ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂದೂಕು ಜಮಾ: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಪರಿಶೀಲನೆ ನಡೆಸಿ ವಿನಾಯಿತಿ ನೀಡಲು ಜಿಲ್ಲಾಮಟ್ಟದ ಸಮಿತಿ ರಚನೆ
Published : 10 ಏಪ್ರಿಲ್ 2023, 15:51 IST
ಫಾಲೋ ಮಾಡಿ
Comments

ಕಾರವಾರ: ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಶಸ್ತ್ರಾಸ್ತಗಳನ್ನು ಪೊಲೀಸ್ ಠಾಣೆಗೆ ಜಮಾ ಮಾಡುವುದು ನಿಯಮ. ಆದರೆ ಬೆಳೆ ಕೊಯ್ಲಿನ ಸಮಯದಲ್ಲೇ ಎದುರಾಗುವ ಚುನಾವಣೆಯಿಂದ ಬೆಳೆ ರಕ್ಷಣೆ ಕಷ್ಟವಾಗುತ್ತಿದೆ ಎಂಬುದು ರೈತರ ಅಸಮಾಧಾನ. ಠಾಣೆಗೆ ಬೆಳೆ ರಕ್ಷಣೆ ಬಂದೂಕು ಜಮಾ ಮಾಡಲು ವಿನಾಯಿತಿ ಕೋರಿ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಶಿರಸಿಯ ಕೃಷಿ, ಕೃಷಿಕ ಹಾಗೂ ಕೃಷಿಕ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್, ಹೈಕೋರ್ಟ್‍ನ ಧಾರವಾಡ ವಿಭಾಗೀಯ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

‘ವರ್ಷಕ್ಕೆ ಸರಾಸರಿ ಒಂದು ಅಥವಾ ಎರಡು ಬಾರಿ ಬೇರೆ ಬೇರೆ ಚುನಾವಣೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲೆಲ್ಲ ಬೆಳೆ ರಕ್ಷಣೆಯ ಉದ್ದೇಶಕ್ಕೆ ಪಡೆದ ಬಂದೂಕುಗಳನ್ನು ಪೊಲೀಸ್ ಠಾಣೆಗೆ ಜಮಾ ಮಾಡಬೇಕಾಗುತ್ತದೆ. ತಿಂಗಳುಗಟ್ಟಲೆ ಅವುಗಳು ಬಳಕೆಯಾಗದೆ ಹಾಗೆಯೇ ಉಳಿದುಕೊಳ್ಳುತ್ತವೆ. ಇದೇ ಅವಧಿಯಲ್ಲಿ ಬೆಳೆ ಕೊಯ್ಲಿಗೆ ಬರುವುದು ಹೆಚ್ಚು. ಕಾಡುಪ್ರಾಣಿಗಳ ದಾಳಿಯೂ ನಡೆಯುವುದು ಅಧಿಕ. ಬಂದೂಕು ಇಲ್ಲದೆ ಅವುಗಳನ್ನು ಬೆದಿರುವುಸುದೂ ಕಷ್ಟ. ಹೀಗಾಗಿ ರೈತರ ಕಾಳಜಿ ಸಲುವಾಗಿ ಕೋರ್ಟ್ ಮೆಟ್ಟಿಲೇರಿದ್ದೇವೆ’ ಎನ್ನುತ್ತಾರೆ ಕೃಷಿ, ಕೃಷಿಕ ಹಾಗೂ ಕೃಷಿಕ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ.

‘ಕೂಲಂಕಷ ಪರಿಶೀಲನೆಯ ನಂತರವೇ ಜಿಲ್ಲಾಧಿಕಾರಿಗಳಿಂದ ಬೆಳೆ ರಕ್ಷಣೆ ಬಂದೂಕುಗಳನ್ನು ಇಟ್ಟುಕೊಳ್ಳಲು ಪರವಾನಿಗೆ ನೀಡಲಾಗುತ್ತದೆ. ಕೃಷಿ ಉದ್ದೇಶಕ್ಕೆ ನೀಡಿದ ಶಸ್ತ್ರಾಸ್ತವನ್ನು ಅನ್ಯ ಉದ್ದೇಶಕ್ಕೆ ಬಳಸಿದ ನಿದರ್ಶನಗಳು ಕಡಿಮೆ ಇದೆ. ಇದನ್ನು ಪರಿಗಣಿಸಿ ರೈತರಿಗೆ ನೀತಿ ಸಂಹಿತೆ ಕಾಲದಲ್ಲೂ ಬಂದೂಕು ಇಟ್ಟುಕೊಳ್ಳಲು ಅವಕಾಶ ಕೊಡಿ ಎಂದು ಕೇಳಿದ್ದೇವೆ’ ಎಂದೂ ಹೇಳಿದರು.

ಶಸ್ತ್ರಾಸ್ತ ಜಮಾವಣೆಗೆ ಹೆಚ್ಚಿದ ಒತ್ತಡ:

ಚುನಾವಣೆ ನೀತಿಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಬಂದೂಕು ಪರವಾನಿಗೆದಾರರು ಹೊಂದಿರುವ ಬಂದೂಕುಗಳನ್ನು ಠಾಣೆಗೆ ಜಮಾವಣೆ ಮಾಡಿಸಲಾಗುತ್ತಿದೆ. ಆಯಾ ಪರವಾನಿಗೆದಾರರಿಗೆ ನಿತ್ಯ ಪೊಲೀಸ್ ಸಿಬ್ಬಂದಿ ಕರೆ ಮಾಡುತ್ತಿದ್ದಾರೆ.

ಪರಿಶೀಲಿಸಿ ವಿನಾಯಿತಿ: ಡಿಸಿ:

‘ಚುನಾವಣೆ ಹಿನ್ನೆಲೆಯಲ್ಲಿ ನಿಯಮದಂತೆ ಶಸ್ತ್ರಾಸ್ತ್ರಗಳನ್ನು ಠಾಣೆಗೆ ಜಮಾ ಮಾಡಿಸಲಾಗುತ್ತಿದೆ. ಆದರೆ ಬೆಳೆ ರಕ್ಷಣೆ ಉದ್ದೇಶಕ್ಕೆ ಬಂದೂಕು ಪರವಾನಗಿ ಪಡೆದವರಿಗೆ ವಿನಾಯಿತಿ ನೀಡಲು ನಿಯಮದಲ್ಲಿ ಅವಕಾಶವಿದೆ. ಬೆಳೆ ರಕ್ಷಣೆ ಉದ್ದೇಶಕ್ಕೆ ಬಂದೂಕಿನ ತೀರಾ ಅಗತ್ಯವಿದ್ದವರು ಮಾತ್ರ ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಹೀಗೆ ಸಲ್ಲಿಕೆಯಾದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯೂ ಇದ್ದು, ವಿನಾಯಿತಿ ನೀಡಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಂಕಿ–ಅಂಶ

5,672: ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವ ಬಂದೂಕು

698: ಆತ್ಮರಕ್ಷಣೆ ಉದ್ದೇಶಕ್ಕೆ ಇರುವ ಗನ್

3,350: ಠಾಣೆಗೆ ಜಮಾ ಆದ ಬಂದೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT