ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಕೊಪ್ಪಳದ ಮೂರು ಕ್ಷೇತ್ರಗಳಲ್ಲಿ ಹ್ಯಾಟ್ರಿಕ್‌ ಮರೀಚಿಕೆ

ಸತತ ಐದು ವಿಧಾನಸಭಾ ಚುನಾವಣೆಗಳಲ್ಲಿ ಜಯದ ದಾಖಲೆ ಹೊಂದಿರುವ ಶ್ರೀರಂಗದೇವರಾಯಲು
Last Updated 6 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಪ್ರಸ್ತುತ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳು ಸತತ ಮೂರು ಚುನಾವಣೆಗಳಲ್ಲಿ ಗೆಲುವು ಪಡೆದಿದ್ದರೆ, ಮೂರು ಕ್ಷೇತ್ರಗಳಲ್ಲಿ ಇಲ್ಲಿಯವರೆಗೂ ಹ್ಯಾಟ್ರಿಕ್‌ ಸಾಧನೆ ಮರೀಚಿಕೆಯಾಗಿದೆ.

ಕುಷ್ಟಗಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಒಂದು ಅವಧಿ ಕಾಯಬೇಕಾದ ಇತಿಹಾಸವಿದೆ. ಸತತ ಎರಡು ಗೆಲುವು ಅಲ್ಲಿ ಸಾಧ್ಯವಾಗಿಲ್ಲ.

ಕನಕಗಿರಿ ಕ್ಷೇತ್ರದಿಂದ 2008ರಲ್ಲಿ ಪಕ್ಷೇತರರಾಗಿ ಶಿವರಾಜ ತಂಗಡಗಿ ಗೆಲುವು ಸಾಧಿಸಿ 2013ರಲ್ಲಿ ಕಾಂಗ್ರೆಸ್‌ನಿಂದ ಜಯಭೇರಿ ಮೊಳಗಿಸಿದ್ದರು. ಹಿಂದಿನ ಚುನಾವಣೆಯಲ್ಲಿ ಅವರಿಗೆ ಹ್ಯಾಟ್ರಿಕ್‌ ಸಾಧನೆಗೆ ಅವಕಾಶವಿತ್ತಾದರೂ ಬಿಜೆಪಿಯ ಬಸವರಾಜ ದಢೇಸೂಗೂರು ಎದುರು ಸೋಲು ಅನುಭವಿಸಿದರು.

ಇದಕ್ಕೂ ಮೊದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಶ್ರೀರಂಗದೇವರಾಯಲು 1983 ಮತ್ತು 1985ರಲ್ಲಿ ಗೆಲುವು ಸಾಧಿಸಿದ್ದರು. ಮುಂದಿನ ಚುನಾವಣೆಯಲ್ಲಿ (1989ರಲ್ಲಿ) ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು ಅಲ್ಲಿಯೂ ಗೆದ್ದು ಜಿಲ್ಲೆಯಲ್ಲಿ ಸತತ ಮೂರು ಗೆಲುವುಗಳನ್ನು ಪಡೆದ ಮೊದಲ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ವಿಶೇಷವೆಂದರೆ ಶ್ರೀರಂಗದೇವರಾಯಲು ಗಂಗಾವತಿಯಿಂದ ಸ್ಪರ್ಧಿಸಿದ್ದ 1994 ಮತ್ತು 1999 ಈ ಎರಡೂ ಚುನಾವಣೆಗಳಲ್ಲಿಯೂ ಗೆಲುವು ಸಾಧಿಸಿ ಸತತ ಐದು ಚುನಾವಣೆಗಳಲ್ಲಿ ಗೆದ್ದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.

ಶ್ರೀರಂಗದೇವರಾಯಲು ಅವರಿಗಿಂತ ಮೊದಲು ಗಂಗಾವತಿ ಕ್ಷೇತ್ರದಿಂದ ತಿರುಮಲ ದೇವರಾಯಲು 1962 ಮತ್ತು 1967ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು.

ಯಲಬುರ್ಗಾ ಕ್ಷೇತ್ರದಿಂದ 1978 ಹಾಗೂ 1983ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಲಿಂಗರಾಜ ದೇಸಾಯಿ ಗೆಲುವು ಸಾಧಿಸಿದ್ದರಿಂದ ಹ್ಯಾಟ್ರಿಕ್‌ ಸಾಧನೆಗೆ ಆವಕಾಶವಿತ್ತು. ದುರದೃಷ್ಟವಶಾತ್‌ ಎರಡನೇ ಬಾರಿಗೆ ಆಯ್ಕೆಯಾದ ವರ್ಷದಲ್ಲಿಯೇ ಅವರು ಮೃತಪಟ್ಟರು. ಬಳಿಕ ಬಸವರಾಜ ರಾಯರಡ್ಡಿ ಈ ಸಾಧನೆ ಮಾಡಿದರು. ರಾಯರಡ್ಡಿ 1985ರಲ್ಲಿ ಜಿಎನ್‌ಪಿ, 1989 ಹಾಗೂ 1994ರಲ್ಲಿ ಜನತಾದಳದಿಂದ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ’ಹ್ಯಾಟ್ರಿಕ್‌ ಬಾವುಟ’ ಹಾರಿಸಿದರು.

ಕೊಪ್ಪಳ ಕ್ಷೇತ್ರದಲ್ಲಿ 1994ರಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಪಕ್ಷೇತರರಾಗಿ ಹಾಗೂ 1999ರಲ್ಲಿ ಜೆಡಿಯುನಿಂದ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಸಾಧನೆಯ ಹೊಸ್ತಿಲಿಗೆ ಬಂದಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದರಾದರೂ ಕಾಂಗ್ರೆಸ್‌ನ ಕೆ. ಬಸವರಾಜ ಹಿಟ್ನಾಳ ಎದುರು ಸೋಲು ಕಂಡರು. ಬಸವರಾಜ ಹಿಟ್ನಾಳ ಅವರ ಪುತ್ರ ಹಾಲಿ ಶಾಸಕ ಕಾಂಗ್ರೆಸ್‌ನ ಕೆ. ರಾಘವೇಂದ್ರ ಹಿಟ್ನಾಳ ಹಿಂದಿನ ಎರಡೂ ಚುನಾವಣೆಗಳಲ್ಲಿ ಗೆಲುವು ಪಡೆದಿದ್ದಾರೆ.

ಜಿಲ್ಲೆಯಾದ ಬಳಿಕ ಆಗಿಲ್ಲ ಸಾಧನೆ
ರಾಯಚೂರಿನಿಂದ ಬೇರ್ಪಟ್ಟು ಕೊಪ್ಪಳ ಜಿಲ್ಲೆ ರಚನೆಯಾಗಿ ಈಗ 25 ವರ್ಷಗಳಾಗಿವೆ. ಈ ಎರಡೂವರೆ ದಶಕಗಳ ಅವಧಿಯ ರಾಜಕಾರಣದಲ್ಲಿ ಯಾರೂ ಸತತ ಮೂರು ಬಾರಿ ಗೆಲುವು ಸಾಧಿಸಿಲ್ಲ.

ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಹಿಂದಿನ ಎರಡೂ ಚುನಾವಣೆಗಳಲ್ಲಿ ಗೆಲುವು ಪಡೆದಿದ್ದಾರೆ. ಈ ಬಾರಿ ಪಕ್ಷ ಈಗಾಗಲೇ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದು, ಪ್ರಚಾರ ಕೂಡ ಆರಂಭಿಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವಿನ ಸಾಧನೆಗೆ ಅವಕಾಶವಿರುವುದು ಅವರಿಗೆ ಮಾತ್ರ.

ಈ ಕುರಿತು ಪ್ರತಿಕ್ರಿಯಿಸಿದ ಹಿಟ್ನಾಳ 'ಕೊಪ್ಪಳ ಕ್ಷೇತ್ರದಲ್ಲಿ ಸತತ ಮೂರು ಗೆಲುವುಗಳನ್ನು ಪಡೆದ ಸಾಧನೆ ಯಾರೂ ಮಾಡಿಲ್ಲ. ಈ ದಾಖಲೆಯನ್ನು ನಾನು ಮಾಡುವೆ. ಇತಿಹಾಸ ಬರೆಯುವೆ' ಎಂದು ಪ್ರಚಾರದ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT