ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರಣಾಳಿಕೆ ವಾಪಸ್ ಪಡೆಯಲಿ; ಕೆ.ಎಸ್.ಈಶ್ವರಪ್ಪ

Published 5 ಮೇ 2023, 6:18 IST
Last Updated 5 ಮೇ 2023, 6:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಜರಂಗದಳ ರಾಷ್ಟ್ರ, ಧರ್ಮ ರಕ್ಷಣೆ ಮಾಡುತ್ತಿದೆ. ಯಾವುದೇ ಸಾಮಾನ್ಯ ಜ್ಞಾನ ಇಲ್ಲದೆ ಕಾಂಗ್ರೆಸ್‌ನವರು ಪ್ರಣಾಳಿಕೆ ಸಿದ್ಧಪಡಿಸಿ, ಅದರಲ್ಲಿ ಬಜರಂಗದಳ ನಿಷೇಧದ ವಿಷಯ ಸೇರಿಸಿದ್ದಾರೆ. ಕಾಂಗ್ರೆಸ್‌ನವರು ಈ ಪ್ರಣಾಳಿಕೆಯನ್ನು ತಕ್ಷಣ ವಾಪಸ್ ಪಡೆಯಬೇಕು’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣಾ ಪ್ರಣಾಳಿಕೆಯಲ್ಲಿ ಧರ್ಮದ ರಕ್ಷಕರು, ಅಂತಹ ಸಂಘಟನೆ ನಿಷೇಧಿಸುತ್ತೇವೆ ಎಂದರೆ ಅಂತಹ ನೂರು ಪ್ರಣಾಳಿಕೆಗಳನ್ನು ಬೇಕಾದರೂ ಸುಡುತ್ತೇನೆ. ಧರ್ಮ, ದೇಶ ಉಳಿಯಬೇಕು ಎಂಬುದು ನನ್ನ ಆಸೆ’ ಎಂದರು.

‘ನಮ್ಮ ಸರ್ಕಾರ ಈಗಾಗಲೇ ನಿಷೇಧಿಸಿರುವ ಪಿಎಫ್‌ಐ ಸಂಘಟನೆಯನ್ನು ಮತ್ತೆ ನಿಷೇಧಿಸುತ್ತೇವೆ ಎನ್ನುತ್ತಿದ್ಧಾರೆ. ಬರಿ ಬಜರಂಗದಳದ ಹೆಸರು ಹೇಳು ಧೈರ್ಯ ಅವರಿಗಿಲ್ಲ. ಅದಕ್ಕಾಗಿ ಪಿಎಫ್‌ಐ ಹೆಸರು ಸೇರಿಸಿಕೊಂಡಿದ್ದಾರೆ. ಅವರು ಹೇಡಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಜರಂಗದಳದಲ್ಲಿ ರಾಷ್ಟ್ರೀಯವಾದಿಗಳಿದ್ದಾರೆ. ಅವರು ಸುಮ್ಮನೇ ಕುಳಿತಿಲ್ಲ. ಕಾಂಗ್ರೆಸ್‌ನ ನಿಲುವು ಖಂಡಿಸಿ ಹನುಮಾನ್ ಚಾಲೀಸ ಪಠಣ ಮಾಡಿ ಶಾಂತಿಯುತವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಮುಂದಿನ ದಿನಗಲ್ಲಿ ಏನಾಗುತ್ತದೆ ನೋಡಿ’ ಎಂದರು.

‘ಆಂಜನೇಯ ಲಂಕೆಯನ್ನು ಸುಟ್ಟ. ರಾಜ್ಯದಲ್ಲಿ ಕಾಂಗ್ರೆಸ್‌ನವರು ಬಜರಂಗದಳ ನಿಷೇಧದ ಹೆಸರಿನಲ್ಲಿ ಬೆಂಕಿ ಹಚ್ಚಿದ್ದಾರೆ. ರಾಜ್ಯದಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ. ವಿರೋಧ ಪಕ್ಷದ ಸ್ಥಾನವೂ ಸಿಗುವುದಿಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷ ಹಿಂದೂ ಸಮಾಜವನ್ನು ಅಪಮಾನ ಮಾಡುತ್ತಾ ಮುಸ್ಲಿಮರನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದೆ. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸಿ, ನೇರವಾಗಿ ಜಾತಿವಾದಕ್ಕೆ ಬೆಂಬಲ ಕೊಡುವುದು ಕಾಂಗ್ರೆಸ್‌ನ ನೀತಿಯಾಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಷಯವನ್ನು ಏಕೆ ಸೇರಿಸಿದರು, ಯಾರು ಇದರ ಹಿಂದೆ ಇದ್ದಾರೆ ಎಂಬ ಬಗ್ಗೆ ಅವರ ಪಕ್ಷದಲ್ಲೇ ಗೊಂದಲ ಇದೆ’ ಎಂದು ಹೇಳಿದರು.

‘ಯಾವುದೇ ಸ್ವಾಭಿಮಾನಿ ವ್ಯಕ್ತಿ ಬಜರಂಗದಳವನ್ನು ಈವರೆಗೂ ಟೀಕೆ ಮಾಡಿಲ್ಲ. ದೇಶ ರಕ್ಷಣೆ ಮಾಡುವ, ರಾಷ್ಟ್ರಭಕ್ತಿ ಹೊಂದಿರುವ ಯುವಕರ ಪಡೆ ಆ ಸಂಘಟನೆಯಲ್ಲಿದೆ. ದೇಶದ ಸಂಸ್ಕೃತಿಗೆ ಧಕ್ಕೆ ತಂದರೆ ಅದರ ವಿರುದ್ಧ ಅವರು ನೇರವಾಗಿ ಹೋರಾಟಕ್ಕೆ ಇಳಿಯುತ್ತಾರೆ. ಇಂತಹ ಸಂಘಟನೆಯನ್ನು ಪಿಎಫ್ಐ ಜತೆ ಹೋಲಿಕೆ ಮಾಡಿ, ನಿಷೇಧಿಸುತ್ತೇವೆ ಎಂದಿರುವುದು ದುರಂತ’ ಎಂದರು.

‘ಕಾಂಗ್ರೆಸ್ ಪಕ್ಷವು ದೇಶದಲ್ಲಿ ಹಿಂದೂಗಳನ್ನು ಪಕ್ಕಕ್ಕೆ ಸರಿಸುವ ಕೆಲಸ ಮಾಡುತ್ತಿದೆ. ವಿಶ್ವವೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಹಗುರವಾಗಿ ಮಾತನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಗೌರವ ಇತ್ತು. ಅವರು ಪ್ರಧಾನಿಯನ್ನು ವಿಷಸರ್ಪಕ್ಕೆ ಹೋಲಿಸಿದರು. ಇದರಿಂದ ಇಷ್ಟು ವರ್ಷ ಖರ್ಗೆ ಅವರು ಮಾಡಿದ ರಾಜಕೀಯ ಭಸ್ಮವಾಗಿದೆ’ ಎಂದು ಹೇಳಿದರು.

‘ಇನ್ನೂ ಕಣ್ಣು ಬಿಡುತ್ತಿರುವ, ತಿಗಣೆ ಸ್ವರೂಪದ ಪ್ರಿಯಾಂಕ್ ಖರ್ಗೆ ಆನೆ ರೂಪದಲ್ಲಿ ದೇಶದಲ್ಲಿ ಬೆಳೆಯುತ್ತಿರುವ ನರೇಂದ್ರ ಮೋದಿ ಅವರ ಬಗ್ಗೆ ನಾಲಾಯಕ್ ಎಂಬ ಪದ ಬಳಸುತ್ತಾರೆ. ಈ ಪಕ್ಷಕ್ಕೆ ಹೇಳುವವರು, ಕೇಳುವವರು ಇಲ್ಲವೇ’ ಎಂದು ಪ್ರಶ್ನಿಸಿದರು.

‘ಸ್ವಾಭಿಮಾನ ಇದ್ದಿದ್ದರೆ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಹೋಗುತ್ತಿರಲಿಲ್ಲ. ಅವರ ಪರಿಸ್ಥಿತಿ ನೋಡಿ ಅಯ್ಯೋ ಎನಿಸುತ್ತಿದೆ. ಬಜರಂಗದಳ ನಿಷೇಧದ ಬಗ್ಗೆ ಕಾಂಗ್ರೆಸ್ ಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಆರ್‌ಎಸ್‌ಎಸ್, ಬಜರಂಗದಳ, ಹಿಂದೂ ಧರ್ಮದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದ ಆ ಜಗದೀಶ ಶೆಟ್ಟರ್ ಅವರ ಸ್ವಾಭಿಮಾನವನ್ನು ನಾನು ನಿರೀಕ್ಷೆ ಮಾಡಿದ್ದೆ’ ಎಂದರು.

‘ಒಂದು ಟಿಕೆಟ್‌ಗಾಗಿ ಅವರು ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ. ಅವರ ಕಚೇರಿಯಲ್ಲಿ ಈಗಲೂ ಮೋದಿ, ಅಮಿತ್‌ ಶಾ ಅವರ ಚಿತ್ರಗಳಿವೆ. ಈಗಲೂ ಅವರಿಗೆ ಅವಕಾಶ ಇದ್ದು, ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಷಯ ಸೇರಿಸಿರುವುದನ್ನು ಬಹಿರಂಗವಾಗಿ ವಿರೋಧಿಸಬೇಕು’ ಎಂದು ಹೇಳಿದರು.

‘ಶೆಟ್ಟರ್ ಅವರು ಸಿದ್ಧಾಂತವನ್ನು ವಿರೋಧಿಸಿಲ್ಲ. ಈಗಲೂ ಒಬ್ಬ ವ್ಯಕ್ತಿಯ ಕಾರಣಕ್ಕೆ ಬಿಜೆಪಿ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಬಿಜೆಪಿಯ ರಾಷ್ಟ್ರೀಯವಾದದ ಬಗ್ಗೆ ಇನ್ನೂ ಅವರಿಗೆ ಆಸಕ್ತಿ ಇದೆ. ಇಲ್ಲ ಎಂದಿದ್ದರೆ ಕಾಂಗ್ರೆಸ್‌ನ ಪ್ರಣಾಳಿಕೆ ಸರಿ ಇದೆ ಎಂದು ಹೇಳಬೇಕಿತ್ತು. ಅವರು ಬಿಜೆಪಿಯ ಸಿದ್ಧಾಂತದಿಂದ ಇನ್ನೂ ಹೊರ ಬಂದಿಲ್ಲ. ಶೆಟ್ಟರ್ ನಿಜಕ್ಕೂ ಸ್ವಾಭಿಮಾನಿಯೋ, ವೋಟಿಗೋಸ್ಕರ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಿದ್ದಾರೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

‘ರಾಜ್ಯದಲ್ಲಿ ರಾಷ್ಟ್ರೀಯವಾದಿಗಳು ಮತ್ತು ರಾಷ್ಟ್ರೀಯವಾದಿಗಳಲ್ಲದವರ ನಡುವೆ ಚುನಾವಣೆ ನಡೆಯುತ್ತಿದೆ. ರಾಜ್ಯದ ಜನ ರಾಷ್ಟ್ರವಾದದ ಜತೆಗಿದ್ದಾರೆ’ ಎಂದು ಹೇಳಿದರು.

‘ಎಲ್ಲ ಒಕ್ಕಲಿಗರು ನನ್ನ ಹಿಂದೆ ಬಂದರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ನಿಜವಾದ ಜಾತಿವಾದಿ. ಅವರು ಜಾತಿವಾದದ ವಿಷಬೀಜ ಬಿತ್ತಿದ್ದಾರೆ. ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಆಂಜನೇಯ ಎಂದು ಹೆಸರಿಟ್ಟುಕೊಂಡರೆ ಸಾಕೆ? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ರಾಮ, ಕೃಷ್ಣ, ಶಿವ ಎಂಬ ಹೆಸರು ಇಟ್ಟುಕೊಳ್ಳುವುದಕ್ಕೆ ಪಾವಿತ್ರ್ಯತೆ ಇದೆ. ಕತ್ತೆ ದನ, ಎಮ್ಮೆ ಎಂದು ಹೆಸರಿಟ್ಟುಕೊಳ್ಳುವುದಿಲ್ಲ. ನಿಮ್ಮ ಹೆಸರನ್ನು ಕೆ.ಡಿ.ಶಿವಕುಮಾರ್ ಎಂದು ಇಟ್ಟುಕೊಳ್ಳಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT