ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ: ಅಮಿತ್‌ ಶಾ ಆರೋಪ

ವರುಣದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಶಕ್ತಿ ಪ್ರದರ್ಶನ | ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ
Published 2 ಮೇ 2023, 13:22 IST
Last Updated 2 ಮೇ 2023, 13:22 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭಾ ಚುನಾವಣೆಯ ಜಿದ್ದಾಜಿದ್ದಿನ ಕಣವಾದ ವರುಣ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಂಗಳವಾರ ಅಬ್ಬರದ ಪ್ರಚಾರ ನಡೆಸಿ, ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶಿಸಿದರು‌. ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಹುರುಪು ತುಂಬಿದರು.

ನಂಜನಗೂಡು ತಾಲ್ಲೂಕಿನ ಹೊಸಕೋಟೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಆಗಮಿಸಿದ ಅವರು, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ನಾಡದೇವತೆ ಚಾಮುಂಡೇಶ್ವರಿ, ನಂಜನಗೂಡು ನಂಜುಂಡೇಶ್ವರ ಹಾಗೂ ಸುತ್ತೂರು ಮಠಕ್ಕೆ ನಮಸ್ಕರಿಸುತ್ತೇನೆ’ ಎನ್ನುವ ಮೂಲಕ ಎಲ್ಲರ ಸೆಳೆದರು.

‌ಮೋದಿ ಕೈಯಲ್ಲಿ ಮಾತ್ರ ರಾಜ್ಯ ಸುರಕ್ಷಿತ
‘ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಮಾತ್ರ ಕರ್ನಾಟಕ ಸುರಕ್ಷಿತವಾಗಿರುತ್ತದೆ. ಬಿಜೆಪಿ ಗೆಲ್ಲಿಸಿದರೆ ರಾಜ್ಯ ಸಮೃದ್ಧವಾಗಲಿದೆ. ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರನ್ನು ಅಧಿಕಾರಕ್ಕೆ ತಂದರೆ ಪಿಎಫ್‌ಐ ಸಂಘಟನೆ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲಿದ್ದಾರೆ. ಅಂಥವರು ನಿಮಗೆ ಬೇಕಾ’ ಎಂದು ಅಮಿತ್‌ ಶಾ ಪ್ರಶ್ನಿಸಿದರು.

‘ಕರ್ನಾಟಕವು ಕಾಂಗ್ರೆಸ್‌ನ ಎಟಿಎಂ ಮಾಡಿಕೊಂಡಿತ್ತು. ಭ್ರಷ್ಟಚಾರವನ್ನು ಬಿಟ್ಟು ಸಿದ್ದರಾಮಯ್ಯ ಸರ್ಕಾರ ಬೇರೇನೂ ಮಾಡಿಲ್ಲ. ದೇಶದಲ್ಲೇ ಅತಿ ಭ್ರಷ್ಟ ಸರ್ಕಾರ ನಡೆಸಿದ ಅವರು, ಇದೀಗ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರೆನ್ನುವ ಮೂಲಕ ಸಮುದಾಯವನ್ನು ಅವಮಾನಿಸುತ್ತಿದ್ದಾರೆ’ ಎಂದು ಹರಿಹಾಯ್ದರು.

ಅರೇ, ಸಿದ್ದರಾಮಯ್ಯ ಅವರೇ, ಯಡಿಯೂರಪ್ಪ ಕೃಷಿ ಬಜೆಟ್ ಮಂಡಿಸಿದರು. ಬಸವರಾಜ ಬೊಮ್ಮಾಯಿ ಅವರು ಕಿಸಾನ್ ಸಮೃದ್ಧಿ ಯೋಜನೆಯಡಿ 54 ಲಕ್ಷ ರೈತರ ಮಾಹಿತಿ ನೀಡಿದರು. ₹ 15 ಸಾವಿರ ಕೋಟಿ ಹಣವನ್ನು ವಾರ್ಷಿಕ ₹ 10 ಸಾವಿರ ಅನುದಾನದಂತೆ ರೈತರ ಬ್ಯಾಂಕ್‌ ಖಾತೆಗಳಿಗೆ ಹಾಕಿದೆ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

‘ಸಿದ್ದರಾಮಯ್ಯ ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ವಿಳಂಬ ಮಾಡಿದರು. ಮೈಶುಗರ್ ಕಾರ್ಖಾನೆ ಮುಚ್ಚಲು ನೋಡಿದರು. ಕಾಂಗ್ರೆಸ್‌ ನೀಡಿದ್ದ ಶೇ 4 ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡಿ, ಅದನ್ನು ಲಿಂಗಾಯತರಿಗೆ ನೀಡಿದ್ದೇವೆ. ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರೆ ಮೀಸಲಾತಿ ಕಿತ್ತುಕೊಳ್ಳಲಿದ್ದಾರೆ. ಪರಿಶಿಷ್ಟರಿಗೆ ನೀಡಿದ್ದ ಮೀಸಲಾತಿಯನ್ನು ತೆಗೆಯಲಿದ್ದಾರೆ. ಅವರಿಗೆ ಸಮುದಾಯದ ತುಷ್ಟೀಕರಣ ಹೊರತು ಬೇರೇನೂ ಗೊತ್ತಿಲ್ಲ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತಿದ್ದಾರೆ. ಪಾಕಿಸ್ತಾನದ ಉಗ್ರರ ನೆಲೆಗಳಲ್ಲಿ ಸರ್ಜಿಕಲ್‌ ಹಾಗೂ ಏರ್‌ಸ್ಟ್ರೈಕ್ ನಡೆಸಿದ್ದಾರೆ. ಆದರೆ, ಕಾಂಗ್ರೆಸ್‌ ದೇಶವನ್ನು ಸುರಕ್ಷಿತವಾಗಿಡುವುದೇ? 2024ರ ಲೋಕಸಭಾ ಚುನಾವಣೆಯಲ್ಲೂ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು’ ಎಂದು ಕೋರಿದರು.

‘ಭ್ರಷ್ಟರಾಗದೇ ಅಭಿವೃದ್ಧಿ ಮಾಡಿದ್ದರೆ ಸಿದ್ದರಾಮುಯ್ಯ ಕ್ಷೇತ್ರ ಹುಡುಕಾಟವೇಕೆ ಮಾಡಬೇಕಿತ್ತು. ಎಲ್ಲಿಯೂ ಅಭಿವೃದ್ಧಿ ಮಾಡದ್ದರಿಂದ ಜನರೇ ಅವರನ್ನು ಓಡಿಸುತ್ತಿದ್ದಾರೆ. ವರುಣದಿಂದ ಚಾಮುಂಡೇಶ್ವರಿ, ಬಾದಾಮಿಗೆ ಹೋಗಿ ಮತ್ತೆ ವರುಣಕ್ಕೆ ಓಡಿ ಬಂದಿದ್ದಾರೆ. ಮತದಾರರೇ ನಿವೃತ್ತರಾಗುವ ನಾಯಕ ಬೇಕಾ? ನಿರಂತರ ಕೆಲಸ ಮಾಡುವ ಸೋಮಣ್ಣ ಬೇಕಾ’ ಎಂದು ಪ್ರಶ್ನಿಸಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಸಂಸದ ಶ್ರೀನಿವಾಸ ಪ್ರಸಾದ್ ಅವರ ಆಶೀರ್ವಾದವು ವರುಣ ಕ್ಷೇತ್ರದ ಮೇಲಿದೆ. 25 ಸಾವಿರ ಮತದ ಅಂತರದಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಬೇಕು’ ಎಂದು ಕೋರಿದರು.

ಬಿಜೆಪಿ ಅಭ್ಯರ್ಥಿ ಶಾಸಕ ವಿ.ಸೋಮಣ್ಣ ಮಾತನಾಡಿ, ‘15 ವರ್ಷದಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. 7 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲೂ ಮೂಲಸೌಕರ್ಯದ ತೊಂದರೆಯಿದೆ. ಕ್ಷೇತ್ರವು ಮೂರು ತಾಲ್ಲೂಕುಗಳಲ್ಲಿ ಹಂಚಿಹೋಗಿದೆ. ನನಗೆ ಒಂದು ಬಾರಿ ಮಾತ್ರ ಅವಕಾಶ ಕೊಡಿ. ಗೋವಿಂದರಾಜ ನಗರದಂತೆ ಮಾದರಿ ಕ್ಷೇತ್ರ ಮಾಡುವೆ’ ಎಂದರು.

ದೊಡ್ಡವ್ಯಕ್ತಿ ಮಾಡಲಿದ್ದಾರೆ
‘ಮಹತ್ವಪೂರ್ಣ ಚುನಾವಣೆಯಲ್ಲಿ ವಿ.ಸೋಮಣ್ಣ ಅವರನ್ನು ಶಾಸಕರಾಗಿ ಚುನಾಯಿಸಿದರೆ, ಅವರನ್ನು ಬಿಜೆಪಿಯು ದೊಡ್ಡ ವ್ಯಕ್ತಿಯಾಗಿ ನಿಮ್ಮ ಮುಂದೆ ಬಂದು ನಿಲ್ಲಿಸಲಿದೆ. ಸೋಮಣ್ಣ ಹಾಗೂ ತಿ.ನರಸೀಪುರ ಅಭ್ಯರ್ಥಿ ಡಾ.ರೇವಣ್ಣ ಅವರಿಗೆ ನೀಡುವ ಪ್ರತಿಯೊಂದು ಮತಗಳು ರಾಜ್ಯವನ್ನು ಸುರಕ್ಷಿತವಾಗಿಡಲಿವೆ’ ಎಂದರು.

‘ಪ್ರಚಾರಕ್ಕೆ ಕ್ಷೇತ್ರಕ್ಕೆ ಬಂದಾಗ ಗಲಾಟೆ, ಗುಂಪುಗಾರಿಕೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವವೇ ? ಇದು ನ್ಯಾಯವೇ? ನಾನೂ ಸಿದ್ದರಾಮಯ್ಯ ಅವರ ಭಾಷೆಯಲ್ಲಿಯೇ ಮಾತನಾಡಬಹುದು. ಅದರ ಅಗತ್ಯ ನನಗಿಲ್ಲ’ ಎಂದು ತಿರುಗೇಟು ನೀಡಿದರು.

ನಟ ಶಶಿಕುಮಾರ್ ಮಾತನಾಡಿ, ‘ಪರಿಶಿಷ್ಟ ಸಮುದಾಯಗಳಿಗೆ ಉತ್ತಮ ಯೋಜನೆಗಳನ್ನು ಬಿಜೆಪಿ ಸರ್ಕಾರ ತಂದಿದೆ. ಮೀಸಲಾತಿ ಹೆಚ್ಚಿಸಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಬಿಜೆಪಿ ಅಲೆಯಿದೆ’ ಎಂದರು.

ಸಂಸದ ಪ್ರತಾಪ ಸಿಂಹ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಶಾಸಕ ಹರ್ಷವರ್ಧನ್, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ತಿ.ನರಸೀಪುರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಡಾ.ರೇವಣ್ಣ, ಮುಖಂಡರಾದ ಪ್ರತಾಪ್ ದೇವನೂರು, ಅಪ್ಪಣ್ಣ, ಎಲ್.ರೇವಣಸಿದ್ಧಯ್ಯ, ಕಾಪು ಸಿದ್ದಲಿಂಗಸ್ವಾಮಿ, ಗಿರೀಶ್ ಉಪ್ಪಾರ್, ಡಿ.ಸದಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT