ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್‌ ಚಂದ್ರು ಸಂದರ್ಶನ: ಮಂಡ್ಯ– ಇಂಡಿಯಾ ನಡುವೆ ಕೊಂಡಿಯಾಗುವೆ

Published 17 ಏಪ್ರಿಲ್ 2024, 3:15 IST
Last Updated 17 ಏಪ್ರಿಲ್ 2024, 3:15 IST
ಅಕ್ಷರ ಗಾತ್ರ

ಉದ್ಯಮ ಕ್ಷೇತ್ರದಿಂದ ರಾಜಕಾರಣಕ್ಕೆ ಪದಾರ್ಪಣೆ ಮಾಡಿರುವ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಹುರಿಯಾಳು. ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿರುವ ಕಾರಣಕ್ಕೆ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. ಕ್ಷೇತ್ರದಾದ್ಯಂತ ಸುತ್ತಾಡುತ್ತಿರುವ ಚಂದ್ರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಜೆಡಿಎಸ್‌ ಅಭ್ಯರ್ಥಿ 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ, ನೀವು ಹೊಸಬರಲ್ಲವೇ?

ನಮ್ಮ ಕುಟುಂಬದಲ್ಲಿ ಶಾಸಕರು, ಸಂಸದರಿದ್ದು ರಾಜಕಾರಣವನ್ನು ಹತ್ತಿರದಿಂದ ಕಂಡಿದ್ದೇನೆ. ಉದ್ಯಮಿಯಾಗಿ ರಾಜಕಾರಣಿಗಳ ಜೊತೆ ಬಾಂಧವ್ಯ ಹೊಂದಿದ್ದೇನೆ. ಹೀಗಾಗಿ ನಾನು ರಾಜಕಾರಣಕ್ಕೆ ಹೊಸಬನೇನೂ ಅಲ್ಲ. ಜೊತೆಗೆ ಹುಟ್ಟಿದಾಗಿನಿಂದಲೂ ಮಂಡ್ಯ ರಾಜಕಾರಣ ನೋಡಿಕೊಂಡೇ ಬೆಳೆದಿದ್ದೇನೆ. ಜಿಲ್ಲೆಯ ಸಮಗ್ರ ಚಿತ್ರಣವಿದೆ.

* ಚುನಾವಣೆಯಲ್ಲಿ ‘ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ’ ಎಂಬ ಸ್ಥಿತಿ ಇದೆ, ಅಭ್ಯರ್ಥಿಯಾಗಿ ನಿಮ್ಮ ಪಾತ್ರವೇನು?

ಚಲುವರಾಯಸ್ವಾಮಿ ನನ್ನ ಹಿರಿಯಣ್ಣ. ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಒಗ್ಗಟ್ಟಿನ ಬಲದ ಮೇಲೆ ನನಗೆ ನಂಬಿಕೆಯಿದೆ. ಈ ಚುನಾವಣೆ ನನ್ನದು ಎನ್ನುವುದಕ್ಕಿಂತ ನನ್ನ ನಾಯಕರದ್ದು ಎಂದು ತಿಳಿದಿದ್ದೇನೆ. ಎದುರಾಳಿ ಎಷ್ಟೇ ಶಕ್ತಿಯುತವಾಗಿದ್ದರೂ ಅವರನ್ನು ಒಗ್ಗಟ್ಟಿನಿಂದ ಎದುರಿಸುತ್ತಿದ್ದೇವೆ.

* ‘ಒಕ್ಕಲಿಗರ ಪ್ರಶ್ನಾತೀತ ನಾಯಕ ಕುಮಾರಸ್ವಾಮಿ’ ಎಂಬ ಅಸ್ತ್ರ ಬಳಕೆಯಾಗುತ್ತಿದೆಯಲ್ಲಾ?

ನಾನೂ ಒಕ್ಕಲಿಗನೇ. ಆದಿಚುಂಚನಗಿರಿ ಕಾಲೇಜಿನಲ್ಲಿ ಓದಿದ್ದೇನೆ, ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದೇ ಸ್ಪರ್ಧಿಸಿದ್ದೇನೆ. ಒಕ್ಕಲಿಗರು ಕಾಂಗ್ರೆಸ್‌ ಪರ ನಿಲ್ಲುತ್ತಾರೆಂಬ ವಿಶ್ವಾಸವಿದೆ.

* ‘ಮಂಡ್ಯ ಜೆಡಿಎಸ್‌ ಭದ್ರಕೋಟೆ’ ಎನ್ನುತ್ತಾರೆ. ಅವರಿಗೆ ಈಗ ಬಿಜೆಪಿ ಬೆಂಬಲವೂ ಇದೆ. ನಿಮಗೆ ಯಾರಿದ್ದಾರೆ?

ಕ್ಷೇತ್ರ ಈಗ ಜೆಡಿಎಸ್‌ ಭದ್ರಕೋಟೆಯಾಗಿ ಉಳಿದಿಲ್ಲ. ಕಾಂಗ್ರೆಸ್‌ ಕೋಟೆಯಾಗಿ ಬದಲಾವಣೆಯಾಗಿದೆ. ನನ್ನ ಪರ ಜನರಿದ್ದಾರೆ,  7 ಶಾಸಕರು, ಮೂವರು ಎಂಎಲ್‌ಸಿಗಳಿದ್ದಾರೆ, ರಾಜ್ಯ ಸರ್ಕಾರದ ಜನಪರ ಆಡಳಿತ, ಗ್ಯಾರಂಟಿ ಯೋಜನೆಗಳ ಶಕ್ತಿ ಇದೆ. ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆಯಿಲ್ಲ.

* ನರೇಂದ್ರ ಮೋದಿ ಜೊತೆಗೆ ಎಚ್‌.ಡಿ.ದೇವೇಗೌಡರ ಅಲೆಯ ಮಾತೂ ಇದೆಯಲ್ಲಾ?

ಮಂಡ್ಯ ಜನ ವಿಚಾರವಂತರು, ಸಾಮಾನ್ಯ ವ್ಯಕ್ತಿಗೂ ರಾಜಕಾರಣ ಗೊತ್ತಿದೆ. ಇಲ್ಲಿ ಯಾವುದೇ ಅಲೆಯೂ ನಡೆಯುವುದಿಲ್ಲ. ಪ್ರತಿ ಹಳ್ಳಿಯಲ್ಲೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರೀತಿ ಇದೆ. ಕಾಂಗ್ರೆಸ್‌ ಗ್ಯಾರಂಟಿಗಳ ಅಲೆ ಇದೆ.

* ಜನರು ನಿಮಗೇ ಏಕೆ ವೋಟು ಕೊಡಬೇಕು?

ನಾನು ವಲಸೆ ಬಂದವನಲ್ಲ. ನಾಗಮಂಗಲದ ಕನ್ನಾಘಟ್ಟದಲ್ಲಿ ಹುಟ್ಟಿ ಬೆಳೆದು, ಬದುಕು ಅರಸಿ ಬೆಂಗಳೂರಿಗೆ ತೆರಳಿ, ಕಂಪನಿ ಕಟ್ಟಿ 4 ಸಾವಿರ ಮಂದಿಗೆ ಕೆಲಸ ಕೊಟ್ಟಿದ್ದೇನೆ. ಈಗ ಮಂಡ್ಯದಲ್ಲಿ ಮನೆ ಖರೀದಿಸಿ ಇಲ್ಲಿಯೇ ನೆಲೆಸಿದ್ದೇನೆ. ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಮಂಡ್ಯ– ಇಂಡಿಯಾ ನಡುವೆ ಕೊಂಡಿಯಾಗಿರುತ್ತೇನೆ. ಸ್ಥಳೀಯನಾಗಿರುವ ಕಾರಣಕ್ಕೆ ನನಗೆ ವೋಟು ಕೊಡಬೇಕು.

* ನಿಮ್ಮ ಹೆಸರಿನಲ್ಲಿರುವ ‘ಸ್ಟಾರ್‌’ ರಾಜಕಾರಣಕ್ಕೂ ಜೊತೆಯಾಗುವುದೇ?

ನಾನು ಕಟ್ಟಿದ ಕಂಪನಿಯ ಹೆಸರು ಸ್ಟಾರ್‌ ಇನ್ಫೊಟೆಕ್‌, ಈ ಕಾರಣದಿಂದಾಗಿ ಸ್ಟಾರ್‌ ಹೆಸರು ಬಂದಿದೆ. ನನಗೆ ಅದೃಷ್ಟಕ್ಕಿಂತ ಪರಿಶ್ರಮದ ಮೇಲೆ ಹೆಚ್ಚು ನಂಬಿಕೆ ಇದೆ. ಜನಸೇವೆಗಾಗಿ ಸಿದ್ಧನಾಗಿ ಬಂದಿದ್ದೇನೆ, ಅರ್ಪಿಸಿಕೊಂಡು ಜನರ ಕೆಲಸ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT