ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ನೆಲೆಯಲ್ಲಿ ಅರಳಿದ ಕಮಲ; ಗೆದ್ದು ಬೀಗಿದ ಪಾಟೀಲ

Published 14 ಮೇ 2023, 12:46 IST
Last Updated 14 ಮೇ 2023, 12:46 IST
ಅಕ್ಷರ ಗಾತ್ರ

ಓದೇಶ ಸಕಲೇಶಪುರ

ಹುಬ್ಬಳ್ಳಿ: ತ್ರಿಕೋನ ಸ್ಪರ್ಧೆಯಿಂದಾಗಿ ಗಮನ ಸೆಳೆದಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಆರ್. ಪಾಟೀಲ ಗೆಲುವಿನ ನಗೆ ಬೀರಿದ್ದಾರೆ. ಜಿಲ್ಲೆಯ ಕಾಂಗ್ರೆಸ್‌ ಭದ್ರಕೋಟೆಯಾದ ಕ್ಷೇತ್ರದಲ್ಲಿ ಸತತ ಮೂರು ಸಲ (2019ರ ಉಪ ಚುನಾವಣೆ ಸೇರಿ) ಗೆದ್ದಿದ್ದ ಕಾಂಗ್ರೆಸ್‌, ಈ ಬಾರಿ ಮುಖಭಂಗ ಅನುಭವಿಸಿದೆ.

ಚಲಾವಣೆಯಾದ 1,55,086 ಮತಗಳ ಪೈಕಿ 76,105 ಮತಗಳನ್ನು ಪಡೆದಿರುವ ಪಾಟೀಲ ಅವರು, ಸಮೀಪ ಸ್ಪರ್ಧಿ ಹಾಗೂ ಹಾಲಿ ಶಾಸಕಿಯೂ ಆಗಿರುವ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ವಿರುದ್ಧ 35,341 ಮತಗಳ ಅಂತರದ ಭಾರೀ ಗೆಲುವು ಸಾಧಿಸಿದ್ದಾರೆ.

ಕೈ ಹಿಡಿಯದ ಅನುಕಂಪ

ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿ ತೊರೆದು ಪಕ್ಷೇತರವಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಸಂಬಂಧಿ ಎಸ್.ಐ. ಚಿಕ್ಕನಗೌಡ್ರ 21,562 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಹಿಂದಿನ 3 ಚುನಾವಣೆಗಳಲ್ಲಿ ಸತತ ಸೋಲು ಹಾಗೂ ‘ಹಿರಿಯ ನಾಯಕನಾದ ನನಗೆ ಬಿಜೆಪಿ ಅನ್ಯಾಯ ಮಾಡಿದೆ’ ಎಂಬ ಚಿಕ್ಕನಗೌಡ್ರ ಅವರ ಅನುಕಂಪದ ಮಾತುಗಳಿಗೆ ಮತದಾರ ಕಿವಿಗೊಟ್ಟಿಲ್ಲ.

ಜಿಲ್ಲೆಯಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್‌ನ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದ ಕುಸುಮಾವತಿ ಪರವಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕ್ಷೇತ್ರದಲ್ಲಿ ನಡೆಸಿದ್ದ ರೋಡ್ ಶೋ ಫಲ ಕೊಟ್ಟಿಲ್ಲ. ದಿ. ಸಿ.ಎಸ್. ಶಿವಳ್ಳಿ ಅವರ ಪತ್ನಿ ಎಂಬ ಅನುಕಂಪವೂ ಅವರ ಕೈ ಹಿಡಿದಿಲ್ಲ.

ಫಲಿಸಿದ ಅಭಿವೃದ್ಧಿ ಪಠಣ

ಅಧಿಕಾರದಲ್ಲಿ ಇಲ್ಲದಿದ್ದರೂ ಪಾಟೀಲ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ತಮಗೆ ಆತ್ಮೀಯರಾಗಿರುವ ಸಚಿವರ ನೆರವಿನಿಂದ ಕ್ಷೇತ್ರಕ್ಕೆ ಅನುದಾನ ತಂದು ರಸ್ತೆ, ಚರಂಡಿ ಸೇರಿದಂತೆ ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದರು.

ತಮ್ಮ ಕರಪತ್ರದಲ್ಲಿ ಅವುಗಳ ಪಟ್ಟಿಯನ್ನೇ ನೀಡಿದ್ದ ಪಾಟೀಲ, ‘ಅಧಿಕಾರ ಕೊಟ್ಟರೆ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವೆ’ ಎಂದು ಪ್ರಚಾರ ಮಾಡಿದ್ದರು. ಕುಸುಮಾವತಿ ಅವರ ಪ್ರಚಾರ ಇದಕ್ಕೆ ವ್ಯತಿರಿಕ್ತವಾಗಿತ್ತು.

ಚಿಕ್ಕನಗೌಡ್ರ ಮತ್ತು ಕುಸುಮಾವತಿ ಅವರ ಆಡಳಿತ ವೈಖರಿಯನ್ನು ನೋಡಿರುವ ಕ್ಷೇತ್ರದ ಮತದಾರರು, ಬದಲಾವಣೆ ಬಯಸಿ ಪಾಟೀಲ ಅವರನ್ನು ಮೊದಲ ಸಲ ವಿಧಾನಸೌಧಕ್ಕೆ ಕಳಿಸಿದ್ದಾರೆ. ಇದರೊಂದಿಗೆ ಕ್ಷೇತ್ರದ ಅಧಿಕಾರವನ್ನು ಮತ್ತೊಮ್ಮೆ ಯರಗುಪ್ಪಿಯ ಅಂಗಳದಲ್ಲೇ ಉಳಿಸಿದ್ದಾರೆ.

ಚುನಾವಣಾ ಫಲಿತಾಂಶದ ಸಂಪೂರ್ಣ ವಿವರ

1 : ಎಂ.ಆರ್. ಪಾಟೀಲ : ಬಿಜೆಪಿ: 76,105

2 : ಕುಸುಮಾವತಿ ಶಿವಳ್ಳಿ : ಕಾಂಗ್ರೆಸ್ : 40,764

3 : ಎಸ್‌.ಐ. ಚಿಕ್ಕನಗೌಡ್ರ : ಪಕ್ಷೇತರ : 30,425

4 : ಹಜರತ ಅಲಿ ಜೋಡಮನಿ : ಜೆಡಿಎಸ್ : 4,304

5 : ರುದ್ರಯ್ಯ ಮಣಕಟ್ಟಿಮಠ : ಎಎಪಿ : 620

6 : ಯಲ್ಲಪ್ಪ ದಬಗೊಂದಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷ :202

7 : ಸುರೇಶ ಕುರಬಗಟ್ಟಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ :68

8 :ಶಿವನಗೌಡ ಕುರಟ್ಟಿ : ಪಕ್ಷೇತರ : 777

9 : ವಿರುಪಾಕ್ಷಗೌಡ ಪಕ್ಕಿರಗೌಡ್ರ : ಪಕ್ಷೇತರ : 257

10 : ಮಲ್ಲಿಕಾರ್ಜುನ ತೋಟಗೇರಿ : ಪಕ್ಷೇತರ : 128

11 : ಮಹ್ಮದ್ ಕರಡಿ :ಪಕ್ಷೇತರ :98

12 : ಚಾಂದಪೀರ ಬಂಕಾಪುರ :ಪಕ್ಷೇತರ : 79

13 : ಗಂಗಾಧರ ಖಂಡೇಗೌಡ್ರು : ಪಕ್ಷೇತರ :194

14 : ಕುತುಬುದ್ದೀನ್ ಬೆಳಗಲಿ : ಪಕ್ಷೇತರ : 64

15 : ನೋಟಾ : 1,001

ಒಳೇಟಿಗೆ ಕ್ಷೇತ್ರ ಕಳೆದುಕೊಂಡ ‘ಕೈ’

ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದಿದ್ದ ಕುಸುಮಾವತಿ ವಿರುದ್ಧ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿತ್ತು. ರಾಜಕೀಯ ಅನುಭವವಿಲ್ಲದ ಅವರು ಈ ಅಲೆಯನ್ನು ಎದುರಿಸುವಲ್ಲಿ ವಿಫಲವಾದರು. ಕುಸುಮಾವತಿ ಅವರಿಗೆ ಟಿಕೆಟ್ ಕೊಟ್ಟರೆ ನಮ್ಮಲ್ಲೇ ಒಬ್ಬರು ಬಂಡಾಯವಾಗಿ ನಿಲ್ಲುತ್ತೇವೆ ಎಂದು ಸ್ವತಃ ಕಾಂಗ್ರೆಸ್‌ನ 9 ಆಕಾಂಕ್ಷಿಗಳು ಬಹಿರಂಗವಾಗಿ ಹೇಳಿದ್ದರು. ಇದನ್ನೂ ಮೀರಿಯು ಕುಸುಮಾವತಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಈ ನಡೆ ಪಕ್ಷಕ್ಕೆ ದುಬಾರಿಯಾಯಿತಲ್ಲದೆ ಒಳೇಟು ಕೊಟ್ಟಿತು. ಕ್ಷೇತ್ರದಲ್ಲಿ ಹೆಚ್ಚಾಗಿರುವ ಲಿಂಗಾಯತ ಮತಗಳು ಚಿಕ್ಕನಗೌಡ್ರ ಮತ್ತು ಪಾಟೀಲ ಅವರ ನಡುವೆ ವಿಭಜನೆಯಾಗಿ ಕುರುಬ ಸಮುದಾಯದ ಕುಸುಮಾವತಿ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಕಾಂಗ್ರೆಸ್ ಲೆಕ್ಕಾಚಾರ ತಲೆ ಕೆಳಗಾಯಿತು. ಪಕ್ಷದ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಇದು ಬಿಜೆಪಿಯ ಮತ ಬ್ಯಾಂಕ್ ಅನ್ನು ಹಿಗ್ಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT