ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಅಡಿಕೆ–ತೆಂಗು ತೋಟ, ಚಿನ್ನ, ಕುರಿ, ಕೋಳಿ ಪಣಕ್ಕೆ!

Published 9 ಮೇ 2023, 19:38 IST
Last Updated 9 ಮೇ 2023, 19:38 IST
ಅಕ್ಷರ ಗಾತ್ರ

ಬೆಂಗಳೂರು: ಮತದಾನಕ್ಕೆ ಕ್ಷಣಗಣನೆ ಆರಂಭವಾದ ಹೊತ್ತಿನಲ್ಲೇ ಯಾರು ಗೆಲ್ಲುತ್ತಾರೆ ಎಂಬ ವಿಷಯವಾಗಿ ರಾಜ್ಯದಾದ್ಯಂತ ಬೆಟ್ಟಿಂಗ್‌ ಭರಾಟೆಯೂ ಜೋರಾಗಿದೆ. ಕೆಲವರು ಅಡಿಕೆ, ತೆಂಗಿನ ತೋಟವನ್ನೇ ಪಣಕ್ಕಿಟ್ಟರೆ, ಇನ್ನು ಕೆಲವರು ಕುರಿ, ಕೋಳಿಗಳನ್ನು ಜೂಜಿಗಿಟ್ಟಿದ್ದಾರೆ. ಬೆಟ್ಟಿಂಗ್‌ನ ಈ ಅಬ್ಬರದಿಂದ ಗ್ರಾಮಾಂತರ ಭಾಗದಲ್ಲಿ ಚುನಾವಣೆ ಕಣ ರಂಗೇರಿದೆ.

ಹುಬ್ಬಳ್ಳಿ ವರದಿ: ಧಾರವಾಡ ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ಹನುಮಂತಪ್ಪ ತಳವಾರ ಅವರು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಕುರಿ ಬೆಟ್ಟಿಂಗ್ ಕಟ್ಟಿದ್ದಾರೆ.

ಬಸವರಾಜ ಬೆಂಡಿಗೇರಿ ಎಂಬುವವರು ತಮ್ಮ ಮಗನಿಗೆ ‘ವಿನಯ’ ಎಂದು ಹೆಸರಿಟ್ಟಿದ್ದಾರೆ. ಅಭ್ಯರ್ಥಿ ವಿನಯ್ ಸೋತರೆ ಮಗನ ಹೆಸರು ಬದಲಿಸುವ ಷರತ್ತು ಕೂಡ ಹಾಕಿದ್ದಾರೆ.

ಕರಡಿಗುಡ್ಡ ಗ್ರಾಮದಲ್ಲಿ ನಗದು ಬೆಟ್ಟಿಂಗ್ ಕಟ್ಟಲಾಗಿದೆ ಎಂಬ ಮಾಹಿತಿ ಇದೆ. ಆದರೆ ಬಹಿರಂಗವಾಗಿ ಯಾರೂ ಹೇಳುತ್ತಿಲ್ಲ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ– ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿ ಪರ ಬೆಟ್ಟಿಂಗ್‌ ಜೋರಾಗಿ ನಡೆದಿದೆ.

‘ಯಾರು ಗೆಲ್ಲುತ್ತಾರೆ?’ ಎಂಬುದರ ಮೇಲೆ ಕೆಲವರು ಲಕ್ಷ ರೂಪಾಯಿವರೆಗೂ ಬೆಟ್ಟಿಂಗ್‌ ಕಟ್ಟಿದ್ದಾರೆ. ಅಂದಾಜು ₹3 ಕೋಟಿಯಷ್ಟು ಬೆಟ್ಟಿಂಗ್‌ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಇದೇ ಕ್ಷೇತ್ರದಲ್ಲಿ, ‘ಬಿಜೆಪಿ ಟಿಕೆಟ್‌ ಯಾರಿಗೆ ಸಿಗುತ್ತದೆ?’ ಎಂಬುದರ ಮೇಲೆ ಜಗದೀಶ ಮೆಟಗುಡ್ಡ ಹಾಗೂ ಡಾ.ವಿಶ್ವನಾಥ ಪಾಟೀಲ ಅವರ ಬೆಂಬಲಿಗರ ಮಧ್ಯೆ ಬೆಟ್ಟಿಂಗ್‌ ನಡೆದಿತ್ತು. ಹಾರೂಗೊ‍ಪ್ಪ ಗ್ರಾಮದಲ್ಲಿ ಇಬ್ಬರು ರೈತರು ಪರಸ್ಪರ ಒಂದು ಎರಕೆ ಹೊಲ ಜಿದ್ದಿಗೆ ಇಟ್ಟಿದ್ದರು.

ಕಲಬುರಗಿ: ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಬೆಟ್ಟಿಂಗ್‌ಗಾಗಿ ಮನೆಯಲ್ಲಿರುವ ವಸ್ತುಗಳು, ಕುರಿ, ಕೋಳಿ, ಚಿನ್ನ ಸೇರಿದಂತೆ ಇತರೆ ವಸ್ತುಗಳನ್ನು ಪಣಕ್ಕಿಡುತ್ತಿದ್ದಾರೆ. ಕೆಲವರು ₹ 50 ಸಾವಿರದಿಂದ ₹ 1 ಲಕ್ಷದವರೆಗೆ ಹಣವನ್ನು ಪಣಕ್ಕಿಟ್ಟಿದ್ದಾರೆ.

ಯಾದಗಿರಿ ಮತ್ತು ಬೀದರ್ ಜಿಲ್ಲೆಯಲ್ಲಿ ₹10 ಸಾವಿರದಿಂದ ಲಕ್ಷಾಂತರ ರೂಪಾಯಿ, ಒಂದು ತೊಲೆ ಚಿನ್ನಾಭರಣ ಬೆಟ್ಟಿಂಗ್‌ ಕಟ್ಟಲಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕೊಪ್ಪಳ ಕ್ಷೇತ್ರದಲ್ಲಿ ಕೆಲವರು ಜಾನುವಾರುಗಳನ್ನು ಬೆಟ್‌ ಕಟ್ಟಿದರೆ, ಇನ್ನೂ ಕೆಲವರು ಲಕ್ಷಾಂತರ ರೂಪಾಯಿ ಹಣ ಬೆಟ್‌ ಕಟ್ಟಿದ್ದಾರೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರೊಬ್ಬರು ಕಾಂಗ್ರೆಸ್‌ ಗೆಲ್ಲಲಿದೆ ಎಂದು ಎರಡು ಎಕರೆ ಭೂಮಿ ಪಣಕ್ಕೆ ಇಟ್ಟಿದ್ದಾರೆ ಎಂದು ಗೊತ್ತಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಜೆಡಿಎಸ್‌ ಅಭ್ಯರ್ಥಿ ಜಯ ಸಾಧಿಸುತ್ತಾರೆ ಎಂದು ರೈತರೊಬ್ಬರು ಬೆಟ್ಟಿಂಗ್‌ಗೆ ಮೂರು ಎಕರೆ ಜಮೀನು ಪಣಕ್ಕಿಟ್ಟಿದ್ದಾರೆ. ಬೆಟ್ಟಿಂಗ್‌ನಲ್ಲಿ ಸೋತರೆ ಪ್ರತಿಸ್ಪರ್ಧಿ ವ್ಯಕ್ತಿಯು ರೈತನಿಗೆ ಬರೀ ₹3 ಲಕ್ಷ ಕೊಡಬೇಕು.

ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ–ಕಾಂಗ್ರೆಸ್‌ ಅಭ್ಯರ್ಥಿ ನಡುವೆ ಪೈಪೋಟಿಯಿದ್ದು, ಜನರು ₹1 ಲಕ್ಷದಿಂದ ₹40 ಲಕ್ಷದವರೆಗೆ ಬೆಟ್ಟಿಂಗ್‌ ಕಟ್ಟಿದ್ದಾರೆ. ಸಿಂಧನೂರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ವಿಷಯವಾಗಿಯೇ ₹1 ಕೋಟಿ ಮೊತ್ತದ ಬೆಟ್ಟಿಂಗ್‌ ಆಗಿದೆ ಎಂಬುದು ಮೂಲಗಳ ಮಾಹಿತಿ.

ಲಿಂಗಸುಗೂರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯ ವಿಷಯದ ಕುರಿತು ₹1 ಕೋಟಿ ಮೊತ್ತದ ಬೆಟ್ಟಿಂಗ್‌ ಹಲವು ಜನರು ಮಧ್ಯೆ ಆಗಿದೆ ಎಂಬುದು ಮೂಲಗಳ ಮಾಹಿತಿ. ಈ ಬೆಟ್ಟಿಂಗ್‌ನಲ್ಲಿ ಸೋತಿರುವವರನ್ನು ಆಯಾ ಆಭ್ಯರ್ಥಿಗಳು ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡು ಹಣಕಾಸು ನೆರವು ನೀಡಿದ್ದಾರೆ ಎಂದು ಜನರಲ್ಲಿ ಚರ್ಚೆಯಾಗುತ್ತಿದೆ.

ಮೈಸೂರು ವರದಿ: ‘ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಕಾಂಗ್ರೆಸ್‌ ಮುಖಂಡರೊಬ್ಬರು ₹10 ಲಕ್ಷ ಬೆಟ್ಟಿಂಗ್‌ ಕಟ್ಟಲು ತಯಾರಿದ್ದರೂ, ಜೆಡಿಎಸ್‌ನಿಂದ ₹ 5 ಲಕ್ಷಕ್ಕೆ ಮಾತ್ರ ಒಪ್ಪಿಕೊಂಡಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಜೆಡಿಎಸ್‌ ಪರವಾಗಿ ಬೆಟ್ಟಿಂಗ್ ಹೆಚ್ಚಿತ್ತು’ ಎಂಬ ಮಾತು ಕೇಳಿಬಂದಿದೆ.

ಹುಣಸೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಪರವಾಗಿ ಹೆಚ್ಚು ಉತ್ಸಾಹ ಕಂಡುಬರುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಬೆಟ್ಟಿಂಗ್ ಮಾಡುವವರಿಗೆ ಆಹ್ವಾನವನ್ನೂ ನೀಡಲಾಗಿದೆ. ಎಲ್ಲರ ಗಮನ ಸೆಳೆದಿರುವ ವರುಣ, ನಂಜನಗೂಡಿನಲ್ಲಿ ಬೆಟ್ಟಿಂಗ್ ನಿಧಾನಗತಿಯ ಆರಂಭ ಪಡೆದಿದೆ. ‘ಚುನಾವಣೆಯ ಬಳಿಕ ಈ ಭಾಗದಲ್ಲಿ ಬೆಟ್ಟಿಂಗ್‌ ಗರಿಗೆದರುತ್ತದೆ’ ಎಂಬುದು ಜನರ ಮಾತು.

ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ಭಾಗದಲ್ಲಿ ಗೆಲುವಿನ ಅಂತರ, ಎಷ್ಟು ಮತ ಪಡೆಯಬಹುದೆಂಬ ಬಗ್ಗೆ ಬೆಟ್ಟಿಂಗ್ ನಡೆದಿದೆ.

ಸಂತೇಬೆನ್ನೂರು (ದಾವಣಗೆರೆ ಜಿಲ್ಲೆ) ವರದಿ: ಚನ್ನಗಿರಿ ಕ್ಷೇತ್ರದ ಅಭ್ಯರ್ಥಿಗಳ ಪರ-ವಿರೋಧವಾಗಿ ಲಕ್ಷಾಂತರ ರೂಪಾಯಿ ಮೊತ್ತದ ಬೆಟ್ಟಿಂಗ್ ನಡೆಯುತ್ತಿದೆ.

‘ಪ್ರತಿಯೊಬ್ಬರೂ ₹ 10,000ದಿಂದ ₹ 1 ಲಕ್ಷ ರೂಪಾಯಿಗಳವರೆಗೆ ಬೆಟ್ಟಿಂಗ್‌ಗೆ ಮುಂದಾಗಿದ್ದಾರೆ. ಯಾರು ಗೆಲ್ಲಬಹುದು ಎಂಬ ಚರ್ಚೆ ಅಂತಿಮವಾಗಿ ಬೆಟ್ಟಿಂಗ್ ಹಂತಕ್ಕೆ ಬಂದು ನಿಲ್ಲುತ್ತಿದೆ. ಅಭ್ಯರ್ಥಿಗಳಿಬ್ಬರ ಗೆಲುವಿಗಾಗಿ ಬೆಂಬಲಿಗರಿಬ್ಬರು ತಲಾ ₹ 50,000 ನನ್ನ ಕಡೆ ಕೊಟ್ಟಿದ್ದಾರೆ. ಫಲಿತಾಂಶ ಬಂದ ನಂತರ ಗೆದ್ದವರಿಗೆ ಕೊಡುತ್ತೇನೆ. ಅದೇ ರೀತಿ ಅನೇಕರು ಚರ್ಚೆಯ ವೇಳೆ ಸವಾಲು ಸ್ವೀಕರಿಸಿದ್ದಾರೆ’ ಎಂದು ಬೆಟ್ಟಿಂಗ್‌ಗೆ ಮಧ್ಯಸ್ಥಿಕೆ ವಹಿಸಿರುವ, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಹೊಲದಲ್ಲಿ ಬೆಳೆದ ಬೆಳೆಯೂ ಜೂಜಿಗೆ!

ತುಮಕೂರು: ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಪರ ಬೆಟ್ಟಿಂಗ್‌ ಜೋರಾಗಿದೆ.

ಅಡಿಕೆ, ತೆಂಗು ಹೆಚ್ಚಾಗಿ ಬೆಳೆಯುವ ಜಿಲ್ಲೆಯ ಪಾವಗಡ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ನಗದು, ಚಿನ್ನಾಭರಣ, ಜಮೀನು, ಅಡಿಕೆ ಬೆಳೆಯನ್ನೇ ಪಣಕ್ಕೆ ಇಡುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅಡಿಕೆ ತೋಟವನ್ನೆ ಬಾಜಿ ಕಟ್ಟಿದ್ದಾರೆ. ಅಡಿಕೆ ಬೆಳೆಗಾರರು ಒಂದು ವರ್ಷದ ಅಡಿಕೆ ಬೆಳೆಯನ್ನೇ ಜೂಜಿಗಿಟ್ಟಿದ್ದಾರೆ!

ಪಾವಗಡಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕೆಲವು ಭಾಗಗಳ ಮುಖಂಡರು ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಪಾವಗಡದಲ್ಲಿ ಈ ಬಾರಿ ಜೆಡಿಎಸ್‌, ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಇದ್ದು, ಎರಡೂ ಕಡೆಯವರು ತಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸದಲ್ಲಿ ಭಾರಿ ಬೆಟ್ಟಿಂಗ್‌ ನಡೆಸಿದ್ದಾರೆ. 

ಎರಡು ಪಕ್ಷಗಳಲ್ಲಿ ₹50 ಸಾವಿರದಿಂದ ಶುರುವಾಗಿ ಲಕ್ಷಾಂತರ ರೂಪಾಯಿವರೆಗೆ ಬೆಟ್ಟಿಂಗ್‌ ನಡೆಯುತ್ತಿದೆ. ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಮರಿದಾಸನಹಳ್ಳಿ, ಲಿಂಗದಹಳ್ಳಿ, ನಾಗಲಮಡಿಕೆ, ತಿರುಮಣಿ ಭಾಗದ ಜನರು ಜಮೀನುಗಳನ್ನು ಪಣಕ್ಕಿಡುತ್ತಿದ್ದಾರೆ. 

ಕುರಿಗಾಹಿಗಳು 5ರಿಂದ 10 ಕುರಿ, ಮೇಕೆ, ಕೆಲವರು ಕೋಳಿ, ಹುಂಜಗಳನ್ನೂ ಪಣಕ್ಕಿಡುತ್ತಿ
ದ್ದಾರೆ. ಪಕ್ಷದ ಅಭ್ಯರ್ಥಿಯ ಗೆಲುವು–ಸೋಲು, ಮತಗಳ ಅಂತರ, ಪಡೆಯುವ ಮತಗಳ ಸಂಖ್ಯೆ, ಯಾವ ಪಕ್ಷಕ್ಕೆ ಹೆಚ್ಚು ಮತಗಳು ಸಿಗುತ್ತವೆ ಎಂಬಿತ್ಯಾದಿ ಆಧಾರದಲ್ಲಿ ಬೆಟ್‌ ಕಟ್ಟಲಾಗುತ್ತಿದೆ.

ಕೊರಟಗೆರೆ ವ್ಯಾಪ್ತಿಯಲ್ಲಿ ನಗದು, ಕಾರು, ದ್ವಿಚಕ್ರ ವಾಹನಗಳನ್ನು ಬೆಟ್ಟಿಂಗ್‌ಗೆ ಇಡುತ್ತಿದ್ದಾರೆ. ಇದರ ಜತೆಗೆ ಬಂಗಾರದ ಆಭರಣಗಳನ್ನು ಪಣಕ್ಕಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT