ಒಂದಾಗಿದೆ.

ಜಿಲ್ಲೆಯಲ್ಲಿರುವ 10,503 ಅಂಗವಿಕಲ ಮತದಾರರಿಗೆ 12ಡಿ ಅರ್ಜಿ ನಮೂನೆ ವಿತರಣೆಯಾಗಿದ್ದು, ಅವರಲ್ಲಿ 1,977 ಮಂದಿ ಮನೆಯಿಂದ ಹಕ್ಕು ಚಲಾಯಿಸಲು ಮುಂದಾಗಿದ್ದರೆ, 8,517 ಮಂದಿ ಮತಗಟ್ಟೆಗೆ ಬಂದು ಮತಚಲಾಯಿಸಲು ಆಸಕ್ತಿ ತೋರಿದ್ದಾರೆ.

‘ಮನೆಯಿಂದ ಮತದಾನ ಮಾಡಲು ಅರ್ಹತೆ ಹೊಂದಿರುವ ಮತದಾರರ ಮನೆಗೆ ನಮ್ಮ ಸಿಬ್ಬಂದಿ ಭೇಟಿ ನೀಡಿ 12ಡಿ ಅರ್ಜಿ ನೀಡುತ್ತಾರೆ. ಒಂದೊಮ್ಮೆ ಅವರು ಮನೆಯಲ್ಲಿ ಇಲ್ಲದಿದ್ದರೆ ಎರಡನೇ ಬಾರಿ ಹೋಗಬೇಕಾಗುತ್ತದೆ. ಎರಡು ಬಾರಿ ಲಭ್ಯರಾಗದಿದ್ದಲ್ಲಿ ಅವರು ಈ ಅವಕಾಶದಿಂದ ವಂಚಿತರಾಗುತ್ತಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಇರುವವರಲ್ಲಿ ಕೆಲವರು ಮೃತಪಟ್ಟಿದ್ದರೂ, ಅವರ ಹೆಸರು ಕಡಿತ ಆಗಿರುವುದಿಲ್ಲ. ಇನ್ನು ಕೆಲವರು ಬೇರೆ ಕಡೆ ಹೋಗಿರುತ್ತಾರೆ. ಈಗಾಗಲೇ ಪಟ್ಟಿಯಲ್ಲಿರುವ ಎಲ್ಲ ಮತದಾರರ ಮನೆ ತಲುಪಲಾಗಿದೆ’ ಎನ್ನುತ್ತಾರೆ ಅಧಿಕಾರಿಯೊಬ್ಬರು.

‘ಚುನಾವಣಾ ಆಯೋಗ ನಿಗದಿಪಡಿಸಿದ ದಿನಾಂಕದಂದು ಈಗಾಗಲೇ ಜಿಲ್ಲಾಡಳಿತ ರಚಿಸಿರುವ ತಂಡವು ಪ್ರತಿ ಮತದಾರನ ಮನೆಗೆ ಭೇಟಿ ಅವರಿಗೆ ಹಕ್ಕು ಚಲಾಯಿಸಲು ಅವಕಾಶ ನೀಡುತ್ತದೆ. ಆ ಮತಪತ್ರವನ್ನು ಸುರಕ್ಷಿತವಾಗಿ ತಂದು ಸ್ಟ್ರಾಂಗ್‌ ರೂಮ್‌ನಲ್ಲಿ ಇಡಲಾಗುತ್ತದೆ. ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಅಧಿಕಾರಿ, ಮೈಕ್ರೊ ಅಬ್ಸರ್ವರ್, ವಿಡಿಯೊಗ್ರಾಫರ್ ತಂಡದಲ್ಲಿ ಇರುತ್ತಾರೆ. ಸುಳ್ಯ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ವಾಹನ ಹೋಗುವ ಸ್ಥಿತಿ ಕೂಡ ಇಲ್ಲ. ಅರ್ಧ ದಿನ ನಡೆದು, ನಿಗದಿತ ಸ್ಥಳ ತಲುಪಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT