17ರಂದು ಸಾಗರ್ ಖಂಡ್ರೆ ಉಮೇದುವಾರಿಕೆ
ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರು ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏ. 17ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. ನಗರದ ಗಣೇಶ ಮೈದಾನದಲ್ಲಿ ಸೇರಿ ಅಲ್ಲಿಂದ ರ್‍ಯಾಲಿ ಮೂಲಕ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಪಕ್ಷದ ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರು ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ. ‘ನಮ್ಮ ಪಕ್ಷದ ಅಭ್ಯರ್ಥಿ ಪರ ಉತ್ತಮ ಪ್ರಚಾರ ನಡೆಯುತ್ತಿದೆ. ಜನ ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಗ್ಯಾರಂಟಿಗಳಿಂದ ಜನ ಸಂತುಷ್ಟರಾಗಿದ್ದಾರೆ. ಗ್ಯಾರಂಟಿಗಳ ಪ್ರಯೋಜನ ಜನರಿಗೆ ಸಿಗುತ್ತಿದೆ. ಹತ್ತು ವರ್ಷಗಳ ಭಗವಂತ ಖೂಬಾ ಅವರ ಅಧಿಕಾರ ನೋಡಿದ್ದಾರೆ. ಅದರಿಂದ ಜನರಿಗೆ ಸಂತೃಪ್ತಿ ಇಲ್ಲ. ಹೆಚ್ಚಿನ ನಿರೀಕ್ಷೆಗಳನ್ನು ಜನ ಕಾಂಗ್ರೆಸ್ ಮೇಲೆ ಇಟ್ಟುಕೊಂಡಿದ್ದಾರೆ. ತಾರಾ ಪ್ರಚಾರಕರು ಬಂದ ನಂತರ ಇನ್ನಷ್ಟು ಬೆಂಬಲ ವ್ಯಕ್ತವಾಗಲಿದೆ’ ಎಂದು ಹೇಳಿದ್ದಾರೆ.