ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದವರಿಗಾಗಿ ಇರುವ ಪಕ್ಷವನ್ನು ಸೋಲಿಸಲು ಎಲ್ಲರೂ ಮುಂದಾಗಿ: ಸುಮಲತಾ ಅಂಬರೀಶ್

Published 1 ಮೇ 2023, 12:55 IST
Last Updated 1 ಮೇ 2023, 12:55 IST
ಅಕ್ಷರ ಗಾತ್ರ

ಮಳವಳ್ಳಿ: ತಮ್ಮ ಕುಟುಂಬದವರ ಅಭಿವೃದ್ಧಿಗಾಗಿಯೇ ಸೀಮಿತವಾಗಿರುವ ಪಕ್ಷವನ್ನು ಸೋಲಿಸಿ ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದರು.

ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ಸಂಸದೆ ಎನ್ನುವುದಕ್ಕಿಂತ ಹೆಚ್ಚಾಗಿ ಮಳವಳ್ಳಿಯ ಹುಚ್ಚೇಗೌಡರ ಸೊಸೆ ಎನ್ನುವ ಉದ್ದೇಶದಿಂದ ಕಳೆದ ಬಾರಿ ಅತಿ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದೀರಿ, ಹೆಣ್ಣು ಹೊರಗಡೆ ಬಂದಾಗ ಎದುರಾಗುವ ಸಮಸ್ಯೆಗಳು ನನಗೆ ಗೊತ್ತು. ಎಷ್ಟೋ ರಾತ್ರಿ ಕಣ್ಣಿನಲ್ಲಿ ನೀರು ಆಗಿರುವೆ. ಚುನಾವಣೆಯ ಹಾಗೂ ನಂತರ ದಿನಗಳಲ್ಲೂ ನಿರಂತರ ಕಿರುಕುಳ ನೀಡುತ್ತಿರುವವರು ಯಾರೂ ಎನ್ನುವುದು ಎಲ್ಲರಿಗೂ ಗೊತ್ತು' ಎಂದು ಹೇಳಿದರು.

'ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಸ್ಥಳೀಯ ಶಾಸಕರು ಶಿಷ್ಟಾಚಾರದಂತೆ ಉಲ್ಲಂಘನೆ ಮಾಡಿದ್ದು, ಅದರಲ್ಲೂ ಅಂತಹ ಕೆಲಸ ಮಳವಳ್ಳಿಯಲ್ಲಿ ಅತಿ ಹೆಚ್ಚು ಆಗಿರೋದು ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಸರೇಳದೇ ವಾಗ್ದಾಳಿ ನಡೆಸಿದ ಅವರು ಜಿಲ್ಲೆಗೆ ತಂದಿರುವ 3500 ಕೋಟಿ ರೂ.ಅನುದಾನದಲ್ಲಿ ತಾಲ್ಲೂಕಿಗೆ 350 ಕೋಟಿ ರೂ.ಅನುದಾನ ನೀಡಿರುವೆ' ಎಂದರು.

'ಕೆಲವರು ಹೇಳಿರುವ ಉಚಿತ ಯೋಜನೆಗಳನ್ನು ಜಾರಿ ಮಾಡಲು 60 ಸಾವಿರ ಕೋಟಿ ರೂ.ಬೇಕು ಅದನ್ನು ಎಲ್ಲಿಂದ ತರುವುದು ಎನ್ನುವುದನ್ನು ಬಹಿರಂಗಪಡಿಸಬೇಕು ಕೇಂದ್ರದ ಬಿಜೆಪಿ ಸರ್ಕಾರ ಬಡವರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳನ್ನು ನೀಡಿದ್ದು, ಭವಿಷ್ಯದ ದೃಷ್ಟಿಯಿಂದ ಜಿಲ್ಲೆಯಲ್ಲಿ ಬದಲಾವಣೆ ತರಲು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು' ಎಂದು ಮನವಿ ಮಾಡಿದರು.

'ರಾಮನಗರ, ಹಾಸನದಲ್ಲಿ ಕುಟುಂಬದರಿಗಾಗಿ ಇರುವ ಪಕ್ಷವನ್ನು ವಿರೋಧಿಸಬೇಕು. ಅಕ್ರಮ ಗಣಿಗಾರಿಕೆ ಹಾಗೂ ಮನ್ ಮುಲ್ ಹಗರಣದ ವಿರುದ್ಧ ಜಿಲ್ಲೆಯ ಶಾಸಕರು ಧ್ವನಿ ಎತ್ತಲಿಲ್ಲ, ಬರೀ ಮಾತಿಗೆ ರೈತರ ಪಕ್ಷ ಎನ್ನುವವರು ಏಕೆ ಈ ಅಕ್ರಮಗಳ ವಿರುದ್ಧ ಹೋರಾಟ ನಡೆಸಲು ಮುಂದಾಗಲಿಲ್ಲ, ಕೆಆರ್ಎಸ್ ಜಲಾಶಯಕ್ಕೆ ಅಪಾಯ ಎದುರಾದಾಗ ಧ್ವನಿ ಎತ್ತಿ ಹೋರಾಟ ನಡೆಸಿದೆ. ನೀವೇ ದೃಢ ನಿರ್ಧಾರ ಮಾಡಿ ಅತಂತ್ರ, ಕುತಂತ್ರ ಮಾಡುವ ಕುಟುಂಬ ಸರ್ಕಾರ ಬೇಕಾ?‘ ಎನ್ನುವ ಮೂಲಕ ತಮ್ಮ ಭಾಷಣದ್ದುದ್ದಕ್ಕೂ ಜೆಡಿಎಸ್ ನನ್ನು ಕಟುವಾಗಿ ಟೀಕಿಸಿದರು.

ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಮಾತನಾಡಿ, ‍‘ಮೀಸಲು ಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಮತ ಹಾಕಿದ್ದೀರಿ, ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು, ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿರುವ ತಾಲ್ಲೂಕಿನ ಪ್ರಗತಿಗೆ ಬಿಜೆಪಿಯನ್ನು ಬೆಂಬಲಿಸಬೇಕು. ಸುಮಲತಾ ಅವರ ಬಲದಿಂದ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಅಭಿವೃದ್ಧಿಗೆ ವಿರುದ್ಧ ಇರುವ ಕಾಂಗ್ರೆಸ್ ಮತ್ತು ಜೆಡಿಎಸ್ ನನ್ನು ಬಗ್ಗೆ ಎಚ್ಚರಿಕೆ ವಹಿಸಿ ಎಲ್ಲರೂ ಒಗ್ಗಟ್ಟಿನಿಂದ ಬದಲಾವಣೆ ತರಲು ಮುಂದಾಗಿ‘ ಎಂದು ಹೇಳಿದರು.

ನಾನು ತಂದಿರುವ ಅನುದಾನಗಳ ಬಗ್ಗೆ ದಾಖಲೆ ನೀಡಲು ಸಿದ್ದ. ಅಂಬರೀಷ್ ಇದ್ದಾಗ ಮಾತನಾಡಲು ಧೈರ್ಯ ಇಲ್ಲದವರು ಈಗ ನನ್ನ ವಿರುದ್ಧ ಮಾತನಾಡುತ್ತಾ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅದನ್ನು ಎದುರಿಸುತ್ತಿರುವೆ. ಎಂದಿಗೂ ಜೆಡಿಎಸ್‌ ಅವರನ್ನು ಟಾರ್ಗೆಟ್ ಮಾಡಿಲ್ಲ, ಸಾಧನೆ ಮಾಡದ ಅವರೇ ನನ್ನನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ.
ಸುಮಲತಾ ಅಂಬರೀಶ್, ಸಂಸದೆ

‘ಜೆಡಿಎಸ್ ಶಾಸಕರು ನಿರೀಕ್ಷೆ ತಕ್ಕಂತೆ ಅಭಿವೃದ್ಧಿ ಮಾಡದ ಬಗ್ಗೆ ಪ್ರಶ್ನೆ ಮಾಡುತ್ತೇನೆ, ಒಂದೇ ಪಕ್ಷದವರ ಬಗ್ಗೆ ಮಾತನಾಡುತ್ತಾರೆ ಎನ್ನುವುದು ತಪ್ಪು ಅಭಿಪ್ರಾಯವಾಗಿದೆ. ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಹೇಳುವ ಕಾಂಗ್ರೆಸ್ ಕೆಎಸ್ಆರ್‌ಟಿಸಿ ಸಿಬ್ಬಂದಿಗಳಿಗೆ ಹೇಗೆ ಸಂಬಳ ಕೊಡುತ್ತಾರೆ? ಬೇರೆ ರಾಜ್ಯದಲ್ಲಿ ಈ ಯೋಜನೆ ವಿಫಲವಾಗಿದ್ದು, ಇಲ್ಲಿಯೂ ಕೂಡ ಅದು ಸಮರ್ಪಕವಾಗಿ ಜಾರಿಯಾಗುವುದಿಲ್ಲ‘ ಎಂದರು.

ಕ್ಷೇತ್ರದ ಉಸ್ತುವಾರಿ ಮದ್ದೂರು ಸತೀಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಯಶೋಧಮ್ಮ, ಪುರಸಭೆ ಸದಸ್ಯ ರವಿ, ಮುಖಂಡರಾದ ಹಲಸಹಳ್ಳಿ ಎಚ್.ಆರ್.ಅಶೋಕ್ ಕುಮಾರ್, ಯಮದೂರು ಸಿದ್ದರಾಜು, ಅಪ್ಪಾಜಿಗೌಡ, ದೋರನಹಳ್ಳಿ ಕುಮಾರಸ್ವಾಮಿ, ಮಧು ಗಂಗಾಧರ್, ಶಾರದಾ ಜಿ.ಮುನಿರಾಜು, ಕನ್ನಹಳ್ಳಿ ಪ್ರಸಾದ್, ಚೌಡೇಗೌಡ, ಮೂರ್ತಿ, ಕ್ಯಾತನಹಳ್ಳಿ ಅಶೋಕ್, ಕೆ.ಸಿ.ನಾಗೇಗೌಡ, ರಾಜಣ್ಣ, ರಾಜೀವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT