ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಯ್ಯಗೆ ‘ಹ್ಯಾಟ್ರಿಕ್’ ಗೆಲುವು; ತಲೆಕೆಳಗಾದ ಬಿಜೆಪಿ ಲೆಕ್ಕಾಚಾರ

Published 13 ಮೇ 2023, 7:14 IST
Last Updated 13 ಮೇ 2023, 7:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯ ಹುಬ್ಬಳ್ಳಿ–ಧಾರವಾಡ ಪೂರ್ವ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಸತತ ಮೂರನೇ ಸಲ ಗೆಲುವು ಸಾಧಿಸಿದ್ದಾರೆ. ಮತ ವಿಭಜನೆಯಾಗಿ ತನ್ನ ಗೆಲುವು ಸುಲಭವಾಗಲಿದೆ ಎಂಬ ಬಿಜೆಪಿಯ ಲೆಕ್ಕಾಚಾರ ತಲೆ ಕೆಳಗಾಗಿದೆ.

ಎದುರಾಳಿ ಬಿಜೆಪಿಯ ಡಾ. ಕ್ರಾಂತಿಕಿರಣ ಅವರ ವಿರುದ್ದ 36 ಸಾವಿರ ಮತಗಳ ಅಂತರದಿಂದ ಅಬ್ಬಯ್ಯ ವಿಜಯಿಯಾಗಿದ್ದು, ಆ ಮೂಲಕ ಕ್ಷೇತ್ರದ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಜಯ ಸಾಧಿಸಿದ ಮೊದಲ ರಾಜಕಾರಣಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಬಿಜೆಪಿ ತೊರೆದಿದ್ದ ಆ ಪಕ್ಷದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. ಎಐಎಂಐಎಂ ಮತ್ತು ಎಸ್‌ಡಿಪಿಐ ಮೊದಲ ಸಲ ಅಖಾಡಕ್ಕಿಳಿದಿದ್ದವು.

ಮುಸ್ಲಿಂ, ಲಿಂಗಾಯತ ಹಾಗೂ ದಲಿತ ಮತದಾರರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಸತತ ಎರಡನೇ ಸಲ ಹೊಸ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು. ಜೆಡಿಎಸ್, ಎಐಎಂಐಎಂ ಹಾಗೂ ಎಸ್‌ಡಿಪಿಐ ಅಭ್ಯರ್ಥಿಗಳು ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕುವುದರಿಂದ ಆಗುವ ಮತ ವಿಭಜನೆಯು ತನ್ನ ಗೆಲುವಿಗೆ ಕಾರಣವಾಗಲಿದೆ ಎಂಬ ಬಿಜೆಪಿ ಲೆಕ್ಕಾಚಾರ ತಲೆ ಕೆಳಗಾಗಿದೆ.

ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಕ್ಷೇತ್ರದಲ್ಲಿ ಎರಡು ದಿನ ಇದ್ದು, ರೋಡ್ ಶೋ ಮತ್ತು ಬಹಿರಂಗ ಸಭೆ ನಡೆಸಿ ಭಾರೀ ಪ್ರಚಾರ ನಡೆಸಿದ್ದರು. ಇದು ಕಾಂಗ್ರೆಸ್‌ನ ಸಾಂಪ್ರದಾಯಿಕ ಮುಸ್ಲಿಂ ಮತಗಳನ್ನು ವಿಭಜಿಸಿ ಬಿಜೆಪಿ ಗೆಲುವಿಗೆ ಪೂರಕವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಒವೈಸಿ ಮ್ಯಾಜಿಕ್‌ಗೆ ಮತದಾರರು ಮಣೆ ಹಾಕಿಲ್ಲ.

ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಅಬ್ಬಯ್ಯ ಅವರ ಕೈ ಹಿಡಿದಿವೆ. ಅವರ ಸರಳತೆ ಮತ್ತು ಸ್ಪಂದನೆ ಸತತ ಮೂರನೇ ಸಲ ಅವರನ್ನು ಗೆಲುವಿನ ದಡ ಸೇರಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT