ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರ | ಗೆದ್ದು ಬರುವುದೊಂದೇ ಗುರಿ: ಜಗದೀಶ ಶೆಟ್ಟರ್‌

Published 25 ಮಾರ್ಚ್ 2024, 5:51 IST
Last Updated 25 ಮಾರ್ಚ್ 2024, 5:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ಟಿಕೆಟ್ ನೀಡುವ ಮೂಲಕ‌ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಮಾಡಲು ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೆ ಮುಖ್ಯಮಂತ್ರಿಯಾದವರೂ ಸೇರಿದಂತೆ ಅನೇಕ ಹಿರಿಯರು ಸಂಸದರಾಗಿ ಕೆಲಸ ಮಾಡಿದ್ದಾರೆ. ಅಂತಹ ಅವಕಾಶ ನನಗೆ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಬರುವುದೊಂದೆ ನನ್ನ ಮುಂದಿರುವ ಗುರಿ. ಕೇಂದ್ರ ಸಚಿವ ಸ್ಥಾನದ ಬಗ್ಗೆ ಯೋಚಿಸಿಲ್ಲ’ ಎಂದರು.

‘ವರಿಷ್ಠರು ಹೊಸ ಜವಾಬ್ದಾರಿ‌ ನೀಡಿದ್ದಾರೆ. ಇದರಿಂದ ಇನ್ನಷ್ಟು ಕೆಲಸ‌ ಮಾಡಲು ಹುಮ್ಮಸ್ಸು ಬಂದಿದೆ. ಬೆಳಗಾವಿಯ ಜನ, ಎಲ್ಲ ನಾಯಕರ ಬೆಂಬಲದಿಂದ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಳಗಾವಿಯ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಕಾರ್ಯಕರ್ತರು, ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ದಿ.ಸುರೇಶ ಅಂಗಡಿ ಅವರು ರೈಲ್ವೆ ಸಚಿವರಾಗಿದ್ದಾಗ ಮಾಡಿದ ಕಾರ್ಯಗಳು ಅಚ್ಚಳಿಯದೆ ಉಳಿದಿವೆ. ಅವರ ಪತ್ನಿ ಮಂಗಲಾ ಅಂಗಡಿ ಅವರು ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘ಪ್ರಭಾಕರ ಕೋರೆ, ರಮೇಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಕ್ಷೇತ್ರದ ಹಿರಿಯ ನಾಯಕರನ್ನು ಸಂಪರ್ಕಿಸಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ’ ಎಂದರು.

‘2004ರಲ್ಲಿ ವಿರೊಧ ಪಕ್ಷದ ನಾಯಕನಾಗಿದ್ದಾಗ ಬೆಳಗಾವಿಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಿದ್ದೆ. ಅಲ್ಲಿನ ಕೆಳ ಹಂತದ ಕಾರ್ಯಕರ್ತರೊಂದಿಗೆ ಸಂಪರ್ಕ ಇದೆ. ಪ್ರತಿ ಗ್ರಾಮ, ತಾಲ್ಲೂಕಿನಲ್ಲಿ ಒಡಾಡಿದ್ದೇನೆ. ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಹೀಗಾಗಿ ಅಲ್ಲಿನ ಸಮಸ್ಯೆಗಳ ಅರಿವಿದೆ’ ಎಂದರು.

‘ನರೇಂದ್ರ ಮೋದಿ ಅವರು ಹತ್ತು ವರ್ಷ ಉತ್ತಮ ಕೆಲಸ ಮಾಡಿದ್ದಾರೆ. ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಅಭಿಲಾಷೆ ಜನರದ್ದು. ಹಣ ಬಲ‌ ಸೇರಿದಂತೆ ಎಲ್ಲ‌ ಬಲಗಳನ್ನು ಎದುರಿಸಿ‌ ಗೆಲ್ಲುತ್ತೇನೆ’ ಎಂದು ಹೇಳಿದರು.

‘ಸೋಮವಾರ ಬೆಳಗಾವಿಯಲ್ಲಿ ಹೋಳಿ ಹಬ್ಬದ ಪ್ರಯುಕ್ತ‌ ಬಣ್ಣದೋಕುಳಿ ಇದೆ. ಹೀಗಾಗಿ ಮಂಗಳವಾರ ಬೆಳಗಾವಿಗೆ ಹೋಗುತ್ತೇನೆ. ಅಲ್ಲಿ ಮನೆ ನೋಡುವಂತೆ ನಮ್ಮ ಸಂಬಂಧಿಕರಿಗೆ ಹೇಳಿದ್ದೇನೆ. ಶೀಘ್ರದಲ್ಲೇ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ’ ಎಂದರು.

ಸಂಭ್ರಮಾಚರಣೆ: ಜಗದೀಶ ಶೆಟ್ಟರ್‌ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ‘ಶೆಟ್ಟರ್ ಶೆಟ್ಟರ್ ಜಗದೀಶ ಶೆಟ್ಟರ್’ ಎಂದು ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT