ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಜನಸೇವೆ ಸುರೇಶ್ ‘ಕೈ’ ಹಿಡಿಯುವ ವಿಶ್ವಾಸವಿದೆ: ಡಿ.ಕೆ. ಶಿವಕುಮಾರ್

ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಮತಯಾಚನೆ
Published 31 ಮಾರ್ಚ್ 2024, 15:41 IST
Last Updated 31 ಮಾರ್ಚ್ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: 'ಕೋವಿಡ್ ಸಮಯದಲ್ಲಿ ಸಂಸದ ಡಿ.ಕೆ ಸುರೇಶ್ ಅವರು ಮಾಡಿದ ಜನಸೇವೆ, ಕೆಲಸಗಳನ್ನು ಕುಮಾರಣ್ಣ ಮಾತ್ರವಲ್ಲ ದೇಶದ ಬೇರೆ ಯಾವುದೇ ನಾಯಕ ಮಾಡಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಆರ್‌ಆರ್‌ ನಗರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಶಿವಕುಮಾರ್‌, ‘ಆ ಕ್ಷೇತ್ರದ ಉಪ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ನಾವು (ಕಾಂಗ್ರೆಸ್) ಸೋತರೆ, ವಿಧಾನಸಭೆ ಚುನಾವಣೆಯಲ್ಲಿ ಕೇವಲ 10 ಸಾವಿರ ಮತಗಳಿಂದ ಸೋತಿದ್ದೆವು. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 25-30 ಸಾವಿರ ಮುನ್ನಡೆ ಪಡೆಯುವ ವಿಶ್ವಾಸವಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ಜನರಿಗೆ ಅರಿವಾಗಿದೆ’ ಎಂದರು.

‘ಸುರೇಶ್ ಮಾಡಿರುವ ಕೆಲಸಕ್ಕೆ ಜನ ಮತ ಹಾಕುತ್ತಾರೆ. ಜನ ಉಪಕಾರ ಸ್ಮರಣೆ ಮಾಡುತ್ತಾರೆ. ರಾಜ್ಯದಲ್ಲೂ ಜನ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ದುರ್ಬಲ ತಂತ್ರಗಾರಿಕೆ: ‘ಬಿಜೆಪಿ ಗೊಂದಲದ ಗೂಡಾಗಿದೆ. ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಸೇರಿದಂತೆ ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಏಕಾಏಕಿ ಕೈಬಿಟ್ಟಿದ್ದಾರೆ. 40 ವರ್ಷ ರಾಜಕಾರಣ ಮಾಡಿಕೊಂಡು ಬಂದವರನ್ನು ಈ ರೀತಿ ಕೈಬಿಟ್ಟರೆ ಹೇಗೆ? ಬಿಜೆಪಿ ಇಂತಹ ದುರ್ಬಲ ತಂತ್ರಗಾರಿಕೆ ಮಾಡಿದೆ. ನಮ್ಮ ಪಕ್ಷ ಭವಿಷ್ಯದಲ್ಲಿ 30-40 ವರ್ಷಗಳ ಕಾಲ ರಾಜಕಾರಣ ಮಾಡಬಲ್ಲ ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಇವರು ರಾಜಕೀಯವಾಗಿ ಪಕ್ಷಕ್ಕೆ ಅಡಿಪಾಯ ಆಗಲಿದ್ದಾರೆ’ ಎಂದರು.

ಕಾರ್ಯಕರ್ತರು ಒಂದಾಗುತ್ತಿಲ್ಲ: ಚನ್ನಪಟ್ಟಣದಿಂದ ಅಮಿತ್‌ ಶಾ ರೋಡ್ ಶೋ ನಡೆಸುತ್ತಿರುವ ಬಗ್ಗೆ ಕೇಳಿದಾಗ, ‘ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಂದಾಗಿದ್ದು, ಕಾರ್ಯಕರ್ತರು ಒಂದಾಗುತ್ತಿಲ್ಲ. ಜೆಡಿಎಸ್ ಕಾರ್ಯಕರ್ತರು ಅತಂತ್ರ ಸ್ಥಿತಿ ತಲುಪಿದ್ದಾರೆ. ಅಲ್ಲಿನ ಜನಕ್ಕೆ ಡಿ.ಕೆ. ಸುರೇಶ್ ಏನು ಎಂಬುದು ಗೊತ್ತಿದೆ. ಶಾ ಬಂದರೆ ಬಲ ಬರಬಹುದು ಎಂದು ಮಾಡುತ್ತಿದ್ದಾರೆ. ಇಬ್ಬರೂ ಸೇರಿ ಕಾರ್ಯಕರ್ತರ ಸಭೆ ಯಾಕೆ ಮಾಡಲಿಲ್ಲ? ಇವರಿಬ್ಬರೂ ಒಂದಾದ ತಕ್ಷಣ ಕಾರ್ಯಕರ್ತರು ಒಂದಾಗುತ್ತಾರಾ’ ಎಂದು ಪ್ರಶ್ನಿಸಿದರು.

ಅಪವಾದ ಬೇಡ: ನಿಶಾ ಯೋಗೇಶ್ವರ್ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದಾಗ, ‘ಆಕೆ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ನಾನು ನನ್ನ ಸಹೋದರ ಈ ವಿಚಾರವಾಗಿ ಆಲೋಚನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನಿಸಿದರೆ ಹೊರದಬ್ಬಲು ಆಗುವುದಿಲ್ಲ. ಸ್ಥಳೀಯ ನಾಯಕರ ಜೊತೆ ಚರ್ಚಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT